Advertisement

ಏಕಕಾಲಕ್ಕೆ 60 ಸಾವಿರ ಮಂದಿಯಿಂದ ಯೋಗ

12:44 PM Jun 22, 2018 | Team Udayavani |

ಮೈಸೂರು: ದೇಶದ ಯೋಗ ನಗರಿ ಎಂದೇ ಗುರುತಿಸಲ್ಪಟ್ಟಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾವಿರಾರು ಯೋಗಪಟುಗಳು ಏಕಕಾಲದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ನಗರದ ರೇಸ್‌ಕೋರ್ಸ್‌ ಆವರಣದಲ್ಲಿ ನಡೆದ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ವಿವಿಧ ವಯೋಮಾನದ ಯೋಗಾಸಕ್ತರು ಯೋಗದಿನಕ್ಕೆ ಮೆರಗು ತಂದರು. 

Advertisement

ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸುವ ಮೂಲಕ ಕಾರ್ಯಕ್ರಮ ತುಂತುರು ಮಳೆ, ಕೊರೆಯುವ ಚಳಿಯನ್ನು ಲೆಕ್ಕಿಸದ ಅಸಂಖ್ಯಾತ ಯೋಗಾಸಕ್ತರು ಮುಂಜಾನೆ 5 ಗಂಟೆಯಿಂದಲೇ ರೇಸ್‌ಕೋರ್ಸ್‌ ಅಂಗಳಕ್ಕೆ ಬಂದು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಲು ನಗರಾದ್ಯಂತ 138 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. 

ಯೋಗ ಪೂರ್ವಾಭ್ಯಾಸ: ಗುರುವಾರ ಬೆಳಗ್ಗೆ 6.15ಕ್ಕೆ ಯೋಗ ಪ್ರದರ್ಶನದ ಪೂರ್ವಾಭ್ಯಾಸ ಆರಂಭಿಸಿದರು. ಬಳಿಕ 6.50ರ ವೇಳೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಅಧಿಕಾರಿಗಳು ರೇಸ್‌ಕೋರ್ಸ್‌ ಮೈದಾನಕ್ಕೆ ಆಗಮಿಸಿದರು. ಬಳಿಕ ಬೆಳಗ್ಗೆ 7 ಗಂಟೆಗೆ  4ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಆಸನಗಳ ಪ್ರದರ್ಶನ: ಸಾಮೂಹಿಕ ಯೋಗ ಪ್ರದರ್ಶನದ ಪೂರ್ವಾಭ್ಯಾಸ ಮುಕ್ತಾಯವಾದ ಬೆನ್ನಲ್ಲೆ “ಸಂಗಚಧ್ವಂ, ಸಂವದಧ್ವ ಸಂವೋ ಮನಾಂಸಿ ಜಾನತಾಮ್‌, ದೇವಾಭಾಗಂ ಯಥಾಪೂರ್ವೇ ಸಂಜಾನಾನಾ ಉಪಾಸತೆ’ ಪ್ರಾರ್ಥನೆಯೊಂದಿಗೆ ಮುಖ್ಯ ಪ್ರದರ್ಶನ ಆರಂಭಗೊಂಡಿತು. ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಅದಾದ ಬಳಿಕ 14 ನಿಮಿಷಗಳ ಕಾಲಾ ಯೋಗಬಂಧುಗಳು ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭಾಮರೀ ಪ್ರಾಣಾಯಾಮದ ಜತೆಗೆ ಧ್ಯಾನ ಮಾಡಿದರು. 

ಗಣ್ಯರ ಯೋಗ ಪ್ರದರ್ಶನ: 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರು, ಯೋಗಪಟುಗಳ ಜತೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಸಂಸದ ಪ್ರತಾಪ್‌ಸಿಂಹ, ಶಾಸಕರಾದ ರಾಮದಾಸ್‌, ನಾಗೇಂದ್ರ, ರಾಜವಂಶಸ್ಥ ಯದುವೀರ್‌ ಒಡೆಯರ್‌, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಜಿಲ್ಲಾಧಿಕಾರಿ ಅಭಿರಾಂ ಶಂಕರ್‌, ಸುತ್ತೂರು ಮಠದ ಕಿರಿಯ ಶ್ರೀ ಜಯರಾಜೇಂದ್ರ ಸ್ವಾಮೀಜಿ ಸೇರಿದಂತೆ ಹಲ ಅಧಿಕಾರಿಗಳು ಪ್ರತ್ಯೇಕ ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡಿದರು. 

