Advertisement

ಕರಾವಳಿಯಲ್ಲಿ ಎಲ್ಲೋ ಅಲರ್ಟ್‌ : ಉತ್ತಮ ಮಳೆ ಸಾಧ್ಯತೆ

06:42 AM May 27, 2020 | Hari Prasad |

ಮಂಗಳೂರು: ಅರಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದರ ಪರಿಣಾಮ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

Advertisement

ಹೀಗಾಗಿ ಭಾರತೀಯ ಹವಾಮಾನ ಇಲಾಖೆಯು ಬುಧವಾರ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಕಳೆದ ಕೆಲ ದಿನಗಳಿಂದ ಕರಾವಳಿ ಭಾಗದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ ಇದೆ.

ಯೆಲ್ಲೋ ಅಲರ್ಟ್‌ ಘೋಷಿಸಿದ ಪರಿಣಾಮ ಕರಾವಳಿ ಭಾಗದಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ಗಾಳಿ ಮತ್ತು ಗುಡುಗು ಕೂಡ ಇರಲಿದೆ.

ಉಭಯ ಜಿಲ್ಲೆಗಳಲ್ಲಿ ಬುಧವಾರದಂದು ಸೆಕೆ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆಯ ಅಂಕಿ – ಅಂಶದಂತೆ ಮಂಗಳವಾರದಂದು ಪಣಂಬೂರಿನಲ್ಲಿ 36 ಡಿ.ಸೆ. ಗರಿಷ್ಠ ಮತ್ತು 27.2 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

Advertisement

ದಕ್ಷಿಣ ಒಳನಾಡಿನ ಹಲವೆಡೆ ಮಳೆ
ಮಂಗಳವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಒಳನಾಡಿನ ಕೆಲವು ಕಡೆ ಮತ್ತು ಕರಾವಳಿಯ ಒಂದೆರಡು ಕಡೆ ಮಳೆಯಾಯಿತು. ವಿಜಯಪುರ ಜಿಲ್ಲೆಯ ನಾಲತವಾಡದಲ್ಲಿ ಸುರಿದ 6 ಸೆಂ.ಮೀ. ಮಳೆ ಗರಿಷ್ಠವಾಗಿತ್ತು.

ಈ ಅವಧಿಯಲ್ಲಿ ವಿವಿಧೆಡೆ ಸುರಿದ ಮಳೆ ಪ್ರಮಾಣ ಹೀಗಿದೆ (ಸೆಂ.ಮೀ.ಗಳಲ್ಲಿ):
ಶಿರಹಟ್ಟಿ, ಪಾಂಡವಪುರ, ಹೊಸದುರ್ಗ, ಶ್ರೀರಂಗಪಟ್ಟಣ ತಲಾ 4, ಇಳಕಲ್‌, ಗದಗ, ಬೇಲೂರು, ಮೈಸೂರು, ರಾಮಪುರ ತಲಾ 3, ಯಲಬುರ್ಗ, ತಾವರಗೇರಾ, ಕೃಷ್ಣರಾಜಸಾಗರ, ಎನ್‌ಆರ್‌ ಪುರ, ಯಗಟಿ, ತಿಪಟೂರು, ಆನೆಕಲ್‌ ತಲಾ 2, ಮಂಚಿಕೆರೆ, ಹಾವೇರಿ, ಹುನಗುಂದ, ಸವಣೂರು, ರಾಮಗಿರಿ, ಹಳೆಬೀಡು, ಚಿಕ್ಕಮಗಳೂರು, ಕಡೂರು, ಅಜ್ಜಂಪುರ, ಕೊಟ್ಟಿಗೆಹಾರ, ಬೆಳ್ಳೂರು ತಲಾ 1.

ಕಲಬುರಗಿಯಲ್ಲಿ 44.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಇದು ರಾಜ್ಯದಲ್ಲಿಯೇ ಗರಿಷ್ಠವಾಗಿತ್ತು. ಕರಾವಳಿಯ ಪಣಂಬೂರಿನಲ್ಲಿ 35.5 ಡಿ.ಸೆ. ಮತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ 34.4 ಡಿ.ಸೆ. ತಾಪಮಾನ ದಾಖಲಾಗಿತ್ತು.

ಗುರುವಾರ ಬೆಳಗ್ಗಿನವರೆಗಿನ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಹಲವೆಡೆ, ಕರಾವಳಿಯ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next