ಇತ್ತೀಚೆಗಷ್ಟೆ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮೊದಲ ಮಗುವಿನ ನಾಮಕರಣ ಸಮಾರಂಭ ಸಡಗರದಿಂದ ಅದ್ಧೂರಿಯಾಗಿ ನೆರವೇರಿತ್ತು. ಯಶ್-ರಾಧಿಕಾ ದಂಪತಿ ತಮ್ಮ ಪುತ್ರಿಗೆ ಐರಾ ಎಂದು ಹೆಸರಿಟ್ಟಿದ್ದರು. ಯಶ್ ಕುಟುಂಬ ವರ್ಗ ಮತ್ತು ಅಭಿಮಾನಿಗಳು ಈ ಕಾರ್ಯಕ್ರಮ ಕಂಡು ಸಂಭ್ರಮಿಸಿದ್ದರು.
ಇದರ ಬೆನ್ನಲ್ಲೇ ಯಶ್ ತಮ್ಮ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಮತ್ತೊಂದು ಸರ್‌ಪ್ರೈಸ್ ಎನ್ನುವಂಥ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ, ರಾಧಿಕಾ ಪಂಡಿತ್ ಈಗ 4 ತಿಂಗಳ ಗರ್ಭಿಣಿಯಾಗಿದ್ದು, ಯಶ್-ರಾಧಿಕಾ ದಂಪತಿ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೌದು, ಸ್ವತಃ ಯಶ್ ಅವರೇ ಇಂಥದ್ದೊಂದು ಸುದ್ದಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ಯಶ್ ನೀಡಿರುವ ಸಿಹಿ ಸುದ್ದಿಯನ್ನು ಕೇಳಿ ಖುಷಿಯಾಗಿರುವ ಅಭಿಮಾನಿಗಳು ಕೂಡ ರಾಕಿಂಗ್ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.