Advertisement

ಎತ್ತಿನಹೊಳೆ: 10 ಟಿಎಂಸಿ ಸಾಮರ್ಥ್ಯಕ್ಕೆ ಆಧುನಿಕ ತಂತ್ರಜ್ಞಾನ

11:57 PM Mar 07, 2022 | Team Udayavani |

ಬೆಂಗಳೂರು: ಎತ್ತಿನಹೊಳೆ ಯೋಜನೆ ಅಡಿ ನಿರ್ಮಿಸಲು ಉದ್ದೇಶಿಸಿರುವ ಬೈರಗೊಂಡ್ಲು ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 2 ಟಿಎಂಸಿ ಇದ್ದರೂ, 10 ಟಿಎಂಸಿ ನೀರನ್ನು ಉಪಯೋಗಿಸುವಂತಹ ಆಧುನಿಕ ತಂತ್ರಜ್ಞಾನವನ್ನು ಅಲ್ಲಿ ಪರಿಚಯಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Advertisement

ಸೋಮವಾರ ಸದಸ್ಯ ರಾಜೇಂದ್ರ ರಾಜಣ್ಣ ನಿಯಮ 72ರ ಅಡಿ ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉದ್ದೇಶಿತ ಯೋಜನೆಯಿಂದ ರಾಮನಗರ, ಕೋಲಾರ, ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹತ್ತು ಜಿಲ್ಲೆಗಳಿಗೆ ಅನುಕೂಲ ಆಗಲಿದೆ ಎಂದರು.

ನೀಲನಕಾಶೆ ಸಿದ್ಧ
ಈಗಾಗಲೇ ಎಂಜಿನಿಯರ್‌ಗಳು, ತಂತ್ರಜ್ಞರು ಈ ಕುರಿತು ನೀಲನಕಾಶೆ ಸಿದ್ಧಪಡಿಸಿ, ಅದಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತಿದ್ದಾರೆ. ಹಾಗಾಗಿ, ಆತಂಕಪಡುವ ಅಗತ್ಯವಿಲ್ಲ ಎಂದ ಅವರು, ಎತ್ತಿನಹೊಳೆ ಯೋಜನೆ ಜಾರಿಗೆ ಸರಕಾರ ಬದ್ಧವಾಗಿದೆ. ಆ ಬದ್ಧತೆ ಇರುವುದರಿಂದಲೇ ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಗೊಂದಲ ಬಗೆಹರಿಯುತ್ತಿದೆ
ಯೋಜನೆಗಾಗಿ ಸುಮಾರು 12,857 ಎಕರೆ ಭೂಮಿಯ ಆವಶ್ಯಕತೆ ಇದ್ದು, ಇದರಲ್ಲಿ 11,745 ಎಕರೆ ರೈತರದ್ದಾಗಿದ್ದು, 992 ಎಕರೆ ಮಾತ್ರ ಸರಕಾರದ್ದಾಗಿದೆ. ಉಳಿದ 118 ಎಕರೆ ಅರಣ್ಯ ಪ್ರದೇಶ. ಈ ಮಧ್ಯೆ 2013ರಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿ ಹೊಸ ಕಾಯ್ದೆ ಬಂತು. ಅದರಂತೆ ಮಾರ್ಗಸೂಚಿ ದರದ 4 ಪಟ್ಟು ಪರಿಹಾರ ಒದಗಿಸಬೇಕು. ಒಂದು ಊರಿಂದಮತ್ತೊಂದು ಊರಿಗೆ ಮಾರ್ಗಸೂಚಿ ದರ ಬೇರೆ ಆಗುತ್ತದೆ. ಆದರೆ, ರೈತರು ಒಂದೇ ರೀತಿಯ ಪರಿಹಾರ ಕೇಳುತ್ತಿರುವುದು ಕಗ್ಗಂಟಾಗಿದ್ದು, ಈಗ ಗೊಂದಲ ಬಗೆಹರಿಯುತ್ತಿದೆ. ಕಾಮಗಾರಿಯೂ ಸಾಕಷ್ಟು ಪ್ರಗತಿ ಕಂಡಿದೆ ಎಂದರು.

ಹಲವರ ಪಾಲಿಗೆ ಕಾಮಧೇನು!
ಎತ್ತಿನಹೊಳೆ ಯೋಜನೆ ಎನ್ನುವುದು ಕೆಲವರ ಪಾಲಿಗೆ ಕಾಮಧೇನು. ಹಾಗಾಗಿ, ಅದಕ್ಕೆ 50 ಸಾವಿರ ಕೋಟಿ ರೂ. ಮೀಸಲಿಟ್ಟರೂ ಯಾವತ್ತೂ ಪೂರ್ಣಗೊಳ್ಳುವುದಿಲ್ಲ’ ಎಂದು ಜೆಡಿಎಸ್‌ ಸದಸ್ಯ ಭೋಜೇಗೌಡ ಆರೋಪಿಸಿದರು. ಪೂರಕವಾಗಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕೆಲವರಿಗೆ ಕಾಮಧೇನು ಇದ್ದಂತೆ. ಎಲ್ಲರೂ ಅಧಿಕಾರಿಗಳು ಹಣ ತಿನ್ನುತ್ತಿದ್ದಾರೆ. 50 ಸಾವಿರ ಕೋಟಿ ರೂ. ವೆಚ್ಚ ಮಾಡಿದರೂ ಇದು ಪೂರ್ಣಗೊಳ್ಳುವುದಿಲ್ಲ. ಅಲ್ಲದೆ, ಯೋಜನೆ ಜಾರಿ ಮಾಡುತ್ತಿರುವ ಭಾಗಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಶೇ. 10ರಷ್ಟು ಕಡಿಮೆ ಆಗುತ್ತಿದೆ. ಆದ್ದರಿಂದ ಯೋಜನೆ ಫ‌ಲ ನೀಡುವುದಿಲ್ಲ ಎಂದು ಗಂಭೀರ ಆರೋಪ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next