ವಿಜಯಪುರ: ನಗರದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಲಂಡನ್ ಹಾಗೂ ಟರ್ಕಿ ದೇಶಗಳಿಂದ ಅತ್ಯಂತ ಸುಧಾರಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಿದ್ಧಸಿರಿ ಶೀತಲ ಘಟಕ ಸ್ಥಾಪಿಸಲಾಗಿದೆ. ದೇಶದಲ್ಲೇ ಈ ನೂತನ ತಂತ್ರಜ್ಞಾನ ಹೊಂದಿದ ಪ್ರಥಮ ಸೌಲಭ್ಯ ಇಲ್ಲಿ ದೊರೆಯಲಿದೆ ಎಂದು ಶಾಸಕರೂ ಆಗಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸೋಮವಾರ ಐನಾಪುರ ಗ್ರಾಮದಲ್ಲಿ ನಡೆದ ಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅತಿ ಶೀಘ್ರವೇ ಸಿದ್ದೇಶ್ವರ ಶ್ರೀಗಳಿಂದ ಈ ಘಟಕ ಲೋಕಾರ್ಪಣೆಗೊಂಡು ದ್ರಾಕ್ಷಿ ಬೆಳೆಗಾರರ ಸೇವೆಗೆ ಲಭ್ಯವಾಗಲಿದೆ. ದ್ರಾಕಿ ಬೆಳೆಗಾರರಿಗಾಗಿ ಇಂತಹ ಸುಧಾರಿತ ತಂತ್ರಜ್ಞಾನದಲ್ಲಿ ಈ ಸೇವೆ ನೀಡುವ ಭಾರತದ ಪ್ರಪ್ರಥಮ ಅತ್ಯಾಧುನಿಕ ಘಟಕವಾಗಲಿದೆ ಎಂದರು.
ಸದರಿ ಯಂತ್ರ ಸಂಪೂರ್ಣ ಸ್ವಯಂ ಚಾಲಿತವಾಗಿದೆ. ಒಣದ್ರಾಕ್ಷಿಯನ್ನು ಗುಣಮಟ್ಟಕ್ಕೆ ತಕ್ಕಂತೆ ವಿಂಗಡಿಸಿ, ಸ್ವತ್ಛಗೊಳಿಸಿ ಸ್ವಯಂ ತೂಕ ಮಾಡುತ್ತದೆ. ಪ್ಯಾಕಿಂಗ್ ಮಾಡಿ ಬಾರ್‌ಕೋಡ್ ನಮೂದಿಸುವ ವ್ಯವಸ್ಥೆ ಇದೆ. ಇದರಿಂದ ರೈತರಿಗೆ ಕಡಿಮೆ ಅವ ಧಿ, ವೆಚ್ಚದಲ್ಲಿ ಉತ್ಕೃಷ್ಟ ಸೇವೆ ಸಿಗಲಿದೆ. ನೆಟ್ಟಿಂಗ್, ಶಾರ್ಟಿಂಗ್ ಮತ್ತು ಗ್ರೈಂಡಿಂಗ್ ಪ್ರತಿ ಕೆ.ಜಿ.ಗೆ ಕೇವಲ 5 ರೂ. ವಾಶಿಂಗ್ 2 ರೂ. ದರ ನಿಗದಿ ಮಾಡಲಾಗಿದೆ ಎಂದರು. ರೈತರು ಇಡಲಾದ ಪ್ರತಿ ಟನ್ ಒಣದ್ರಾಕ್ಷಿ 1 ತಿಂಗಳಿಗೆ 550 ರೂ. ಬಾಡಿಗೆ ನಿಗದಿಪಡಿಸಿದೆ. ಶೀತಲ ಘಟಕದಲ್ಲಿ ದಾಸ್ತಾನಿಗೆ ತಕ್ಕಂತೆ ರೈತರಿಗೆ ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ಮೂಲಕ ಅಡಮಾನ ಸಾಲ ನೀಡಲಾಗುತ್ತದೆ.
ಗುಣಮಟ್ಟದ ಪ್ರತಿ ಕೆ.ಜಿ.ಗೆ 100 ರೂ. ಮಾರುಕಟ್ಟೆ ಬೆಲೆಯಿಂದ ನಿಗದಿ ಮಾಡಿದ್ದು, ಶೇ. 50 ಸಾಲ ನೀಡಲಾಗುತ್ತದೆ. ರೈತರ ಬೆಳೆ ರಕ್ಷಣೆಗಾಗಿ ಉತ್ತಮ ಗುಣಮಟ್ಟದ ಕೀಟನಾಶಕ, ರಸಗೊಬ್ಬರ ಮಾರಾಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು. ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂ.ಗು. ಸಜ್ಜನ, ಜಗದೀಶ ಕ್ಷತ್ರಿ, ರಾಮನಗೌಡ ಪಾಟೀಲ ಯತ್ನಾಳ, ಶೈಲಜಾ ಪಾಟೀಲ ಯತ್ನಾಳ, ಸೀಮಾ ಕೋರೆ, ಶಿವಾನಂದ ಅಣ್ಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಗಣಪತಿ ಜಾಧವ, ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಬಾ ಖಂಡಾಗಳೆ, ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಇದ್ದರು.