ಮುಂಬಯಿ: ಹಿಂದಿ, ಇಂಗ್ಲಿಷ್ ಚಲನಚಿತ್ರಗಳೊಂದಿಗೆ ತುಲನೆ ಮಾಡದೆ ಮಾತೃ ಭಾಷೆಗೆ ಗೌರವ ಕೊಟ್ಟು ತುಳು ಚಲನಚಿತ್ರವನ್ನು ವೀಕ್ಷಿಸಬೇಕು. ಒಂದೇ ಪರಿವಾರದವರು ಒಟ್ಟಿಗೆ ನೋಡುವ ಚಲನಚಿತ್ರವಾದ್ದರಿಂದ ಅದರಲ್ಲಿ ಮಸಾಲೆಗಳನ್ನು ತುರುಕಿಸಲು ಅಸಾಧ್ಯವಾಗಿದೆ. ತುಳುನಾಡಿನ ಆರಾಧನೆ ಅಂಕ, ಆಯನ, ದೇವಸ್ಥಾನ ಪವಿತ್ರ ಸ್ಥಳಗಳು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ತುಳು ಚಲನಚಿತ್ರ ಮಾಧ್ಯಮವಾಗಿದೆ. ಇದರಿಂದ ತುಳು ಭಾಷೆಯ ಅಭಿವೃದ್ದಿ, ಸಂಸ್ಕೃತಿ, ಸಂಪ್ರದಾಯಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಅವರು ನುಡಿದರು.
ಜು. 16ರಂದು ಮೀರಾರೋಡ್ ಪೂರ್ವದ ಕನಕ್ಯಾ ಸಿನಿಮ್ಯಾಕ್ಸ್‌ನಲ್ಲಿ ಸ್ನೇಹ ಸಾಗರ ವೃದ್ಧಾಶ್ರಮ ಮೀರಾರೋಡ್ ಸಹಾಯಾರ್ಥವಾಗಿ ಆಯೋಜಿಸಲಾಗಿದ್ದ ಏಸ ತುಳು ಚಲನಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಸ ಚಲನಚಿತ್ರ ಸಾಂಸಾರಿಕವಾಗಿದ್ದು, ಕೂಡುಕುಟುಂಬಕ್ಕೆ ಮಹತ್ವವನ್ನು ನೀಡಿದೆ. ದೈವ-ದೇವರನ್ನು ಗುರು-ಹಿರಿಯರನ್ನು ಗೌರವಿಸುವ, ಯುವ ಪೀಳಿಗೆಗೆ ಗುತ್ತು ಮನೆತನದ ಪರಂಪರೆಯನ್ನು ಪರಿಚಯಿಸಿದೆ. ಮೈಮನಸ್ಸು, ವೈರತ್ವ ಸಂಶಯಗಳಿಗೆ ಮುಂಬಯಿಯ ಯುವಕ ಪರಿಹಾರ ನೀಡುವ ಕತೆ ಮನಸ್ಸಿಗೆ ಹಿತ ನೀಡುತ್ತದೆ. ಪುಣೆ ಉದ್ಯಮಿ ಸಮಾಜ ಸೇವಕ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ಅವರ ನಿರ್ಮಾಪಕತ್ವದಲ್ಲಿ ಇನ್ನಷ್ಟು ತುಳುಚಲನಚಿತ್ರಗಳು ಮೂಡಿ ಬರಲಿ ಎಂದರು.
ಸಂಘಟಕ ದಿನೇಶ್ ಶೆಟ್ಟಿ ಕಾಪುಕಲ್ಯ ಅವರು ಸ್ವಾಗತಿಸಿ, ವಿಕಲಾಂಗ, ಅನಾಥರ, ವೃದ್ಧಾಶ್ರಮದ ಸಹಾಯರ್ಥವಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಸಹಕರಿಸಿದ ತುಳು-ಕನ್ನಡಿಗರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಏಸ ಚಲನಚಿತ್ರದ ಹಾಸ್ಯನಟ, ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಮುಂಬಯಿ ಸಂಚಾಲಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಮತ್ತು ಪ್ರೇಮ್ ಬಿ. ಶೆಟ್ಟಿ, ರಾಜಕೀಯ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಉದಯ ಹೆಗ್ಡೆ, ಲೀಲಾ ಡಿ. ಪೂಜಾರಿ, ಜಯಶೀಲ ತಿಂಗಳಾಯ, ಚೇತನ್ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ಚಲನ
ಚಿತ್ರ ನಟ ಜಿ. ಕೆ. ಕೆಂಚನಕೆರೆ, ವಿದುಷಿ ಅಮಿತಾ ಜತ್ತಿನ್ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಅಮೀನ್