Advertisement
ಅಲ್ಲದೆ, ಮೂರು ದಿನ ರಾಜ್ಯಾದ್ಯಂತ ಶೋಕ ಆಚರಿಸಲು ತೀರ್ಮಾನಿಸಲಾಗಿದೆ. ಮಹದೇವಪ್ರಸಾದ್ ನಿಧನದ ಮಾಹಿತಿ ಸಿಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ರಜೆ ಘೋಷಿಸುವಂತೆ ಸೂಚನೆ ನೀಡಿದರು.ಅದರಂತೆ ತಕ್ಷಣ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಟಾಚಾರ) ಈ ಕುರಿತು ಅಧಿಸೂಚನೆ
ಹೊರಡಿಸಿತು. ಮಂಗಳವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಾಲೇಜುಗಳಿಗೆ (ಅನುದಾನ ಪಡೆಯುವ ಎಲ್ಲಾ ವಿದ್ಯಾಸಂಸ್ಥೆಗಳು ಸೇರಿದಂತೆ) ರಜೆ ಘೋಷಿಸಲಾಯಿತು. ಅಲ್ಲದೆ, ಜ.5ರವರೆಗೆ ರಾಜ್ಯಾದ್ಯಂತ ಶೋಕ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯಮಿತವಾಗಿ ರಾಷ್ಟ್ರಧ್ವಜ ಹಾರಿಸುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ ಬಹುತೇಕ ಸರ್ಕಾರಿ ಹಾಗೂ ಅನುದಾನಿತ ಶಾಲಾ, ಕಾಲೇಜುಗಳು ರಜೆ ಘೋಷಿಸಿ ಮಕ್ಕಳನ್ನು ಮನೆಗೆ ಕಳುಹಿಸಿದವು.
ಬೆಂಗಳೂರು: ಮಂಗಳವಾರ ನಿಧನರಾದ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಎಚ್. ಎಸ್.ಮಹದೇವಪ್ರಸಾದ್ ಅವರ ಅಂತ್ಯಕ್ರಿಯೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಅವರ ಹುಟ್ಟೂರಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಚಾಮರಾಜನಗರ ಜಿಲ್ಲೆಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ನೆಗೋಷಿಯೇಬಲ್ ಇನ್‌ಸ್ಟ್ರೆಮೆಂಟ್ ಆ್ಯಕ್ಟ್- 1981ರ ಪ್ರಕಾರ ರಜೆ ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬುಧವಾರವೂ ಚಾಮರಾಜನಗರ ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು (ಅನುದಾನಿತ) ಕಾರ್ಯನಿರ್ವಹಿಸುವುದಿಲ್ಲ.
Related Articles
ಬೆಂಗಳೂರು: ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ನಿಧನ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಿಸಿದ್ದರಿಂದ ಮಧ್ಯಾಹ್ನದ ವೇಳೆಗೆ ರಾಜ್ಯದ ಶಕ್ತಿ ಕೇಂದ್ರ ಬಿಕೋ ಎನ್ನುತ್ತಿತ್ತು. ವಿಧಾನಸೌಧದ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು. ಬೆಳಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಂದಿನಂತೆ ಕಚೇರಿಗೆ ಹಾಜರಾದರೂ ಬಳಿಕ ಸಚಿವರ ನಿಧನ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಿಸಲಾಯಿತು. ಹೀಗಾಗಿ ಬೆಳಗ್ಗೆ ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್.ಬಿಲ್ಡಿಂಗ್ ಸೇರಿದಂತೆ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಒಬ್ಬೊಬ್ಬರಾಗಿ ಮನೆಗೆ ವಾಪಸಾಗುತ್ತಿದ್ದರು.
Advertisement
ಮಧ್ಯಾಹ್ನದ ವೇಳೆಗೆ ಎಲ್ಲ ಕಚೇರಿಗಳು ಖಾಲಿಯಾಗಿ ವಿಧಾನಸೌಧ ಮತ್ತು ಸುತ್ತಲಿನ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ವಿಧಾನಸೌಧ ವೀಕ್ಷಣೆಗೆ ದೂರದ ಊರುಗಳಿಂದ ಬಂದಿದ್ದವರನ್ನು ಪೊಲೀಸರು ಮುಖ್ಯದ್ವಾರದಿಂದಲೇ ವಾಪಸ್ ಕಳುಹಿಸುತ್ತಿದ್ದರು. ಸಚಿವರ ನಿಧನದ ಮಾಹಿತಿ ಇಲ್ಲದ ಕೆಲವರು, ದೂರದ ಊರಿನಿಂದ ಬಂದಿದ್ದೇವೆ. ಒಮ್ಮೆವಿಧಾನಸೌಧ ನೋಡುಕೊಂಡು ಹೋಗುತ್ತೇವೆ ಎಂದು ಪೊಲೀಸರ ಬಳಿ ಕೇಳಿಕೊಳ್ಳುತ್ತಿದ್ದರು. ಅಂಥವರಿಗೆ ಸಚಿವರ ನಿಧನದ ಮಾಹಿತಿ ನೀಡಿ ಪೊಲೀಸರು ವಾಪಸ್ ಕಳುಹಿಸುತ್ತಿದ್ದರು.