ಯಳಂದೂರು:ಕೇಂದ್ರ ಪುರಸ್ಕೃತ ಯೋಜನೆಯಡಿ ಜಾನುವಾರುಗಳಿಗೆ ತುರ್ತಾಗಿ ಚಿಕಿತ್ಸಾ ಸೌಲಭ್ಯ ನೀಡಲು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ತುರ್ತು ಚಿಕಿತ್ಸಾ ವಾಹನ ಜಾನುವಾರುಗಳಿಗೆ ವರವಾಗಿ ಪರಿಣಮಿಸಿದೆ. ಆದರೂ ಇದಕ್ಕೆ ಇನ್ನಷ್ಟು ಪ್ರಚಾರ ಬೇಕಿದ್ದು ಅನೇಕರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ.
ಮರಣ ತಗ್ಗುತ್ತಿದೆ: ಗುಡ್ಡಗಾಡು, ಅರಣ್ಯದಂಚಿನ ಗ್ರಾಮ ಹಾಗೂ ಪಶು ಆಸ್ಪತ್ರೆಯಿಂದ ದೂರವಿರುವ ಗ್ರಾಮಗಳ ಹೈನುಗಾರರು, ಕುರಿ, ಮೇಕೆ, ಹಂದಿ ಇತರೆ ಪ್ರಾಣಿ ಸಾಕಾಣಿಕೆದಾರರಿಗೆ ಇದರಿಂದ ಅನೇಕ ಲಾಭಗಳಿವೆ. ತಮ್ಮ ಜಾನುವಾರುಗಳಿಗೆ ದೊಡ್ಡ ಪ್ರಮಾಣದ ರೋಗ ಕಾಡಿದ ಪಕ್ಷದಲ್ಲಿ ಸ್ಥಳಕ್ಕೆ ಈ ವಾಹನ ಆಗಮಿಸಿ ಚಿಕಿತ್ಸೆ ನೀಡುವುದರಿಂದ ಜಾನುವಾರು ಮರಣ ಪ್ರಮಾಣ ತಗ್ಗುತ್ತದೆ.
ಮೂವರು ಸಿಬ್ಬಂದಿ: ಹೈನುಗಾರರು, ಜಾನುವಾರು ಸಾಕಾಣಿಕೆದಾರರು 19 62ಕ್ಕೆ ಕರೆ ಮಾಡಿದ್ದಲ್ಲಿ ಆಕ್ಸಿಜನ್, ಫ್ಯಾನ್, ತೂಕ ಮಾಪಕ, ಪ್ರಿಡ್ಜ್, ವೈದ್ಯಕೀಯ ಪರಿಕರ ಇರಿಸುವ ಪೆಟ್ಟಿಗೆ, ಗೀಸರ್ ಸೇರಿ ಅನೇಕ ಸೌಲಭ್ಯಗಳುಳ್ಳ ತುರ್ತು ಚಿಕಿತ್ಸಾ ವಾಹನ ಸ್ಥಳಕ್ಕೆ ಬರುತ್ತದೆ. ಇದರಲ್ಲಿ ಮೂವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವೈದ್ಯ ಡಾ.ರಾಜೇಶ್ ಮಾಹಿತಿ ನೀಡಿದರು.
ಚಾಲನೆ: ಕಳೆದ ಆ.5ರಂದು ಈ ವಾಹನ ತಾಲೂಕಿನಲ್ಲಿ ಸೇವೆಗೆ ನೀಡಲಾಗಿದ್ದು ತಾಲೂಕಿನ ಯರಗಂಬಳ್ಳಿ, ದಾಸನಹುಂಡಿ, ಮದ್ದೂರು, ಶಿವಕಳ್ಳಿ, ಮಲಾರಪಾಳ್ಯ, ಚಾಮಲಾಪುರ, ವಡಗೆರೆ, ಬಿಳಿಗಿರಿರಂಗನಬೆಟ್ಟದ ಪೋಡು ಗಳಿಗೆ ವಾಹನ ತೆರಳಿ ಹತ್ತಾರು ಚಿಕಿತ್ಸೆ ನೀಡಿದೆ. ತಾಲೂಕಿನಲ್ಲಿ 10,850 ರಾಸು, 16,500 ಕ್ಕೂ ಹೆಚ್ಚು ಕುರಿ, ಮೇಕೆ, ಹಂದಿ ಇದ್ದು. ಈ ಬಗ್ಗ ಇನ್ನಷ್ಟು ಪ್ರಚಾರ ದೊರೆಯಬೇಕು.
ಟೋಲ್ ಫ್ರೀ 1962 ಕ್ಕೆ ಕರೆ ಮಾಡಿದರೆ ಸಿಬ್ಬಂದಿ ಭೇಟಿ ನೀಡಿ ವೈದ್ಯಕೀಯ ನೆರವು ನೀಡಲಿದ್ದಾರೆ. ಇದುವರೆಗೆ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಮಂದಿ ಇದರ ಲಾಭ ಪಡೆದಿದ್ದಾರೆ. ಉತ್ತಮ ವೈದ್ಯಕೀಯ ಸೇವೆ.
● ಡಾ.ಶಿವರಾಜು, ಸಹಾಯಕ
ನಿರ್ದೇಶಕ, ಪಶು ಇಲಾಖೆ, ಯಳಂದೂರು
ಸಂಚಾರ ವೈದ್ಯಕೀಯ ಸೇವೆ ಪಶುಗಳಿಗೂ ಲಭಿಸುತ್ತಿರುವುದು ಸಂತಸದಾಯಕ. ರಾಸುಗಳನ್ನು ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವುದು ಕಷ್ಟ. ಅದರಲ್ಲೂ ಗುಡ್ಡಗಾಡು ಪ್ರದೇಶವಾದ ಬಿಳಿಗಿರಿರಂಗನಬೆಟ್ಟದ ಹೈನುಗಾರರಿಗೆ ಇದರಿಂದ ಹೆಚ್ಚು ಲಾಭವಾಗುತ್ತಿದೆ.
● ಮನು, ಹೈನುಗಾರ,ಯಳಂದೂರು
●ಫೈರೋಜ್‌ಖಾನ್