Advertisement
ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಗುರುವಾರ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶಪ್ಪ ಮಾತನಾಡಿ, ಸದೃಢ ಆರೋಗ್ಯ ಕಾಪಾಡಲು, ದೇಹಕ್ಕಂಟಿದ ರೋಗಗಳ ನಿವಾರಣೆಗೆ ಯೋಗವೇ ದಿವ್ಯ ಔಷಧ. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ವೈದ್ಯರ ಬಳಿಗೆ ತೆರಳುವ ಅನಿವಾರ್ಯತೆಯೇ ಬರುವುದಿಲ್ಲ.
ಕಾಯಿಲೆಗಳನ್ನು ದೂರ ಮಾಡುವ ಶಕ್ತಿ ಇದೆ. ಯಾವ ವ್ಯಕ್ತಿ ಯೋಗ ಸಾಧನೆ ಮಾಡುವನೋ ಆತನ ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನವನ್ನು ಕಳೆದ ನಾಲ್ಕು ವರ್ಷದಿಂದ ವಿಶ್ವದ ಎಲ್ಲ ರಾಷ್ಟ್ರಗಳು ಆಚರಿಸುತ್ತಿವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿನಿತ್ಯ 3ರಿಂದ 4 ಜನರಲ್ಲಿ ಒಬ್ಬರು ಖನ್ನತೆಯಿಂದ ಬಳಲುತ್ತಿದ್ದಾರೆ. ನಿತ್ಯ ಯೋಗ ಮಾಡುವುದರಿಂದ ಖನ್ನತೆಯಿಂದ ದೂರವಿರಬಹುದು ಎಂದರು.
Related Articles
Advertisement
ಯೋಗ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಿ.ಕಿಶೋರಬಾಬು, ಅಪರ ಜಿಲ್ಲಾಧಿಕಾರಿ ಜಿ.ಗೋವಿಂದರೆಡ್ಡಿ, ಕೆಜಿಎಎಂಒ ರಾಜ್ಯಾಧ್ಯಕ್ಷ ಆಯುಷ್ ಡಾ| ಶಂಕರಗೌಡ ಎಸ್ .ಪಾಟೀಲ, ಜಿಲ್ಲಾ ಆಯುಷ್ ಅಧಿಕಾರಿ ಡಾ| ರೂಪಾಬಾಯಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧೆಡೆ ಯೋಗ ದಿನಾಚರಣೆ: ಜಿಲ್ಲಾ ಕಾರಾಗೃಹದಲ್ಲೂ ಯೋಗ ದಿನ ಆಚರಿಸಲಾಯಿತು. ಆಯುಷ್ ಜಿಲ್ಲಾಧಿಕಾರಿ ಡಾ| ರೂಪಾಬಾಯಿ ಕಾರ್ಯಕ್ರಮ ಉದ್ಘಾಟಿಸಿದರು. ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೂ ಯೋಗ ದಿನಾಚರಣೆ ನಡೆಯಿತು. ಸಂಸ್ಥೆ ಮುಖ್ಯಸ್ಥ ಎಸ್.ಆರ್.ರೆಡ್ಡಿ ನೇತೃತ್ವದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಸೋಮಸುಭದ್ರಮ್ಮ ರಾಮನಗೌಡ ಮಹಿಳಾ ವಿದ್ಯಾಲಯದಲ್ಲೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಯೋಗ ದಿನ ಆಚರಿಸಲಾಯಿತು. ಸಂಸ್ಥೆ ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ ಯೋಗದ ಕುರಿತು ಉಪನ್ಯಾಸನೀಡಿದರು.