ಮಂಗಳೂರು: ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲೇ ಮೊದಲ ರೊಬೋಟಿಕ್ ತಂತ್ರಜ್ಞಾನ ಆಧಾರಿತ ಕೀಲು ಬದಲಾವಣೆ ಘಟಕ ಕೆ.ಎಸ್. ರಾವ್ ರಸ್ತೆಯಲ್ಲಿರುವ ಯೇನಪೊಯ ಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ಕಾರ್ಯಾರಂಭಗೊಂಡಿದೆ.
ನಗರದ ತಾಜ್ ವಿವಂತದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ಆರೋಗ್ಯ ಸೇವೆ ಯಲ್ಲಿ ಮುಂಚೂಣಿಯಲ್ಲಿದ್ದು, ಹಲವಾರು ಗುಣಮಟ್ಟದ ಆಸ್ಪತ್ರೆಗಳಿವೆ. ಯೇನಪೊಯ ಆಸ್ಪತ್ರೆಯು ಇದೀಗ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ಮೊಣಕಾಲು ಕೀಲು ಬದಲಾ ವಣೆಯ ಘಟಕ ತೆರೆದಿರುವುದು ಆಸ್ಪತ್ರೆಯ ಶ್ರೇಷ್ಠತೆಗೆ ಸಾಕ್ಷಿ ಎಂದರು.
ಯೇನಪೊಯ ಆಸ್ಪತ್ರೆಗಳ ಚೇರ್‌ಮನ್ ಡಾ| ಯೇನಪೊಯ ಅಬ್ದುಲ್ಲ ಕುಂಞಿ ಪ್ರಸ್ತಾವನೆಗೈದು, ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರೊಬೋಟಿಕ್ ತಂತ್ರಜ್ಞಾನ ಆಧಾರಿತ ಕೀಲು ಬದಲಾವಣೆ ಘಟಕವನ್ನು ನಮ್ಮ ಆಸ್ಪತ್ರೆಯಲ್ಲಿ ಅಳವಡಿಸಲಾಗುತ್ತಿದೆ. ನುರಿತ ವೈದ್ಯ ತಂಡದಿಂದ ಚಿಕಿತ್ಸೆ ನೀಡಲಾಗುತ್ತದೆ. ನೆರೆಯ ಕೇರಳದ ಹೆಚ್ಚಿನ ಮಂದಿ ಚಿಕಿತ್ಸೆಗೆ ದ.ಕ. ಜಿಲ್ಲೆಗೆ ಆಗಮಿಸುತ್ತಾರೆ ಎಂದು ವಿವರಿಸಿದರು.
ಆಸ್ಪತ್ರೆ ವತಿಯಿಂದ ಸಚಿವರನ್ನು ಸಮ್ಮಾನಿಸಲಾಯಿತು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಯೇನಪೊಯ ಮೊಹಮ್ಮದ್ ಕುಂಞಿ, ಮಾಜಿ ಸಚಿವ ಬಿ. ರಮಾನಾಥ ರೈ, ಆಸ್ಪತ್ರೆಯ ನಿರ್ದೇಶಕ ಫರ್ಹಾದ್, ಜಾವೇದ್, ಡಾ| ಹಬೀಬ್ ರಹ್ಮಾನ್, ಡಾ| ಕೃಷ್ಣ ಶೆಟ್ಟಿ ಮೊದಲಾದವರಿದ್ದರು.
ವೈದ್ಯಕೀಯ ನಿರ್ದೇಶಕ ಡಾ| ಮೊಹಮ್ಮದ್ ತಾಹೀರ್ ಸ್ವಾಗತಿಸಿ, ಡಾ| ಧನುಶ್ ಶೆಟ್ಟಿ ವಂದಿಸಿದರು. ಹೈಫಾ ಅನ್ಸಾರಿ ನಿರೂಪಿಸಿದರು.
ಸುಲಭ ಶಸ್ತ್ರಚಿಕಿತ್ಸೆ; ತ್ವರಿತ ಗುಣಮುಖ
ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಆ್ಯಂಡ್ ಆತ್ರೋìಸ್ಕೋಪಿ ಸರ್ಜನ್ ಡಾ| ದೀಪಕ್ ಕೆ. ರೈ ಮಾತನಾಡಿ, ರೊಬೋಟಿಕ್ ತಂತ್ರಜ್ಞಾನದ ಶಸ್ತ್ರಚಿಕಿತ್ಸೆ ಮೂಲಕ ರೋಗಿಗಳು ವೇಗವಾಗಿ ಗುಣಮುಖರಾಗುತ್ತಾರೆ. ಶಸ್ತ್ರಚಿಕಿತ್ಸೆ ವೇಳೆ ಮತ್ತು ಬಳಿಕ ನೋವು ಕೂಡ ಕಡಿಮೆ ಇರುತ್ತದೆ ಎಂದು ತಿಳಿಸಿದರು.