ಕುಷ್ಟಗಿ: ಆಗಾಗ್ಗೆ ಸುರಿಯುತ್ತಿರುವ ಮಳೆ ಹಾಗೂ ವಾತವರಣದ ಆರ್ದ್ರತೆಯಿಂದಾಗಿ ಹೆಸರು ಬೆಳೆಗೆ ಹಳದಿ ರೋಗದ ಜೊತೆಯಲ್ಲಿ ತುಕ್ಕು ರೋಗ ಕಂಡು ಬಂದಿದ್ದು ರೈತರನ್ನು ಕಂಗಾಲಾಗಿಸಿದೆ.
ಮುಂಗಾರು ಪೂರ್ವ ಮಳೆಯಿಂದ ಬಿತ್ತನೆ ಬಳಿಕ ಸಕಾಲಿಕ ಮಳೆಗೆ ಉತ್ತಮ ಬೆಳೆ ಕಂಡಿದ್ದ ರೈತರು ಉತ್ತಮ ಇಳುವರಿಯ ಖುಷಿಯಲ್ಲಿದ್ದರು. ಆದರೆ ಕಳೆದ 15 ದಿನಗಳಿಂದ ಮಳೆ ಆಗಾಗ್ಗೆ ಸುರಿಯುತ್ತಿದ್ದು, ಬೆಳೆಗಳಿಗೆ ತೇವಾಂಶ ಮಾರಕವಾಗುತ್ತಿದೆ. ಮೋಡ ಕವಿದ ವಾತವರಣ ರೋಗ ರುಜಿನ ಕೀಟ ಬಾಧೆ ಕಾಣಿಸಿಕೊಂಡಿದೆ. ಇದನ್ನು ನಿಯಂತ್ರಿಸಲು ದುಬಾರಿ ವೆಚ್ಚದ ಕೀಟನಾಶಕ ಸಿಂಪಡಿಸಿದರೆ ಬೆನ್ನಲ್ಲೇ ಮಳೆ ಆಗುತ್ತಿದೆ. ಇದರಿಂದ ರೈತರ ಪ್ರಯತ್ನ ವ್ಯರ್ಥವಾಗುತ್ತಿದ್ದು ಖರ್ಚು ಅಧಿಕವಾಗಿದೆ.
ಒಟ್ಟಾರೆಯಾಗಿ ರೈತರಿಗೆ ಬೆಳೆ ಮುಖ ನೋಡಬೇಕೋ ಖರ್ಚಿನ ಮುಖ ನೋಡಬೇಕೋ ಎನ್ನುವುದು ದಿಕ್ಕು ತೋಚದಂತಾಗಿದೆ.ಕುಷ್ಟಗಿಯ ರೈತ ಹನುಮಂತ ಬೂದರ್ ಅವರು ನಾಲ್ಕು ಎಕರೆಯಲ್ಲಿ ಹೆಸರು ಬೆಳೆದಿದ್ದು, ತಿಂಗಳು ಕಾಲ ಉತ್ತಮವಾಗಿ ಬೆಳೆದಿದ್ದು, ಕಾಯಿ ( ಬುಡ್ಡಿ) ಹಿಡಿಯುವ ಹಂತದಲ್ಲಿ ಎಲೆಗಳಿಗೆ ತುಕ್ಕು ರೋಗ ಕಾಣಿಸಿಕೊಂಡಿದೆ. ಎಲೆ ಮುದುರಿ ಕಪ್ಪಾಗಿದೆ. ಹಾಲ್ದೆಯ ಕಾಯಿ ಮುರುಟಿದ್ದು ಉತ್ತಮ ಇಳುವರಿ ಆಸೆ ಕೈ ಬಿಡಲಾಗಿದೆ.
ಇದು ಸೆರ್ಕೊಸ್ಪೊರಾ( cercospora) ಎಲೆ ಚುಕ್ಕೆಅಥವಾ ತುಕ್ಕು ರೋಗ ಇದಾಗಿದ್ದು, ನಿಯಂತ್ರಿಸಲು ಹೆಕ್ಸೋನಜೋಲ್ 1 ಮಿ.ಲೀ.ಗೆ 1 ಲೀಟರ್ ಸಿಂಪಡಿಸಿ ನಿಯಂತ್ರಿಸಲು ಸಾದ್ಯವಿದೆ. ಈ ರೋಗ ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಿಸಿದರೆ ಹಿಂದಲ್ಲೆ ಮಳೆಯಾಗುತ್ತಿದೆ. ಬಿಸಿಲಿನಲ್ಲಿ ಕ್ರಿಮಿನಾಶಕ ಸಿಂಪಡಿಸಿದರೆ ನಿಯಂತ್ರಿಸಲು ಸಾಧ್ಯವಿದ್ದು ಸದ್ಯ ಪೂರಕ ವಾತರವರಣ ಇಲ್ಲ.
– ರಾಘವೇಂದ್ರ ಕೊಂಡಗುರಿ ಕೃಷಿ ಅಧಿಕಾರಿ ಕೃಷಿ ಇಲಾಖೆ ಕುಷ್ಟಗಿ.
ಹೆಸರು ಬೆಳೆಗೆ ಕಾಪು ಹಿಡಿಯೋ ಹೊತ್ತಿಗೆ ಮಳೆ ಆಗುತ್ತಿದೆ. ಬೆಳೆಯಲ್ಲಿ ಬುಡ್ಡಿ ( ಕಾಯಿ) ಬಲಿಯದೇ ಮುದುರಿದೆ. ಆಳು ಹಚ್ಚಿ ಬೆಳೆ ಕೊಯ್ಲು ಮಾಡಿದರೂ ಕಾಳು ಹೊಂಡುವುದಿಲ್ಲ.
– ಹನುಮಂತ ಬೂದರ್ ರೈತ ಕುಷ್ಟಗಿ
ಮಂಜುನಾಥ ಮಹಾಲಿಂಗಪುರ ಕುಷ್ಟಗಿ