ವಿಜಯಪುರ: ಜಿಲ್ಲೆಯಲ್ಲಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಕೊರೊನಾ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ.
ಹೀಗಾಗಿ ಸರ್ಕಾರ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ನಿರ್ಬಂಧಿ ಸಿದ್ದರಿಂದ ಯೋಗಾಸಕ್ತರು ತಮ್ಮ ಮನೆಗಳಲ್ಲಿ, ಸ್ನೇಹಿತರೊಂದಿಗೆ ಅಲ್ಲಲ್ಲಿ ಕೂಡಿಕೊಂಡು ಸಾಂಕೇತಿಕವಾಗಿ ಯೋಗ ಪ್ರದರ್ಶನದ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು.
ಮುದ್ದೇಬಿಹಾಳ: ಭಾರತದ ಸನಾತನ ಪರಂಪರೆಯಾಗಿರುವ ಯೋಗಕ್ಕೆ ವಿಶ್ವಮನ್ನಣೆ ದೊರಕಿಸಿಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಯೋಗ ಗುರುಮಾತೆ ಪ್ರೇಮಾ ಗುಡದಿನ್ನಿ ಹೇಳಿದರು. ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ರವಿವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಅದರಲ್ಲೂ ಮುಖ್ಯವಾಗಿ ಸಂಸಾರದ ಜಂಜಾಟದಲ್ಲಿರುವ ಮಹಿಳೆಯರು ಕಡ್ಡಾಯವಾಗಿ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮುದ್ದೇಬಿಹಾಳ ಪಟ್ಟಣದಲ್ಲಿ ಮಹಿಳೆಯರಿಗಾಗಿಯೇ ನಿತ್ಯವೂ ಯೋಗಾಭ್ಯಾಸ ಹೇಳಿಕೊಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ವೇಳೆ ಪ್ರೇಮಾ ಅವರನ್ನು ಮಹಿಳೆಯರು ಗೌರವಿಸಿದರು. ರೂಪಾ ದೇಸಾಯಿ, ಸಂಗಮ್ಮ ದೇವರಳ್ಳಿ, ಅನುರಾಧಾ ಪ್ಯಾಟಿಗೌಡರ, ವಿಜಯಾ ಚೌಧರಿ, ಸರಸ್ವತಿ ಬಿರಾದಾರ, ಶಾರದಾ ಸಜ್ಜನ, ಗೀತಾ ಹುರಕಡ್ಲಿ, ಹೇಮಾ ಇದ್ದರು. ಇದಕ್ಕೂ ಮುನ್ನ ಒಂದು ಗಂಟೆ ಕಾಲ ಯೋಗಾಭ್ಯಾಸ ನಡೆಸಿ ಯೋಗ ದಿನ ಆಚರಿಸಲಾಯಿತು.