Advertisement

ಯೋಗ ತಾಲೀಮಿಗೆ ನೀರಸ ಪ್ರತಿಕ್ರಿಯೆ

09:16 PM Jun 09, 2019 | Team Udayavani |

ಮೈಸೂರು: ಮೈಸೂರಿನಲ್ಲಿ ಈ ಬಾರಿ ಯೋಗ ಪ್ರದರ್ಶಿಸುವ ಮೂಲಕ ಗಿನ್ನಿಸ್‌ ದಾಖಲೆ ಮಾಡಲು ಸಜ್ಜಾಗಿದ್ದರು. ಆದರೆ, ಗಿನ್ನಿಸ್‌ ದಾಖಲೆಗೆ ಅರ್ಜಿ ಸಲ್ಲಿಸದಿರಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದ ಬೆನ್ನಲ್ಲೇ ಯೋಗ ತಾಲೀಮಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಕಳೆದ ನಾಲ್ಕು ವಾರಗಳಿಂದ ಮೈಸೂರಿನ ವಿವಿಧ ಉದ್ಯಾನವನಗಳಲ್ಲಿ ನಗರದ ಹಲವು ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಯೋಗ ತಾಲೀಮು ನಡೆಸಿದ್ದವು. ಅಂದರಂತೆಯೇ ಭಾನುವಾರವೂ ಅರಮನೆ ಒಳ ಆವರಣದಲ್ಲಿ ಯೋಗ ಪಟುಗಳು ತಾಲೀಮಿನಲ್ಲಿ ಭಾಗವಹಿಸಿದ್ದರು.

2017ರಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಡೆದಿದ್ದ ಯೋಗ ಪ್ರದರ್ಶದಲ್ಲಿ ಒಟ್ಟು 55,506 ಮಂದಿ ಪಾಲ್ಗೊಂಡು ಗಿನ್ನಿಸ್‌ ಪುಸ್ತಕದಲ್ಲಿ ದಾಖಲೆ ನಿರ್ಮಿಸಿದ್ದರು. ಬಳಿಕ ರಾಜಸ್ಥಾನದ ಕೋಟಾದಲ್ಲಿ 2018ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 1,00,984 ಮಂದಿ ಭಾಗವಹಿಸಿ ಮೈಸೂರಿನ ಗಿನ್ನಿಸ್‌ ದಾಖಲೆಯನ್ನು ಅಳಿಸಲಾಗಿತ್ತು.

ಜಿಲ್ಲಾಡಳಿತ ನಿರ್ಧಾರ: ಈ ಹಿನ್ನೆಲೆಯಲ್ಲಿ ಈ ಬಾರಿ ಕೋಟಾ ದಾಖಲೆಯನ್ನು ಮುರಿಯಬೇಕೆಂದು ಮೈಸೂರಿನ ಸಂಘ ಸಂಸ್ಥೆಗಳು ಮತ್ತೆ ತಯಾರಿ ನಡೆಸಿದ್ದವು. ಆದರೆ, ಮೈಸೂರು ಜಿಲ್ಲಾಡಳಿತ ಈ ಬಾರಿ ಗಿನ್ನಿಸ್‌ ದಾಖಲೆಗೆ ಹೋಗದಿರಲು ನಿರ್ಧಸಿರುವುದಾಗಿ ಪ್ರಕಟಿಸಿತು. ಈ ಹೇಳಿಕೆ ಬೆನ್ನಲ್ಲೇ ಯೋಗ ಪಟುಗಳು ನಿರಾಸೆಗೊಂಡಿದ್ದಾರೆ.

ಅಧಿಕಾರಿಗಳ ಗೈರು: ಪರಿಣಾಮ ಮೈಸೂರು ಅರಮನೆ ಅಂಗಳದಲ್ಲಿ ನಡೆದ ಯೋಗ ತಾಲೀಮಿಗೆ ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಯೋಗಪಟುಗಳು ಭಾಗವಹಿಸಲಿಲ್ಲ. ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸಹ ಯೋಗ ತಾಲೀಮಿನ ಕಡೆ ಮುಖ ಹಾಕದಿದ್ದದ್ದು ಯೋಗಪಟುಗಳಲ್ಲಿ ಸಹಜವಾಗಿ ಬೇಸರ ತರಿಸಿತು.

Advertisement

ಮೈಸೂರು ಅರಮನೆ ಆವರಣದಲ್ಲಿ ಭಾನುವಾರ ತಾಲೀಮು ನಡೆದಿದ್ದು, ರೇಸ್ಕೋರ್ಸ್‌ ಆವರಣದಲ್ಲಿ ಜೂನ್‌ 16ರಂದು ಸಾಮೂಹಿಕ ಯೋಗ ಪ್ರದರ್ಶನದ ರಿಹರ್ಸಲ್‌ ನಡೆಯಲಿದೆ. ಜೂನ್‌ 21ರಂದು ನಡೆಯುವ ಯೋಗ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಈ ತಾಲೀಮು ನಡೆಯಲಿದೆ.

ವಿವಿಧ ಆಸನ: ಭಾನುವಾರ ಅರಮನೆ ಆವರಣದಲ್ಲಿ ನಡೆದ ಯೋಗ ರಿಯರ್ಸಲ್‌ನಲ್ಲಿ ಮೊದಲಿಗೆ ಚಾಲನಾ ಕ್ರಿಯೆ, ಬಳಿಕ ವಿವಿಧ ಆಸನಗಳು, ಪ್ರಾಣಾಯಾಮ, ಧ್ಯಾನ, ಸಂಕಲ್ಪ ನಡೆಯಿತು. ಯೋಗ ಫೆಡರೇಷನ್‌ ಆಫ್ ಮೈಸೂರು ಆಶ್ರಯಲ್ಲಿ ವಿವಿಧ ಯೋಗ ಸಂಘಟನೆಗಳ ಮುಖ್ಯಸ್ಥರು ತಾಲೀಮು ನಡೆಸಿಕೊಟ್ಟರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಸೀತಾಲಕ್ಷ್ಮೀ, ಜಿಎಸ್‌ಎಸ್‌ನ ಶ್ರೀಹರಿ, ಯೋಗ ಶಿಕ್ಷಕರಾದ ಶಶಿಕುಮಾರ್‌, ಡಾ.ಗಣೇಶ್‌, ಕಾಳಾಜಿ, ವೆಂಕಟೇಶ್‌, ದೇವಿಕಾ, ಕಾಂಚನಗಂಗಾ, ಜಾಹ್ನವಿ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next