ಸಚಿವ, ನಟ ಬಿ.ಸಿ.ಪಾಟೀಲ್ ನಿರ್ಮಾಣ, ಯೋಗರಾಜ್ ಭಟ್ ನಿರ್ದೇಶನದ “ಗರಡಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಚಿಕ್ಕಜಾಲದ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಚಿತ್ರತಂಡ ಕುಸ್ತಿ ದೃಶ್ಯಗಳನ್ನು ಚಿತ್ರೀಕರಿಸಿದೆ. ಬಿಸಿಲ ಬೇಗೆಯನ್ನು ಲೆಕ್ಕಿಸದೇ ನಾಯಕ ಹಾಗೂ ವಿಲನ್ ನಡುವಿನ ಕುಸ್ತಿಯ ದೃಶ್ಯವನ್ನು ಚಿತ್ರೀಕರಿಸಿಕೊಂಡಿತು ತಂಡ.
ಚಿತ್ರದ ಬಗ್ಗೆ ಮಾತನಾಡುವ ಭಟ್, “ನಾನು ಬರೆದ ಕಥೆಯಲ್ಲಿ ನನಗೆ ತುಂಬಾ ಇಷ್ಟವಾದ ಕಥೆ. ಗರಡಿ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದ ಯುವಕನೊಬ್ಬನ ಕಥೆ. ಏಕಲವ್ಯನಂತಹ ಯುವಕನ ಕಥೆ ಎನ್ನಬಹುದು. ಗರಡಿ ಮನೆಯಿಂದ ಆತನನ್ನು ಹೊರ ಹಾಕಿದ ನಂತರ ಏನಾಗುತ್ತದೆ ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆ’ ಎಂದರು.
ಸಚಿವ ಬಿ.ಸಿ.ಪಾಟೀಲ್ ಅವರು “ಗರಡಿ’ ಚಿತ್ರದ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರೆ. ಇಲ್ಲಿ ಅವರು ಗರಡಿ ಮನೆಯ ಕುಸ್ತಿ ಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಇದು ನನ್ನ ಪ್ರೊಡಕ್ಷನ್‌ನ 16ನೇ ಸಿನಿಮಾ. ಈ ಕಥೆ ಚೆನ್ನಾಗಿದೆ. ಮುಂದೆಯೂ ನಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಲಿದ್ದೇವೆ’ ಎಂದರು.
ಇದನ್ನೂ ಓದಿ:ಚಿತ್ರವಿಮರ್ಶೆ: ಸಂಸಾರದ ‘ರಾಜಿ’ ಸೂತ್ರ
ಚಿತ್ರದ ವಿಲನ್ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಅಳಿಯ ಸುಜಯ್ ಬೇಲೂರು ನಟಿಸುತ್ತಿದ್ದಾರೆ. ಉಳಿದಂತೆ ನಾಯಕರಾಗಿ ಯಶಸ್ ಸೂರ್ಯ, ನಾಯಕಿ ಸೋನಾಲ್ ಮೊಂತೆರೋ, ರವಿಶಂಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.