ನರಾಚಿಗೆ ಎಂಟ್ರಿ ಕೊಟ್ಟ ರಾಕಿ (ಯಶ್) ಕೊನೆಯವರೆಗೂ ರಾಜನ ಹಾಗೆಯೇ ಉಳಿದನೇ ಎನ್ನುವುದನ್ನು ಇಂದು ತೆರೆಕಂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ಒನ್ ಲೈನ್. ಆಕ್ಷನ್ ಸಿನಿಮಾದಲ್ಲಿ ಕೆಲವೊಂದು ಸನ್ನಿವೇಶದಲ್ಲಿ ರೋಮಾಂಚನಕಾರಿ ದೃಶ್ಯಗಳು ಇರುವುದು ಸಾಮಾನ್ಯ. ಆದರೆ ಇಲ್ಲಿ ಗೂಸ್ ಬಂಪ್ ಬರಬಹುದಾದ ದೃಶ್ಯಗಳೇ ತುಂಬಿದೆ. ನಿರ್ದೇಶಕ ಪ್ರಶಾಂತ್ ನೀಲ್ ತನ್ನ ಕಥೆಯ ನರಾಚಿ ಜಗತ್ತನ್ನು ತುಂಬ ಅದ್ದೂರಿಯಾಗಿ ಪ್ರೇಕ್ಷಕನ ಮುಂದಿರಿಸಿದ್ದಾರೆ.
ಬರವಣಿಗೆ ವಿಚಾರದಲ್ಲಿ ಮೊದಲ ಭಾಗದ ಮಾದರಿಯಲ್ಲಿ ಕಂಡುಬಂದರೂ, ರಬ್ಬರ್ ಬ್ಯಾಂಡ್ ಎಫೆಕ್ಟ್ ರೀತಿಯ ಚಿತ್ರಕಥೆ ಅದನ್ನೆಲ್ಲ ಮರೆಸಿ ಬಿಡುತ್ತದೆ.
ರಾಕಿಯ ಪ್ರತಿಯೊಂದು ಬಿಲ್ಡ್ ಅಪ್ ಸನ್ನಿವೇಶಗಳು ಮಾಸ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಯಶ್ ಪಾತ್ರಕ್ಕೆ ಕೊಡುವ ಬಿಲ್ಡಪ್. ರಾಕಿ ಯಾರಿಗೂ ಕಡಿಮೆಯಿಲ್ಲ ಎಂದು ಪ್ರತಿ ದೃಶ್ಯದಲ್ಲೂ ಕಟ್ಟಿಕೊಟ್ಟಿದ್ದಾರೆ ಡೈರೆಕ್ಟರ್ ನೀಲ್.
ಕೆಜಿಎಫ್ ಚಾಪ್ಟರ್ 2 ಚಿತ್ರದ ದೊಡ್ಡ ಪ್ಲಸ್ ಸ್ಟೇಜಿಂಗ್. ಪ್ರತಿಯೊಂದು ಹಂತದಲ್ಲೂ ಪ್ರೇಕ್ಷಕನಿಗೆ ಹೀರೋಯಿಸಂ ಫೀಲ್ ಕೊಡುವ ನಿರ್ದೇಶನವೇ ಇಲ್ಲಿ ಮಾಸ್ಟರ್.
ಮೊದಲ ಭಾಗದ ಫ್ರೆಶ್ ನೆಸ್ ಮತ್ತು ರೋಚಕತೆ ಕಡಿಮೆಯಿದ್ದರೂ, ಇಲ್ಲಿ ರಾಕಿ ಭಾಯ್ ಹವಾ ಇಲ್ಲಿ ಹೆಚ್ಚಿದೆ. ಚಿತ್ರದ ಎಲ್ಲಾ ಬಹುಪಾಲು ಯಶ್ ಅಕ್ರಮಿಸಿದ್ದು ಅವರಿಗೆ ಬಿಟ್ಟರೆ ಇಲ್ಲಿ ಬೇರೆಯವರಿಗೆ ಅಷ್ಟು ಸ್ಕೋಪ್ ಇಲ್ಲ. ಫೋರ್ ಶ್ಯಾಡೋ ನಂತಹ ತಂತ್ರಗಳನ್ನು ಚಿತ್ರಕಥೆಯಲ್ಲಿ ಉತ್ತಮವಾಗಿ ಬಳಸಲಾಗಿದೆ.
ಸುಲ್ತಾನನ ಅಬ್ಬರದ ಮಧ್ಯೆ ಭಾವನೆಗಳನ್ನು ಮಿಳಿತಗೊಳಿಸಿದ್ದು, ಚಿತ್ರದ ಅತೀ ದೊಡ್ಡ ಪ್ಲಸ್. ಅಂತೆಯೇ ರಾಕಿ ಭಾಯ್ ಅಬ್ಬರಕ್ಕೆ ಬ್ರೇಕ್ ಹಾಕುವುದೂ ಇದೇ ಭಾವನೆಗಳು.
