Advertisement

3 ಸಾವಿರ ವಿದ್ಯಾರ್ಥಿಗಳಿಂದ ಯೋಗನಮನ

01:05 AM Jun 27, 2019 | Lakshmi GovindaRaj |

ಬೆಂಗಳೂರು: ಆಗಸದಲ್ಲಿ ಕರಿ ಮೋಡಗಳ ಕಾರುಬಾರು. ಹಿತವಾದ ಗಾಳಿ, ನವಿರಾದ ಸಂಗೀತ, ತಂಪಾದ ವಾತಾವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೂರ್ಯನಿಗೆ ನಮನ ಅರ್ಪಿಸಿದರು.

Advertisement

ನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಅದಮ್ಯ ಚೇತನ ಮತ್ತು ಬಿಎನ್‌ಎಂ ತಾಂತ್ರಿಕ ವಿದ್ಯಾಲಯ ಜಂಟಿಯಾಗಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಣ್ಣರು ಸಾಮೂಹಿಕವಾಗಿ ಕಟಿಬದ್ಧಾಸನ, ಸೇತುಬಂಧಾಸನ, ವಜ್ರಾಸನ, ವಕ್ರಾಸನ, ಶಶಾಂಕಾಸನ, ತ್ರಿಕೋನಾಸನ, ಸುಖಾಸನ ಮಾಡುವುದನ್ನು ಕಂಡು ಸಾರ್ವಜನಿಕರು ಖುಷಿ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಯೋಗಪಟುಗಳು, ಹಿರಿಯ ನಾಗರಿಕರು, ಬಿಬಿಎಂಪಿ ಸದಸ್ಯರು ಮಕ್ಕಳೊಂದಿಗೆ ಯೋಗಾಸನ ಮಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 28 ಶಾಲೆಗಳ 3 ಸಾವಿರ ವಿದ್ಯಾರ್ಥಿಗಳು ಬಿಳಿ ಟೀ ಶರ್ಟ್‌ ಧರಿಸಿ ಏಕ ರೀತಿಯಾಗಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಮೊದಲ ಬಾರಿಗೆ ಯೋಗ ಮಾಡುವ ಮಂದಿ ಬೆನ್ನ ಹಿಂದೆ ಕೈ ಜೋಡಿಸಿ, ಅರ್ಧ ಬೆನ್ನು ಕೆಳಗೆ ಭಾಗಿಸುವಾಗ ಉಸ್ಸೆಂದು ಉಸಿರು ಬಿಡುತ್ತಿದ್ದರೆ, ಯೋಗಪಟುಗಳು ಲೀಲಾಜಾಲವಾಗಿ ಅರ್ಧ ಬೆನ್ನು ಬಾಗಿಸಿ, ಕಣ ಕಾಲನ್ನು ಹಿಡಿದು ಅರ್ಧಚಕ್ರಾಸನ ಪ್ರದರ್ಶಿಸಿದಾಗ ಅನೇಕರು ಅಚ್ಚರಿಯಿಂದ ನೋಡಿದರು. ಹಸ್ತ ಉತ್ಥಾನಾಸನ, ಹಸ್ತ ಪದ್ಮಾಸನ, ಭುಜಂಗಾಸನ, ವೃಕ್ಷಾಸನಗಳನ್ನು ನೀರು ಕುಡಿದಂತೆ ಸರಗವಾಗಿ ಮಾಡುವುದನ್ನು ನೋಡಿ ಕ್ರೀಡಾಂಗಣದಲ್ಲಿ ಸೇರಿದ ಮಂದಿ ಬೆರಗಾದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ವಿಶ್ವದ 200ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಯೋಗಭ್ಯಾಸ ಮಾಡಲಾಗುತ್ತಿದೆ. ಅವರೆಲ್ಲರೂ ಭಾರತ ಹಾಗೂ ನಮ್ಮ ಋಷಿ ಮುನಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಿಶ್ವ ಯೋಗ ದಿನಾಚರಣೆ ಕೇವಲ ಸಾಂಕೇತಿಕವಾಗಬಾರದು. ಪ್ರತಿನಿತ್ಯ ಯೋಗವನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದರು.

Advertisement

ಆಧುನಿಕ ಜೀವನ ಶೈಲಿಗೆ ಒಳಗಾಗಿರುವ ಮಂದಿ ಆರೋಗ್ಯದ ಬಗ್ಗೆ ಗಮನ ಹರಿಸುವುದನ್ನು ಮರೆತ್ತಿದ್ದಾರೆ. ದೇಹದ ಬಗ್ಗೆ ಗಮನ ನೀಡುವಷ್ಟರಲ್ಲಿ ಆರೋಗ್ಯ ಹದಗೆಟ್ಟಿರುತ್ತದೆ. ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ಆರೋಗ್ಯದ ಬಗ್ಗೆ ಹಾಗೂ ದೇಹದ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ವ್ಯಕ್ತಿ ದೇಶದ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸುತ್ತಾನೆ ಎಂದು ಹೇಳಿದರು.

ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ವಿಶ್ವದಾದ್ಯಂತ ಎಲ್ಲೆಡೆ ಯೋಗವನ್ನು ಹಬ್ಬವಾಗಿ ಆಚರಿಸಲಾಗುತ್ತಿದೆ. ಇದನ್ನು ಸರ್ಕಾರಿ ಶಾಲೆ ಮಕ್ಕಳಿಗೂ ತಲುಪಿಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ತೇಜಸ್ವಿನಿ ಅನಂತಕುಮಾರ್‌, ಚಕ್ರವರ್ತಿ ಸೂಲಿಬೆಲೆ ಮಕ್ಕಳೊಂದಿಗೆ ಯೋಗಾಭ್ಯಾಸ ಮಾಡಿ ಗಮನ ಸೆಳೆದರು. ರಾಮಕೃಷ್ಣ ಮಠದ ಶ್ರೀ ತದ್ಯುಕ್ತಾನಂದ ಮಹಾರಾಜ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next