ಬೆಂಗಳೂರು: ಸೂರ್ಯ-ಚಂದ್ರ ಇರುವವರೆಗೂ ಯಡಿಯೂರಪ್ಪ ಸಿಎಂ ಆಗಿರುತ್ತಾರೆಂದು ಹೇಳುತ್ತಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಕೊಟ್ಟಂತೆ ಯಡಿಯೂರಪ್ಪಗೆ ಬಿಜೆಪಿಯಲ್ಲಿ ವಿಶೇಷ ಸ್ಥಾನಮಾನ ಕೊಟ್ಟಿಲ್ಲ. ಇದು ಕಾರ್ಯಕರ್ತರ ಪಕ್ಷ. ಯಡಿಯೂರಪ್ಪಗೆ ಎರಡು ವರ್ಷ ಬೋನಸ್ ಸಿಕ್ಕಿದೆ. ಅದೇ ಹೆಚ್ಚು. ಇನ್ನು ಮುಂದೆ ಅವರಾಗಿಯೇ ದೂರ ಸರಿಯುವುದು ಉತ್ತಮ. ಇಲ್ಲವಾದರೆ ಎ. 17ರ ಬಳಿಕ ಶಾಸಕರು ರೊಚ್ಚಿಗೇಳುತ್ತಾರೆ ಎಂದಯು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಪಕ್ಷವಿಲ್ಲ. ವಿಪಕ್ಷ ನಾಯಕರು ಕಾವೇರಿಯಲ್ಲಿ ಯಡಿಯೂರಪ್ಪನ ಜತೆ ಇದ್ದಾರೆ. ಸಿದ್ದರಾಮಯ್ಯನವರೂ ಕಾವೇರಿ ಬಿಡಲು ಹಿಂದೇಟು ಹಾಕಿದ್ದಾರೆ. ಯಡಿಯೂರಪ್ಪ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆಯಾಗಿದೆ ಎಂದರು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಯಡಿಯೂರಪ್ಪನವರ ವಕ್ತಾರರಾ? ಅವರ ವಕ್ತಾರರ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದೆಂಬ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಇದು ನಡೆಯಲ್ಲ, ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದು ಯತ್ನಾಳ್ ಹೇಳಿದರು.
ಬೆಳಗಾವಿ ಮತ್ತು ಬಸವಕಲ್ಯಾಣಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಆದರೆ ಅವರು ಸಿಎಂ ಆಗಿದ್ದಾಗ ಅವರು ಸಮುದಾಯಕ್ಕೆ 2 ಎ ಗೆ ಸೇರಿಸಿದ್ದರು. ಹೀಗಾಗಿ ನಾನು ಪ್ರಚಾರಕ್ಕೆ ಹೋಗುತ್ತಿದ್ದೇನೆ. ಬೆಳಗಾವಿ ಮತ್ತು ಬಸವಕಲ್ಯಾಣದಲ್ಲಿ ಪಂಚಮಸಾಲಿ ಸಮುದಾಯ ಬಿಜೆಪಿ ಪರವಾಗಿ ನಿಲ್ಲುವಂತೆ ಮನವಿ ಮಾಡುತ್ತೇನೆ. ಈ ಸಿಎಂ ಮೀಸಲಾತಿ ಕೊಡದಿದ್ರು ಮುಂದೆ ಬರುವ ಸಿಎಂ ಮೀಸಲಾತಿ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ. ಮೇ ಎರಡರ ನಂತರ ಉತ್ತರ ಕರ್ನಾಟಕದ ನಾಯಕರೊಬ್ಬರು ಸಿಎಂ ಅಗುತ್ತಾರೆ ಎಂದ ಯತ್ನಾಳ್, ಮತ್ತೆ ಸಿಎಂ ಬದಲಾವಣೆಯ ಸುಳಿವು ಕೊಟ್ಟರು.