ಬೆಂಗಳೂರು: ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವೇಶತೀರ್ಥರ ಅಂತಿಮ ವಿಧಿಗಳನ್ನು ಸನ್ಯಾಸಿ ಧರ್ಮ ಮತ್ತು ಮಾಧ್ವ ಪರಂಪರೆಯ ಪ್ರಕಾರ ನಡೆಸಲಾಯಿತು. ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಿಂದ ಶ್ರೀಗಳ ಕಾಯವನ್ನು ತಂದ ಬಳಿಕ ಅಂತಿಮ ಸಂಸ್ಕಾರವನ್ನು ಅವರೇ ಬಯಸಿದಂತೆ ಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿ ಅವರು ಉಳಿದುಕೊಳ್ಳುತ್ತಿದ್ದ ಕೊಠಡಿ ಪಕ್ಕದ ಜಾಗದಲ್ಲಿ ನೆರವೇರಿಸಲಾಯಿತು.
ಸ್ನಾನ, ಗೋಪೀಚಂದನ ಧಾರಣೆ: ನ್ಯಾಶನಲ್ ಕಾಲೇಜು ಮೈದಾನದಿಂದ ಶರೀರವನ್ನು ಬೆತ್ತದ ಬುಟ್ಟಿಯಲ್ಲಿ ತರಲಾಯಿತು. ಅನಂತರ ಶ್ರೀಗಳ ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಿ, ಗೋಪೀಚಂದನ ಧಾರಣೆ ಮಾಡಲಾಯಿತು.
ಶ್ರೀಕೃಷ್ಣನಿಗೆ ಆರತಿ: ಯತಿವರೇಣ್ಯರ ಶರೀರವನ್ನು ವಿದ್ಯಾಪೀಠದಲ್ಲಿರುವ ಕೃಷ್ಣ ಮಂದಿರದೊಳಕ್ಕೆ ತಂದು, ಶ್ರೀಕೃಷ್ಣನಿಗೆ ಆರತಿ ಮಾಡಿಸಲಾಯಿತು. ಪಕ್ಕದಲ್ಲೇ ಇರುವ ಮಧ್ವಾಚಾರ್ಯರಿಗೂ ಆರತಿ ಬೆಳಗಿಸಲಾಯಿತು. ಅನಂತರ ಶ್ರೀಗಳ ಪಾರ್ಥಿವ ಶರೀರವನ್ನು ಕೃಷ್ಣ ಮಂದಿರಕ್ಕೆ ಪ್ರದಕ್ಷಿಣೆ ತರಲಾಯಿತು. ಅಲ್ಲಿಂದ ಹೊರಾವರಣದಲ್ಲೊಮ್ಮೆ ಪ್ರದಕ್ಷಿಣೆ ಹಾಕಲಾಯಿತು. ಈ ನಡುವೆ ಮಂತ್ರ ಪಠಣ ನಿರಂತರವಾಗಿತ್ತು. ಶರೀರ ತ್ಯಜಿಸಿದ ಬಳಿಕ ಸನ್ಯಾಸಿಗಳು ವಿಷ್ಣುಸಾಯುಜ್ಯ ಹೊಂದುತ್ತಾರೆ. ಅವರು ವೃಂದಾವನಸ್ಥರಾಗುವ ಸ್ಥಳ ಪೂಜನೀಯಗೊಳ್ಳುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ವೃಂದಾವನಕ್ಕೆ ಬೇಕಾದ ಜಾಗ ಸಿದ್ಧ ಪಡಿಸಲಾಗಿತ್ತು.
