Advertisement

ಸರ್ಕಾರಿ ನೌಕರರಿಗೆ ಸಿಗಲಿದೆ ವಿರಾಮ: ಕಚೇರಿಯಲ್ಲಿ 5 ನಿಮಿಷ ಯೋಗ ಬ್ರೇಕ್‌!

08:48 AM Sep 05, 2021 | Team Udayavani |

ನವದೆಹಲಿ: ಊಟದ ಸಮಯವಾಗುತ್ತಲೇ ಕಚೇರಿಯಲ್ಲಿ “ಲಂಚ್‌ ಬ್ರೇಕ್‌’ ಇರುವುದು ನೋಡಿದ್ದೀರಿ. ಇನ್ನು ಮುಂದೆ ಇದೇ ರೀತಿ 5 ನಿಮಿಷಗಳ “ಯೋಗ ಬ್ರೇಕ್‌’ ಕೂಡ ಸಿಗಲಿದೆ! ಆ ಐದು ನಿಮಿಷಗಳಲ್ಲಿ ಸರಳ ಯೋಗಾಸನ ಮಾಡುವ ಮೂಲಕ ರಿಲ್ಯಾಕ್ಸ್‌ ಆಗಬಹುದು.

Advertisement

ಕೇಂದ್ರ ಸರ್ಕಾರವೇ ಇಂಥದ್ದೊಂದು ಆದೇಶ ಹೊರಡಿಸಿದೆ. ಅದರಂತೆ, ಇನ್ನು ಮುಂದೆ ಎಲ್ಲ ಸರ್ಕಾರಿ ನೌಕರರಿಗೂ ಕೆಲಸದ ಮಧ್ಯೆ 5 ನಿಮಿಷಗಳ ಯೋಗ ಬ್ರೇಕ್‌ ತೆಗೆದುಕೊಳ್ಳಲು ಅವಕಾಶಕಲ್ಪಿಸಲಾಗಿದೆ. ಕೇಂದ್ರ ಆಯುಷ್‌ ಸಚಿವಾಲಯ ಅಭಿವೃದ್ಧಿಪಡಿಸಿರುವ ‘Y break’ (ವೈ-ಬ್ರೇಕ್‌) ಎಂಬ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡರೆಸಾಕು. ಕೆಲಸದ ಸಮಯದಲ್ಲಿ 5 ನಿಮಿಷ ವಿರಾಮ ಪಡೆದುಕೊಂಡು, ಈ ಆ್ಯಪ್‌ ನಲ್ಲಿರುವ ಸರಳ ಯೋಗಾಸನಗಳನ್ನು ಮಾಡಿ, ವಾಪಸಾದರೆ ಆಯ್ತು.

ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೂತಲ್ಲೇ ಕೂತು ಕುತ್ತಿಗೆ, ಬೆನ್ನು ನೋವು ಶುರುವಾಗುವುದು, ಏಕಾಗ್ರತೆ, ದಕ್ಷತೆ ಕಡಿಮೆಯಾಗುವುದು ಸಾಮಾನ್ಯ. ಅಂಥವರಿಗೆ ಇದು ನೆರವಾಗಲಿದೆ. ಸ್ವಲ್ಪ ಹೊತ್ತು ಯೋಗಾಸನದಲ್ಲಿ ನಿರತರಾದರೆ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೇ, ಉಲ್ಲಾಸದಿಂದ ಕೆಲಸ ಮಾಡಲೂ ಸಾಧ್ಯವಾಗುತ್ತದೆ ಎನ್ನುವುದು ಆಯುಷ್‌ ಸಚಿವಾಲಯದ ವಾದ.

ಯೋಗ-ಬ್ರೇಕ್‌ ಆ್ಯಪ್‌: ಕೆಲಸದ ಸ್ಥಳದಲ್ಲಿನ ಒತ್ತಡ ತಗ್ಗಿಸಲು ಮತ್ತು ಮನೋಲ್ಲಾಸ ಪಡೆಯಲು ಕೇಂದ್ರ ಆಯುಷ್‌ ಸಚಿವ ಸರ್ಬಾನಂದ ಸೊನೊವಾಲ್‌ “ಯೋಗ-ಬ್ರೇಕ್‌’ ಆ್ಯಪ್‌ ಅನ್ನು ಅನಾವರಣಗೊಳಿಸಿದ್ದಾರೆ. ವೃತ್ತಿಪರರಿಗಾಗಿಯೇ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, 5 ನಿಮಿಷಗಳ ಅಭ್ಯಾಸವು ಆಸನಗಳು, ಪ್ರಾಣಾಯಾಮ, ಧ್ಯಾನವನ್ನು ಒಳಗೊಂಡಿರಲಿದೆ.

ಆ್ಯಪ್‌ನಲ್ಲೇನಿದೆ?: ಐದು ಸರಳವಾದ ಯೋಗಾಸನಗಳನ್ನು ಈ ಆ್ಯಪ್‌ನಲ್ಲಿ ಪರಿಚಯಿಸಲಾಗಿದೆ. ಅವೆಂದರೆ, ತಾಡಾಸನ, ಸ್ಕಂಧ ಚಕ್ರ, ಅರ್ಧ ಚಕ್ರಾಸನ, ನಾಡಿಶೋಧನ ಪ್ರಾಣಾಯಾಮ ಮತ್ತು ಭ್ರಮರಿ ಪ್ರಾಣಾಯಾಮ-ಧ್ಯಾನ. ಕೇವಲ 5 ನಿಮಿಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ

Advertisement

ಬೆಂಗಳೂರಲ್ಲೂ ಪ್ರಯೋಗ: ಕಳೆದ ವರ್ಷದ ಜನವರಿಯಲ್ಲೇ ಈ ಆ್ಯಪ್‌ ಅನಾವರಣ ಮಾಡಲಾಗಿತ್ತು. ಬೆಂಗಳೂರು ಸೇರಿ 6 ಮೆಟ್ರೋ ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯು ದೇಶದ 6 ಪ್ರಮುಖ ಯೋಗ ಕೇಂದ್ರಗಳ ಸಹಭಾಗಿತ್ವದೊಂದಿಗೆ 15 ದಿನಗಳ ಪ್ರಯೋಗವನ್ನು ನಡೆಸಿತ್ತು.

ವಿಶೇಷವಾಗಿ ವೃತ್ತಿಪರರಿಗೆಂದೇ ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದೇವೆ. ಒತ್ತಡ ತಗ್ಗಿಸಲು, ರಿಫ್ರೆಶ್‌ ಆಗಲು ಮತ್ತು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು 5 ನಿಮಿಷಗಳ ಯೋಗಾಸನ ನೆರವಾಗಲಿದೆ. ಅಲ್ಲದೇ ಉತ್ಪಾದಕತೆಯೂ ಹೆಚ್ಚಲಿದೆ.

-ಸರ್ಬಾನಂದ ಸೊನೊವಾಲ್‌, ಆಯುಷ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next