Advertisement

ಜ.1 ರಿಂದ ಯಶಸ್ವಿನಿ ಪುನರಾರಂಭ: ಯೋಜನೆ ವೈಜ್ಞಾನಿಕವಾಗಿರಲಿ

01:55 PM Dec 18, 2022 | Team Udayavani |

ವಿಜಯಪುರ: ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮರಳಿ ಅನುಷ್ಠಾನಕ್ಕೆ ಮುಂದಾಗಿದೆ. ಬೆಂಗಳೂರಿನ ಕಾರ್ಪೋರೇಟ್ ಲಾಬಿಯಿಂದಾಗಿ ಅವೈಜ್ಞಾನಿಕ ದರ ನಿಗದಿ ಮಾಡಿದೆ. ಹೀಗಾಗಿ ಸರ್ಕಾರಕ್ಕೆ ನಾವು ಮಾಡುವ ಮನವಿಗೆ ಸ್ಪಂದಿಸದಿದ್ದರೆ ಕೋರ್ಟ್ ಮೊರೆ ಹಾಗುತ್ತೇವೆ, ಲೋಕಾಯುಕ್ತಕ್ಕೂ ದೂರು ನೀಡುತ್ತೇವೆ ಎಂದು ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘ ಎಚ್ಚರಿಸಿದೆ.

Advertisement

ಭಾನುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘ ಜಿಲ್ಲಾಧ್ಯಕ್ಷ ಡಾ.ರವಿ ಚೌಧರಿ, ಯಶಸ್ವಿನಿ ಯೋಜನೆ ಮಾಜಿ ಟ್ರಸ್ಟಿ ಡಾ.ಎಲ್.ಎಚ್.ಬಿದರಿ, ಯಶಸ್ವಿನಿ ಯೋಜನೆ ಪುನರಾರಂಭದ ಕುರಿತು ದರ ಪರಿಷ್ಕರಣೆಗೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆ ಅನ್ವಯಿಸಿಕೊಳ್ಳದೇ, ಹೋರಾಟಕ್ಕೆ ಇಳಿಯಲಿವೆ ಎಂದರು.

ಬಡವರು, ರೈತರು, ಕಾರ್ಮಿಕರಂಥ ಆರ್ಥಿಕ ದುರ್ಬಲರಿಗೆ ಆರೋಗ್ಯ ಸೇವೆ ನೀಡುವಲ್ಲಿ ಯಶಸ್ವಿನಿ ಯೋಜನೆ ದೇಶಕ್ಕೆ ಮಾದರಿಯಾಗಿತ್ತು. ವಿದೇಶಿಗರೂ ಇದನ್ನು ಮೆಚ್ಚಿದ್ದರು. ಆದರೆ ಸರ್ಕಾರ ಸಣ್ಣ ಲೋಪಗಳನ್ನು ಮುಂದಿಟ್ಟುಕೊಂಡು ಯಶಸ್ವಿನಿ ಯೋಜನೆಯನ್ನು ಸ್ಥಗಿತಗೊಳಿಸಿತ್ತು ಎಂದು ವಿವರಿಸಿದರು.

ಇದೀಗ 2023 ಜನೇವರಿ 1 ರಿಂದ ಯಶಸ್ವಿನಿ ಯೋಜನೆಯನ್ನು ಪುನರಾರಂಭಿಸಲು ಮುಂದಾಗಿದ್ದು, ಖಾಸಗಿ ವೈದ್ಯರನ್ನು ಸಂಪರ್ಕಿಸದೇ ಕಾರ್ಪೋರೇಟ್ ಲಾಬಿಗೆ ಮಣಿದು ಯಶಸ್ವಿನಿ ಯೋಜನೆಯ ಅವೈಜ್ಞಾನಿಕ ದರ ನಿಗದಿ ಮಾಡಿದೆ. ಸರ್ಕಾರ ನಿಗದಿ ಮಾಡಿರುವ ಪ್ರಸ್ತುತ ದರಕ್ಕೆ ಬೆಲೆ ಏರಿಕೆ ಈ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಾಧ್ಯವಿಲ್ಲ ಎಂದರು.

