ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನ-2022 ಕಾರ್ಯಕ್ರಮವನ್ನು ಹೈಕೋರ್ಟ್ ಆವರಣದಲ್ಲಿ ಆಚರಿಸಲಾಯಿತು. ಇದೇ ಮೊದಲ ಬಾರಿ ಹೈಕೋರ್ಟ್ ಆವರಣದಲ್ಲಿ ಯೋಗ ಕಾರ್ಯಕ್ರಮ ನಡೆದಿರುವುದು ವಿಶೇಷವಾಗಿತ್ತು.
ಈ ಬಾರಿ ಅಂತರರಾಷ್ಟ್ರೀಯ ಯೋಗ ದಿನವನ್ನು “ಮಾನವೀಯತೆಗಾಗಿ ಯೋಗ’ ಎಂದು ಆಚರಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನ ನೀಡಿತ್ತು. ಅದರಂತೆ ಹೈಕೋರ್ಟ್ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಬೆಂಗಳೂರು ವಕೀಲರ ಸಂಘ ಪರಿವರ್ತನಾ ಫೌಂಡೇಷನ್, ವಾಟರ್ ಫಾರ್ ವಾಯ್ಸಲೆಸ್ ಸಂಸ್ಥೆಯ ಸಹಯೋಗದೊಂದಿಗೆ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೈಕೋರ್ಟ್‌ನ ಸೆಂಟ್ರಲ್ ಪೋರ್ಟಿಕೋ ಬಳಿ ನಡೆದ ಈ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಚಾಲನೆ ನೀಡಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅಧ್ಯಕ್ಷತೆ ವಹಿಸಿದ್ದರು.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಆಲೋಕ್ ಆರಾಧೆ, ಪಿ.ಎಸ್. ದಿನೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪರಿವರ್ತನಾ ಯೋಗ ಫೌಂಡೇಷನ್‌ನ ಎಸ್. ಪ್ರಸಾದ್ ಯೋಗಾಭ್ಯಸ ನಡೆಸಿಕೊಟ್ಟರು. ಹೈಕೋರ್ಟ್‌ನ ನ್ಯಾಯಮೂರ್ತಿಗಳು, ವಕೀಲರು, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು.