ಬೆಂಗಳೂರು: ಹೊಸ ವರ್ಷ, ಹೊಸ ಪರ್ವ. ಬದಲಾವಣೆ ಹಾಗೂ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಈ ಪವಿತ್ರವಾದ ಗಳಿಗೆಯಲ್ಲಿ ಜನರಿಗಾಗಿ ಪ್ರಜಾಧ್ವನಿ ಯಾತ್ರೆ ವಿಚಾರ ತಿಳಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜನರ ಭಾವನೆ ತಿಳಿಸಲು ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸತತವಾಗಿ ಪ್ರಯತ್ನಿಸಿದೆ. ಈ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ, ಪ್ರಜೆಗಳ ಭಾವನೆ ಆಗಿದೆ. ನಾವು ಋಣಾತ್ಮಕತೆ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಸಕಾರಾತ್ಮಕತೆ ಬಗ್ಗೆ ಯೋಚಿಸುತ್ತಿದ್ದೇವೆ ಎಂದರು.
ಕಳೆದ ಮೂರೂವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ವೈಫಲ್ಯ, ನಾವು ಜನರ ಬದುಕಿಗಾಗಿ ಏನು ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಿಲು ನಾವು ಈ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ.ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಐತಿಹಾಸಿಕ ಸ್ಥಳ ಬೆಳಗಾವಿಯ ಗಾಂಧಿ ಬಾವಿಯಿಂದ ನಾಳೆ ಈ ಯಾತ್ರೆ ಆರಂಭವಾಗುತ್ತಿದೆ. ಗಾಂಧಿಜಿ ಅವರಿಗೆ ಗೌರವ ಸಲ್ಲಿಸಿ ಯಾತ್ರೆ ಆರಂಭಿಸುತ್ತಿದ್ದೇವೆ. ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನಾಯಕತ್ವ ವಹಿಸಿಕೊಂಡ ಪುಣ್ಯ ಭೂಮಿಯಿಂದ ಯಾತ್ರೆ ಆರಂಭಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಬ್ರಿಟೀಷರನ್ನು ತೊಲಗಿಸಲು ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡರು. ಈಗ ಅದೇ ಪುಣ್ಯಭೂಮಿಯಿಂದ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಲು ಯಾತ್ರೆ ಆರಂಭಿಸುತ್ತಿದ್ದೇವೆ. ಕರ್ನಾಟಕ ರಾಜ್ಯದ ಬದಲಾವಣೆ ಹಾಗೂ ವಿಜಯಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ. ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ. ಇಡೀ ಭಾರತಕ್ಕೆ ನಮ್ಮ ಆಡಳಿತ ಮಾದರಿಯಾಗಿತ್ತು. ಇಡೀ ವಿಶ್ವದ ಉದ್ಯಮಿಗಳು ರಾಜ್ಯ ಹಾಗೂ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ಸುಕರಾಗಿದ್ದರು. ಈ ರಾಜ್ಯದ ಮೂಲಕ ದೇಶವನ್ನು ನೋಡುತ್ತಿದ್ದರು. ಆದರೆ ಇಂದು ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ಬಂದಿದೆ. ಈ ಕಳಂಕವನ್ನು ನಾವು ದೂರ ಮಾಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ವರ್ಗದವರ ಬದುಕು ಹಸನಾಗಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದ ಬಿಜೆಪಿ ರೈತರ ಬದುಕು ಹಸನು ಮಾಡಲಿಲ್ಲ. ಯುವಕರಿಗೆ ಉದ್ಯೋಗ ನೀಡಲಿಲ್ಲ. ಹೆಣದ ಮೇಲೆ ಹಣ ಮಾಡಿದ್ದಾರೆ. ಪ್ರತಿ ಇಲಾಖೆಯಲ್ಲಿ ಎಲ್ಲಾ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಅವರು 104 ಸ್ಥಾನ ಗಳಿಸಿದರು. ಜನಾದೇಶ ಇಲ್ಲದಿದ್ದರೂ ಅವರು ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ಈ ಮೂರುವರೆ ವರ್ಷಗಳ ಅಧಿಕಾರದಲ್ಲಿ ಬಿಜೆಪಿ ತಾನು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆಗಳನ್ನು ಈಡೇರಿಸಲಿಲ್ಲ. ನಾವು ಈ ಬಗ್ಗೆ ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ನಿಮ್ಮ ಹತ್ತಿರ ಉತ್ತರ ಇದೆಯಾ ಎಂದು ಕೇಳುತ್ತಿದ್ದೇವೆ. ಬಿಜೆಪಿವರು ಉತ್ತರ ನೀಡಲಾಗುತ್ತಿಲ್ಲ. ರಾಜ್ಯದ 2 ಲಕ್ಷ ಯುವಕರು ತಮಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆಯೂ ಉತ್ತರ ನೀಡಿಲ್ಲ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಭವಿಷ್ಯ ಡಾ.ಸುಧಾಕರ್ ಕೈಯಲ್ಲಿದೆ; ಸಚಿವ ಸೋಮಶೇಖರ್
2 ಲಕ್ಷ ಗುತ್ತಿಗೆದಾರರು 40 % ಕಮಿಷನ್ ಕಿರುಕುಳ ತಾಳಲಾಗುತ್ತಿಲ್ಲ ಎಂದು ಧ್ವನಿ ಎತ್ತಿದ್ದಾರೆ. ಅದಕ್ಕೂ ಈ ಸರಕಾರ ಪರಿಹಾರ ನೀಡಲಿಲ್ಲ. ಎಲ್ಲ ವರ್ಗದ ಜನ ಭಯದಲ್ಲಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ 83,190 ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1258 ಕಂಪನಿಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಇದು ರಾಜ್ಯಕ್ಕೆ ಅಪಮಾನಕರ ಸಂಗತಿ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ಮಾಡಿ ಅನ್ಯಾಯ ಎಸಗಲಾಗಿದೆ. ಐಪಿಎಸ್, ಐಎಎಸ್ ಅಧಿಕಾರಿಗಳು ಜೈಲು ಸೇರುವ ಇತಿಹಾಸವನ್ನು ಬಿಜೆಪಿ ಸೃಷ್ಟಿಸಿದೆ ಎಂದು ವ್ಯಂಗ್ಯವಾಡಿದರು.
ರೈತರ ಆದಾಯ ಡಬಲ್ ಮಾಡುತ್ತೇವೆ, ಬೆಂಬಲ ಬೆಲೆ ನೀಡುತ್ತೇವೆ ಎಂದರು. ಆದರೆ ಏನಾಯ್ತು? ರೈತನಿಗೆ ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಕೇಂದ್ರ ಸರ್ಕಾರ ಕರಾಳ ಕಾಯ್ದೆ ರದ್ದು ಮಾಡಿದರೂ ರಾಜ್ಯದಲ್ಲಿ ಮಾಡಲಿಲ್ಲ. ಇದರ ಬಗ್ಗೆ ಪ್ರಶ್ನೆ ಮಾಡಿ ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ. ನಾವು ಈ ಕೇಸ್ ಗಳಿಗೆ ಹೆದರುವುದಿಲ್ಲ ಎಂದರು.