ಸ್ಥಳಶುದ್ಧಿ: ಸ್ವಾಮೀಜಿಗಳು ವೃಂದಾವನಸ್ಥರಾಗುವ ಸ್ಥಳವನ್ನು ಆರಂಭದಲ್ಲಿ ಶುದ್ಧಗೊಳಿಸಲಾಯಿತು. ಬಳಿಕ ದಭೆìಯನ್ನು ಉರಿಸಿ ವೃಂದಾವನಕ್ಕೆ ಒಂದು ಸುತ್ತು ತರಲಾಯಿತು. ಉಪ್ಪಿನಿಂದ ಶುದ್ಧಿಗೊಳಿಸಿ ಬಳಿಕ ಸೂಕ್ಷ್ಮರೂಪದ ದೋಷಗಳನ್ನು ನಿವಾರಿಸುವ ತಂತ್ರ ವಿಧಿಯನ್ನು ನಡೆಸಲಾಯಿತು. ಬಳಿಕ ವೃಂದಾವನದೊಳಕ್ಕೆ ಉಪ್ಪು, ಹತ್ತಿ, ಪಚ್ಚಕರ್ಪೂರ, ಕಾಳುಮೆಣಸನ್ನು ಹಾಕಲಾಯಿತು. ಪದ್ಮಾಸನಸ್ಥ ಶ್ರೀಗಳ ಶರೀರದ ಕತ್ತಿನ ವರೆಗೆ ಮುಚ್ಚುವಂತೆ ಮಣ್ಣು ಹಾಕಲಾಯಿತು.
ಬ್ರಹ್ಮರಂಧ್ರಛೇದ: ಸನ್ಯಾಸಿಯ ಪ್ರಾಣವನ್ನು ಶರೀರದಿಂದ ಬೇರ್ಪಡಿಸುವ ಸಾಂಕೇತಿಕ ಕ್ರಿಯೆಯನ್ನು ನಡೆಸಲಾಯಿತು. ಮಂತ್ರಪಠಣದ ಜತೆಗೆ ತೆಂಗಿನಕಾಯಿ ಒಡೆದು ಅದರ ನೀರನ್ನು ನೆತ್ತಿಯ ಮೇಲೆ ಬಿಡಲಾಯಿತು. ಅನಂತರ ಮತ್ತೆ ಪಚ್ಚಕರ್ಪೂರವನ್ನು ಸುರಿಯಲಾಯಿತು. ಇದೇ ವೇಳೆ ನೆತ್ತಿಯನ್ನು ತಾಕುವಂತೆ, ಸಾಲಿಗ್ರಾಮಗಳು ತುಂಬಿದ್ದ ಪಾತ್ರೆಯೊಂದನ್ನು ಇರಿಸಲಾಯಿತು. ಅನಂತರ ತಲೆಯನ್ನು ಪೂರ್ಣ ಮುಚ್ಚಲಾಯಿತು. ಮುಂದೆ ಪೂರ್ಣಪ್ರಮಾಣದಲ್ಲಿ ವೃಂದಾವನ ನಿರ್ಮಿಸುವ ಉದ್ದೇಶದಿಂದ ಸಾಂಕೇತಿಕವಾಗಿ ಕಲ್ಲೊಂದನ್ನು ಇರಿಸಲಾಯಿತು.
48 ದಿನಗಳ ಅನಂತರ ಸಂಪ್ರೋಕ್ಷಣೆ: ಅಂತ್ಯವಿಧಿಗಳು ಮುಗಿದ 48 ದಿನಗಳ ಅನಂತರ ವೃಂದಾವನದಲ್ಲಿ ಇರಿಸಿರುವ ಸಾಲಿಗ್ರಾಮ ಪಾತ್ರೆ ಸಿಗುವವರೆಗೆ ಮಣ್ಣನ್ನು ಬಿಡಿಸಲಾಗುತ್ತದೆ. ಅಲ್ಲಿಗೆ ನಿತ್ಯಾಭಿಷೇಕ ಮಾಡಲು ನೀರು ತಲುಪುವಂತೆ ನಾಳವೊಂದನ್ನು ಜೋಡಿಸಲಾಗುತ್ತದೆ. ಶ್ರೀಗಳು ವೃಂದಾವನಸ್ಥರಾದ ಜಾಗಕ್ಕೆ ಮುಂದೆ ನಿತ್ಯಪೂಜೆ ಸಲ್ಲುತ್ತದೆ.