ಈಗಾಗಲೇ ಬಹಳಷ್ಟು ಮಂದಿ ಸಂಭಾಷಣೆಗಾರರು ನಿರ್ದೇಶನಕ್ಕಿಳಿದಿದ್ದಾಗಿದೆ. ಈಗ ಮತ್ತೂಬ್ಬ ಸಂಭಾಷಣೆಗಾರನ ಸರದಿ.ಹೌದು, ಇದುವರೆಗೆ ಸುಮಾರು ಹದಿಮೂರು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿ ರುವ ಯೋಗಾನಂದ ಮುದ್ದಾನ್ ಇದೇ ಮೊದಲ ಸಲ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಶರಣ್ ಹೀರೋ. ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಇದೊಂದು ಫ್ಯಾಮಿಲಿ ಡ್ರಾಮ ಎಂಬುದು ಯೋಗಾನಂದ್ ಮುದ್ದಾನ್ ಮಾತು. ಪೀಪಲ್ ಮೀಡಿಯ ಟೆಕ್ ಎಂಬ ಸಾಫ್ rವೇರ್ ಕಂಪೆನಿಯ ವಿಶ್ವ ಹಾಗೂ ವಿವೇಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ “ಅಲಾ ಮೊದಲಯಂದಿ’ ಮತ್ತು “ಕೇಶವ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು, ಹೊಸಬರನ್ನು ಪರಿಚಯಿಸುತ್ತಿರುವ ನಿರ್ಮಾಪಕರೂ, ಯೋಗಾನಂದ್ ಮುದ್ದಾನ್‌ಗೂ ನಿರ್ದೇಶನ ಮಾಡುವ ಅವಕಾಶ ಕೊಟ್ಟಿದ್ದಾರೆ. ಸದ್ಯಕ್ಕೆ ಶರಣ್ ಹೀರೆ. ಹರಿಕೃಷ್ಣ ಸಂಗೀತ ಕೊಡುತ್ತಿದ್ದಾರೆ ಅನ್ನುವುದು ಬಿಟ್ಟರೆ, ಚಿತ್ರಕ್ಕೆ ನಾಯಕಿ ಯಾರು, ಕ್ಯಾಮೆರಾ ಯಾರು ಹಿಡಿಯಲಿದ್ದಾರೆ, ಉಳಿದ ತಾರಾಬಳಗದಲ್ಲಿ ಯಾರ್ಯಾರು ಇರುತ್ತಾರೆ ಎಂಬ ಕುರಿತು ಈಗಷ್ಟೇ ಚರ್ಚೆ ನಡೆಸುತ್ತಿದ್ದಾರೆ ಯೋಗಾನಂದ್ ಮುದ್ದಾನ್.
ಯೋಗಾನಂದ್ ಮುದ್ದಾನ್ “ಬಿರುಗಾಳಿ’ ಮೂಲಕ ಸಂಭಾಷಣೆಗಾರರಾಗಿ ಗುರುತಿಸಿಕೊಂಡವರು.ಅದಕ್ಕೂ ಮುನ್ನ “ಆಪ್ತಮಿತ್ರ’ ಚಿತ್ರದ ಕೆಲ ಸೀನ್‌ಗಳಿಗೂ ಸಂಭಾಷಣೆ ಬರೆದಿದ್ದರು. ಆ ಬಳಿಕ “ತುಘಲಕ್’, “ಚಾರುಲತಾ’, “ಚಿಂಗಾರಿ’, “ವಜ್ರಕಾಯ’, “ಭಜರಂಗಿ’, “ಮುಕುಂದ ಮುರಾರಿ’, “ಚೌಕ’, “ಕಲಾಕಾರ್’ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ರಿಲೀಸ್ ಗೆ ರೆಡಿಯಾಗಿರುವ “ಟೈಗರ್’ ಮತ್ತು ಚಿತ್ರೀಕರಣದಲ್ಲಿರುವ “ವಿಐಪಿ’ ಚಿತ್ರಕ್ಕೂ ಇವರದೇ ಮಾತುಗಳಿವೆ. ಯೋಗಾನಂದ್‌ಗೆ ಮೊದಲ ನಿರ್ದೇಶನ ಮಾಡಿದರೆ, ಅದು ಶರಣ್‌ಗೆ ಮಾಡಬೇಕು ಅಂತ ನಿರ್ಧರಿಸಿದ್ದರಂತೆ. ಮೂರು ವರ್ಷಗಳ ಹಿಂದೆಯೇ ಆ ಕುರಿತು ಮಾತುಕತೆ ಆಗಿತ್ತಂತೆ. ಕಾರಣಾಂತರದಿಂದ ಇಬ್ಬರು ಸೇರಿ ಸಿನಿಮಾ ಮಾಡಲು ಆಗಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂದಿದೆಯಂತೆ.
ಇಡೀ ಸಿನಿಮಾ ಅಮೇರಿಕಾದಲ್ಲಿ ನಡೆಯಲಿದ್ದು, ಕ್ಲೈಮ್ಯಾಕ್ಸ್ ಭಾಗ ಇಲ್ಲಿ ನಡೆಯಲಿದೆಯಂತೆ. ಶರಣ್ ಗೆ ಇದು ಹೊಸ ಜಾನರ್ ಸ್ಟೋರಿಯಾಗಿದ್ದು, ಸಿಂಗಲ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲೂ ಜನರನ್ನು ಸೆಳೆಯೋ ಚಿತ್ರಕ್ಕೆ ಕೈ ಹಾಕಿರುವ ಯೋಗಾನಂದ್ ಮುದ್ದಾನ್ ಜತೆಗೆ ಚಿತ್ರಕಥೆಯಲ್ಲಿ ಜನಾರ್ದನ್ ಮಹರ್ಷಿ ಸಾಥ್ ಕೊಡುತ್ತಿದ್ದಾರಂತೆ. ಕೆ.ಎಂ.ಪ್ರಕಾಶ್ ಕತ್ತರಿ ಪ್ರಯೋಗ ಇರಲಿದೆ. ಇನ್ನು, ಚಿತ್ರಕ್ಕೆ ಜುಲೈ ಅಂತ್ಯದಲ್ಲಿ ಚಾಲನೆ ಸಿಗಲಿದೆ.