Advertisement

ಇನ್ನೂ ಕಳೆದ ವರ್ಷ ಅಂತಾರಾಷ್ಟ್ರೀಯ ಯೋಗ ದಿನದ ಪ್ರದರ್ಶನದಲ್ಲಿ ಗಿನ್ನಿಸ್‌ ದಾಖಲೆ ನಿರ್ಮಿಸಲು ಶ್ರಮಿಸಿದ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಡಿ.ರಂದೀಪ್‌ ಸಾರ್ವಜನಿಕರ ಸಾಲಿನಲ್ಲಿ ಕುಳಿತ ಯೋಗ ಪ್ರದರ್ಶನ ನೀಡಿ ಗಮನ ಸೆಳೆದರು. ಇವರೊಂದಿಗೆ ವಿವಿಧ ಯೋಗಶಾಲೆಗಳ ಯೋಗಪಟುಗಳು, ಸಾರ್ವಜನಿಕರು, ಶಾಲಾ -ಕಾಲೇಜು, ವಿದೇಶಿಗರು ಯೋಗಪ್ರದರ್ಶನದಲ್ಲಿ ಕಾಣಿಸಿಕೊಂಡರು. 

ಪ್ರತ್ಯೇಕ ಬ್ಲಾಕ್‌ ನಿರ್ಮಾಣ: ರೇಸ್‌ಕೋರ್ಸ್‌ ಅಂಗಳದಲ್ಲಿ ಯೋಗಾಸಕ್ತರಿಗೆ ಒಂದು ಬ್ಲಾಕ್‌ನಲ್ಲಿ 1200 ಮಂದಿ ಕುಳಿತುಕೊಳ್ಳುವ ಅವಕಾಶವಿರುವ 70 ಹಾಗೂ 300 ಮಂದಿ ಕೂರಬಹುದಾದ 280 ಚಿಕ್ಕ ಬ್ಲಾಕ್‌ಗಳನ್ನು ಮಾಡಲಾಗಿತ್ತು. ಇದಲ್ಲದೆ ಪ್ರತಿ ಬ್ಲಾಕ್‌ನಲ್ಲಿ ಕಾರ್ಯನಿರ್ವಹಿಸಲು 1200 ಸ್ವಯಂಸೇವಕರು, 8 ಯೋಗ ಸಂಸ್ಥೆಗಳ 140 ಯೋಗ ಮಾರ್ಗದರ್ಶಕರನ್ನು ನಿಯೋಜಿಸಲಾಗಿತ್ತು. 

ವಾಹನ ಸಂಚಾರ ಬಂದ್‌: ರೇಸ್‌ಕೋರ್ಸ್‌ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿತ್ತು. ಯೋಗಪಟುಗಳು, ಗಣ್ಯರ ವಾಹನಗಳ ಹೊರತುಪಡಿಸಿ ಬೇರೆ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿತ್ತು. ಬೆಳಗ್ಗೆ 5ರಿಂದ 10 ಗಂಟೆವರೆಗೂ ರೇಸ್‌ಕೋರ್ಸ್‌ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಯೋಗಪಟುಗಳ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಶೌಚಾಲಯ, ಕುಡಿಯುವ ನೀರು, ವೈದ್ಯಕೀಯ ಸಹಾಯ ಕೇಂದ್ರ, ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಡ್ರೋನ್‌ ಮೂಲಕ ಸೆರೆ: 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾವಿರಾರು ಯೋಗಾಸಕ್ತರ ಯೋಗಭ್ಯಾಸ ದೃಶ್ಯಗಳನ್ನು ಸೆರೆ ಹಿಡಿಯಲು ಜಿಲ್ಲಾಡಳಿತ ಎರಡು ಡ್ರೋನ್‌ ಕ್ಯಾಮರಾಗಳನ್ನು ಬಳಸಿತ್ತು. ಯೋಗ ಪ್ರದರ್ಶನದ ವೇಳೆ ಮೈದಾನದ ತುಂಬೆಲ್ಲಾ ಸುತ್ತುತ್ತಿದ್ದ ಡ್ರೋನ್‌ ಕ್ಯಾಮರಾಗಳು ಗಮನ ಸೆಳೆದವು. 

