ಸ್ಪರ್ಧಾತ್ಮಕ ಯುಗದಲ್ಲಿ ನಾವಿರುವುದರಿಂದ ಪರೀಕ್ಷೆ ಬಂತೆಂದಾಗ ವಿದ್ಯಾರ್ಥಿಗಳಲ್ಲಿ ಸಹಜವಾಗಿ ನಿದ್ರೆ, ಶಕ್ತಿಯ ನಷ್ಟ, ಏಕಾಗ್ರತೆಯ ಕೊರತೆ, ಒತ್ತಡ,
ಭಯ ಮೊದಲಾದವುಗಳಿಗೆ ಕಾರಣವಾಗುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಪರೀಕ್ಷಾ ಮುನ್ನಾದಿನ ಓದಿರುವ ಅಷ್ಟೂ ವಿಷಯಗಳು ಪರೀಕ್ಷೆ ಕೊಠಡಿಗೆ ತೆರಳಿದಾಗ ಮರೆತು ಬಿಡುತ್ತದೆ. ಈ ಮರೆವನ್ನು ನೀಗಿಸಲು ಮತ್ತು ಉಲ್ಲಾಸ ಭರಿತ ಓದಿಗಾಗಿ
ಯೋಗದಲ್ಲಿ ಪರಿಹಾರ ಇದೆ.
ಅಧ್ಯಯನ ಮಾಡಿದ ಅಷ್ಟೂ ವಿಷಯಗಳನ್ನು ನೆನಪಿನಲ್ಲಿಡಲು ಯೋಗ, ಧ್ಯಾನ, ಮುದ್ರೆಗಳು ಸಹಕಾರಿಯಾಗಿವೆ. ಮುದ್ರಾಥೆರಪಿ ಎನ್ನುವುದು ಮತ್ತೂಂದು ಅನೌಷಧೀಯ ಚಿಕಿತ್ಸೆಯಾಗಿದೆ. ಕೈಯಲ್ಲಿನ ಐದು ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ.
ಪ್ರತಿಯೊಂದು ಬೆರಳು ತನ್ನದೇ ಆದ ಶಕ್ತಿ ಚೈತನ್ಯವನ್ನು ಹೊಂದಿದೆ. ಎಲ್ಲ ಬೆರಳುಗಳೂ ಚೇತನದಾಯಕವಾಗಿದ್ದು, ಅವು ದೇಹಕ್ಕೆ ಚೈತನ್ಯವನ್ನು ತುಂಬುತ್ತವೆ. ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಖಾಲಿ ಹೊಟ್ಟೆಯಲ್ಲಿ ಉಸಿರನ್ನು ಗಮನಿಸುವ ಸಲುವಾಗಿ 15 ನಿಮಿಷ ಧ್ಯಾನ ಮಾಡಿ. ಇದರಿಂದ ಏಕಾಗ್ರತೆ ವೃದ್ಧಿಸುತ್ತದೆ.
ಬಳಿಕ ಸುಖಪ್ರಾಣಾಯಾಮವನ್ನು ಅಭ್ಯಾಸ ನಡೆಸಬೇಕು. ಇದರಿಂದ ಓದಲು ಸರಿಯಾದ ವಾತಾವರಣಕ್ಕೆ ಮನಸ್ಸು ಮತ್ತು ಆಸಕ್ತಿ ಬರುತ್ತದೆ. ಏಕಾಗ್ರತೆ ದೊರಕುತ್ತದೆ. ಇನ್ನು ಯೋಗದಲ್ಲಿನ ಮುದ್ರೆಗಳು ಧ್ಯಾನವನ್ನು ಕೇಂದ್ರೀಕರಿಸಲು ನೆರವಾಗುತ್ತದೆ. ಚಿನ್‌ಮುದ್ರೆ, ಹಕಿನಿಮುದ್ರೆ, ಪ್ರಾಣಮುದ್ರೆ ತಲಾ ಹತ್ತು ನಿಮಿಷ ಅಭ್ಯಾಸ ಮಾಡಬಹುದು. ಇವುಗಳನ್ನು ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ.