Advertisement

‘ಯೋಗದಿಂದ ದೇಹ, ಮನಸ್ಸು  ಒಂದು’

11:33 AM Jun 22, 2018 | |

ಬೆಳ್ತಂಗಡಿ: ಪಂಚೇಂದ್ರಿಯ, ದೇಹದ ಮೇಲೆ ಹತೋಟಿ ಸಾಧಿಸಲು ಯೋಗ ಅತ್ಯವಶ್ಯ. ಯೋಗದಿಂದ ದೇಹ, ಮನಸ್ಸು ಕೂಡಿಸುವ ಕೆಲಸ ನಿರ್ವಹಿಸುತ್ತದೆ. ಉತ್ತಮ ದೇಹ ಉತ್ತಮ ಆತ್ಮವನ್ನು ಹೊಂದಿದ್ದರೆ ಮನುಷ್ಯ ಪರಿಪೂರ್ಣತೆ ಹೊಂದಲು ಸಾಧ್ಯ. ಶಾಂತಿವನದ ವತಿಯಿಂದ ಯೋಗದಲ್ಲಿ ಉನ್ನತ ಸಾಧನೆ ಮಾಡುವ ಸ್ಥಳೀಯರನ್ನು ಮುಂದಿನ ವರ್ಷದಿಂದ ಯೋಗರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.

Advertisement

ಅವರು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಮಾತನಾಡಿ, ಡಾ| ರಾಜ್‌ ಕುಮಾರ್‌ ಅವರಂತಹ ಕಲಾವಿದರೂ ಯೋಗದ ಮಹತ್ವ ಅರಿತಿದ್ದರು. ಯೋಗ ಜಾತಿ, ಧರ್ಮ, ದೇಶಗಳನ್ನೂ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದುತ್ತಿದೆ ಎಂದರು. 

ಶಾಸಕ ಹರೀಶ್‌ ಪೂಂಜ ಮಾತನಾಡಿ, ಬಹುತೇಕ ಎಲ್ಲ ರಾಷ್ಟ್ರಗಳೂ ಯೋಗವನ್ನು ಒಪ್ಪಿಕೊಂಡಿವೆ. ಪ್ರಧಾನಿ ಮೋದಿ ಅವರಿಂದಾಗಿ ಯೋಗದ ಮೂಲಕ ದೇಶಕ್ಕೆ ಜಾಗತಿಕ ಮನ್ನಣೆ ಲಭಿಸುವಂತಾಗಿದೆ.  ಮುಖ್ಯವಾಗಿ ದಕ್ಷಿಣ ಭಾರತದಲ್ಲಿಯೇ ಮೊದಲು ಈ ಯೋಗದ ಮಹತ್ವವನ್ನು ಹೆಗ್ಗಡೆಯವರು ಅರಿತು ಯೋಗದ ಮಹತ್ವ ಅರಿತಿದ್ದು ಹೆಮ್ಮೆಯ ವಿಚಾರ ಎಂದರು. 

ರಾ.ಗಾ.ಆ.ವಿ.ವಿ. ಪರೀಕ್ಷಾಂಗದ ಕುಲಸಚಿವ ಡಾ| ಎಂ.ಕೆ. ರಮೇಶ್‌ ಮಾತನಾಡಿ, ಹಲವು ವರ್ಷಗಳ ಹಿಂದೆಯೇ ಅಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಯ ಅರಿವು ದೇಶದ ಜನರಲ್ಲಿ ಇತ್ತು. ಬ್ರಿಟಿಷರಾಡಳಿತದ ವೇಳೆ ಇದನ್ನು ಕೀಳಾಗಿ ಕಾಣಲಾಯಿತು. ಇದರಿಂದಾಗಿ ಮೆಡಿಸಿನ್‌ಗಳ ಹಾವಳಿ ಹೆಚ್ಚಾಯಿತು. ಇದೀಗ ಮತ್ತೆ ನಿಧಾನವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳು ವಿಶ್ವದಾದ್ಯಂತ ಖ್ಯಾತಿ ಹೊಂದುತ್ತಿವೆ ಎಂದರು.

Advertisement

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಯೋಗದಲ್ಲಿ ಪಾಲ್ಗೊಂಡರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿ ಗಳಿಂದ ಸ್ವಚ್ಛತೆ ನಡೆಯಿತು.

ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶಕ ಕಾರ್ತಿಗೇಯನ್‌ ಮಾತನಾಡಿದರು. ಹೇಮಾವತಿ ವಿ. ಹೆಗ್ಗಡೆ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಸಿಂಡಿಕೇಟ್‌ ಬ್ಯಾಂಕ್‌ ರೀಜನಲ್‌ ಆಫೀಸ್‌ನ ಡಿಜಿಎಂ ಸಿ.ಎಂ. ತಿಮ್ಮಯ್ಯ, ರಾ.ಗಾ.ಆ.ವಿ.ವಿ. ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಡಾ| ವಸಂತ ಶೆಟ್ಟಿ, ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಶಿವ ಪ್ರಸಾದ್‌ ಶೆಟ್ಟಿ, ಸುಜಾತಾ ಉಪಸ್ಥಿತರಿದ್ದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಪ್ರಶಾಂತ್‌ ಶೆಟ್ಟಿ ಸ್ವಾಗತಿಸಿ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ. ಶಶಿಕಾಂತ್‌ ಜೈನ್‌ ವಂದಿಸಿದರು. ಡಾ| ಜಾಸ್ಮಿನ್‌ ಡಿ’ಸೋಜಾ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next