ಪಾಲಿಕೆಯಿಂದ ಸ್ವತ್ಛತಾ ಪ್ರತಿಜ್ಞೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಯೋಗಾಸಕ್ತರಿಗೆ ನಗರ ಪಾಲಿಕೆ ವತಿಯಿಂದ ಸ್ವತ್ಛತಾ ಪ್ರತಿಜ್ಞೆ ಪಡೆಯಲಾಯಿತು. ಈ ವೇಳೆ ಪ್ರತಿಜ್ಞಾವಿಧಿ ಬೋಧಿಸಿದ ಪಾಲಿಕೆ ಅಧಿಕಾರಿಗಳು, ಮನೆ, ಕಚೇರಿಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ವಿಲೇವಾರಿ ಮಾಡುವುದಾಗಿ ಸಹಸ್ರಾರು ಮಂದಿಯಿಂದ ಪ್ರತಿಜ್ಞೆ ಪಡೆದರು. 

ಪೌರಕಾರ್ಮಿಕರಿಂದ ಸ್ವತ್ಛತೆ: ಬೃಹತ್‌ ಯೋಗ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ರೇಸ್‌ಕೋರ್ಸ್‌ ಆವರಣದಲ್ಲಿ ತುಂಬಿದ್ದ ಕಸವನ್ನು ಪೌರಕಾರ್ಮಿಕರು ಸ್ವತ್ಛಗೊಳಿಸಿದರು. 40 ಮಂದಿ ಪೌರಕಾರ್ಮಿಕರ ತಂಡ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಸ್ವತ್ಛತಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ 177 ಕೆಜಿ ಪ್ಲಾಸ್ಟಿಕ್‌ ಬಾಟಲ್‌ ಹಾಗೂ ವಿವಿಧ ರೀತಿಯ ತಟ್ಟೆ ಸೇರಿದಂತೆ ಇನ್ನಿತರ ತ್ಯಾಜ್ಯಗಳಿದ್ದ 40 ಕೆಜಿ ಕಸ ಸಂಗ್ರಹಿಸಿ ನಾಲ್ಕು ಆಟೋಗಳಲ್ಲಿ ವಿಲೇವಾರಿ ಮಾಡಿದರು. 

ವಿಶೇಷ ಮಕ್ಕಳ ಆಕರ್ಷಣೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದ ವಿಶೇಷ ಮಕ್ಕಳು ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಮಾನ್ಯ ಜನರೊಂದಿಗೆ ಮೈದಾನದಲ್ಲಿ ಯೋಗ ಪ್ರದರ್ಶನ ನೀಡಿದ ನಗರದ ರಂಗರಾವ್‌ ಸ್ಮಾರಕ ವಿಶೇಷ ಮಕ್ಕಳ ಶಾಲೆಯ 25 ಅಂಧ ವಿದ್ಯಾರ್ಥಿನಿಯರು ಹಾಗೂ ಕರುಣಾಮಯಿ ಫೌಂಡೇಶನ್‌ನ 17 ವಿಶೇಷ ಮಕ್ಕಳು ಯೋಗದ ಹಲವು ಆಸನಗಳನ್ನು ಪ್ರದರ್ಶಿಸಿದರು. 

ದೈನಂದಿನ ಯಾಂತ್ರಿಕ ಬದುಕಿನಲ್ಲಿ ಪ್ರತಿಯೊಬ್ಬರು ಕೆಲಸದ ಒತ್ತಡದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ರೋಗ ಬಂದ ಬಳಿಕ ಚಿಕಿತ್ಸೆ ಪಡೆಯದೆ, ಮೊದಲೇ ಯೋಗಾಸನ ಮಾಡಿ, ಒತ್ತಡದ ನಡುವೆ ಮನಸ್ಸನ್ನು ಸಮಚಿತ್ತದಲ್ಲಿ ಇರಿಸಿಕೊಳ್ಳಲು ಎಲ್ಲರೂ ಯೋಗಭ್ಯಾಸ ಮಾಡಿ.
-ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next