ಪ್ರತಿಯೊಂದು ತಂತ್ರಜ್ಞಾನ ವಿಭಾಗವು ಮಾನ್ ಸ್ಟರ್ ರೀತಿಯಲ್ಲಿ ಕೆಲಸ ಮಾಡಿದೆ. ರಾಕಿಯ ಸಾಮ್ರಾಜ್ಯ ನಿರ್ಮಾಣದಲ್ಲಿ ಛಾಯಾಗ್ರಹಕ ಭುವನ್ ತನ್ನ ಎಲ್ಲಾ ಜಾಣ್ಮೆ ಉಪಯೋಗಿಸಿದ್ದಾರೆ. ಕೆಜಿಎಫ್ 2 ಚಿತ್ರದ ನಿಜವಾದ ಸುಲ್ತಾನ್ ರವಿ ಬಸ್ರೂರ್. ಇವರ ಸೌಂಡ್ ಡಿಸೈನ್ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಬೂಸ್ಟ್ ನೀಡಿದೆ. ಎಲ್ಲಾ ತಂತ್ರಜ್ಞರು ಅದ್ಭುತ ರೀತಿಯಲ್ಲಿ ಕೆಲಸ ಮಾಡಿದ್ದು, ಪ್ರಶಾಂತ್ ನೀಲ್ ಕನಸಿಗೆ ಜೀವ ತುಂಬಿದ್ದಾರೆ.
ಇದನ್ನೂ ಓದಿ:ತೂಫಾನ್ ಎಬ್ಬಿಸಿದ ‘ಕೆಜಿಎಫ್ ಚಾಪ್ಟರ್ 2’; ಸಿನಿಮಾ ನೋಡಿದ ಅಭಿಮಾನಿಗಳು ಏನಂತಾರೆ?
ಕೆಜಿಎಫ್ ಪ್ರಪಂಚದ ರಕ್ತಸಿಕ್ತ ಅಧ್ಯಾಯದ ನಡುವೆ ಸುಂದರ ಹೂವಿನಂತೆ ನಾಯಕಿ ಶ್ರೀನಿಧಿ ಶೆಟ್ಟಿ ಮಿಂಚಿದ್ದಾರೆ. ಅಧೀರ ಪಾತ್ರದಲ್ಲಿ ಸಂಜಯ್ ದತ್, ಪ್ರಧಾನಿ ಪಾತ್ರದಲ್ಲಿ ರವೀನಾ ಟಂಡನ್ ಗಮನ ಸೆಳೆಯುತ್ತಾರೆ. ಉಳಿದಂತೆ ಪ್ರಕಾಶ್ ರೈ, ಮಾಳವಿಕಾ, ನಾಗಭರಣ, ರಾವ್ ರಮೇಶ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಚಿತ್ರಕಥೆ ರೋಚಕವಾಗಿದ್ದರೂ ಅನೇಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಮುಖ್ಯವಾಗಿ ಪ್ರಿ ಕ್ಲೈಮ್ಯಾಕ್ಸ್ ದೃಶ್ಯಗಳು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ.
ಗರುಡನನ್ನು ಕೊಂದು ಕೆಜಿಎಫ್ ನ ಸಾಮ್ರಾಜ್ಯದಲ್ಲಿ ಹೊಸ ರಾಜನಾದ ರಾಕಿ ಭಾಯ್, ಅಮ್ಮ ಹೇಳಿದ ಮಾತನ್ನು ಉಳಿಸಿಕೊಳ್ಳಲು ಹೇಗೆಲ್ಲ ಹೋರಾಡಿದ? ಈ ಹೋರಾಟದ ಹಾದಿಯಲ್ಲಿ ರಾಕಿ ಭಾಯ್ ಸೃಷ್ಟಿಸಿದ ತೂಫಾನ್ ನ ಅಬ್ಬರ ಹೇಗಿದೆ? ತನ್ನ ಸಾಮ್ರಾಜ್ಯವನ್ನು ನಾಶ ಮಾಡಲು ಬರುವ ಬಿರುಗಾಳಿಯಂತಹ ವಿಲನ್‌ಗಳ ಎದುರು ರಾಕಿಯ ಚಂಡಮಾರುತ ಹೇಗಿದೆ ಎನ್ನುವುದನ್ನು ನೀವು ಚಲನಚಿತ್ರ ಮಂದಿರಲ್ಲೇ ನೋಡಬೇಕು.
ಆದರೆ ಒಂದು ವಿಚಾರ, ಚಿತ್ರ ಮುಗಿಯಿತು ಎಂದು ಮೊದಲೇ ಎದ್ದು ಬರಬೇಡಿ, ದೊಡ್ಡದೊಂದು ಟ್ವಿಸ್ಟ್ ಕೊನೆಯಲ್ಲಿದೆ.
ಮನೋಷ್ ಕುಮಾರ್ ಎನ್ ಬಸ್ರೀಕಟ್ಟೆ