ಬದಲಾದ ಕಾಲಘಟ್ಟದಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ವಹಣೆ, ಲೈಸೆನ್ಸ್ ಅಂತೆಲ್ಲ ಹತ್ತು ಹಲವು ರೀತಿಯಲ್ಲಿ ಸರ್ಕಾರಕ್ಕೆ ಶುಲ್ಕ, ತೆರಿಗೆ ಭರಿಸಬೇಕಿದೆ. ಇಷ್ಟೆಲ್ಲದರ ಮಧ್ಯೆ ಖಾಸಗಿ ಆಸ್ಪತ್ರೆಗಳ ಕಟ್ಟಡ ನಿರ್ಮಾಣ, ಆಧುನಿಕ ಯಂತ್ರೋಪಕರಣಗಳ ಸೌಲಭ್ಯ ಕಲ್ಪಿಸಿಕೊಳ್ಳಲು ಕೋಟಿ ಕೋಟಿ ರೂ. ಖರ್ಚು ಮಾಡುವ ಖಾಸಗಿ ಆಸ್ಪತ್ರೆಗಳ ತಾಪತ್ರಯ ಏನೆಂದು ಅರಿಯುವ ಕೆಲಸ ಮಾಡಿಲ್ಲ ಎಂದು ದೂರಿದರು.

Advertisement

ಯಶಸ್ವಿನಿ ಯೊಜನೆ ಅನುಷ್ಠಾನದಿಂದ ಬೆಂಗಳೂರು ಭಾಗದ ಕಾರ್ಪೋರೇಟ್ ಆಸ್ಪತ್ರೆಗಳಿಗೆ ಉತ್ತರ ಕರ್ನಾಟಕ ಭಾಗದ ರೋಗಿಗಳು ಹೋಗುವುದಿಲ್ಲ. ಇದರಿಂದ ತಮಗೆ ಆದಾಯ ಕಡಿಮೆ ಆಗಲಿದೆ ಎಂದು ಕಾರ್ಪೋರೇಟ್ ವಲಯ ಲಾಬಿ ಮಾಡುತ್ತಿದೆ. ಮತ್ತೊಂದೆಡೆ ಸರ್ಕಾರಿ ಅಧಿಕಾರಿ ವಲಯ ಯಶಸ್ವಿ ಯೋಜನೆಯಿಂದ ತಮಗೆ ಲಾಭವಾಗದೆಂದು ಅದಾದರ ತೋರುತ್ತಿರುವುದೇ ಈ ದುರವಸ್ಥೆಗೆ ಕಾರಣ ಎಂದು ಕಿಡಿ ಕಾರಿದರು.

ಸರ್ಕಾರ ಜನೇವರಿ 1 ರಿಂದ ಯಶಸ್ವಿನಿ ಯೋಜನೆನನ್ನು ಪುನರಾರಂಭಿಸಲು ಯೋಜಿಸಿದ್ದರೂ, ಚಿಕಿತ್ಸಾ ವೆಚ್ಚದ ದರ ನಿಗದಿ ಮಾಡುವಾಗ ಖಾಸಗಿ ಆಸ್ಪತ್ರೆಗಳ ಭಾವನೆ ಆಲಿಸಿಲ್ಲ. ನಮ್ಮ ಸಮಸ್ಯೆಗಳೇನೆಂದು ಅರಿಯುವ ಕೆಲಸ ಮಾಡಿಲ್ಲ. ಹೀಗಾಗಿ ಸರ್ಕಾರ ಪುನರಾರಂಭಿಸಲು ಮುಂದಾಗಿರುವ ಯಶಸ್ವಿನಿ ಯೋಜನೆಯನ್ನು ಅಳವಡಿಸಿಕೊಳ್ಳದಿರಲು ಖಾಸಗಿ ಆಸ್ಪತ್ರೆಗಳು ನಿರ್ಧರಿಸಿವೆ ಎಂದರು.

ಬಡವರ ಆರೋಗ್ಯ ಸೇವೆಯ ವಿಷಯದಲ್ಲಿ ಸರ್ಕಾರದ ನೀತಿ ಹಾಗೂ ಅವೈಜ್ಞಾನಿಕ ದರ ಹೇರಿಕೆ ಬಗ್ಗೆ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಶಿಸುತ್ತೇವೆ. ಇದರ ಹೊರತಾಗಿ ಕಾನೂನು ಹೋರಾಟಕ್ಕೆ ಪರಿಣಿತರ ಸಲಹೆ ಪಡೆಯುತ್ತಿದ್ದೇವೆ. ಲೋಕಾಯುಕ್ತಕ್ಕೂ ದೂರು ನೀಡಲು ಯೋಚಿಸುತ್ತಿದ್ದೇವೆ ಎಂದು ವಿವರಿಸಿದರು.

ಸರ್ಕಾರ ಬೆಂಗಳೂರಿನಲ್ಲಿ ಹತ್ತಾರು ವೈದ್ಯಕೀಯ ಕಾಲೇಜುಗಳು, ಬಹುತೇಕ ಒಂದೊಂದು ರೋಗ-ಬಾಧೆಗೆ ಸಂಶೋದನಾ ಆಸ್ಪತ್ರೆಗಳನ್ನು ಹೊಂದಿದೆ. ಆದರೆ ಉತ್ತರ ಕರ್ನಾಟಕಕ್ಕೆ, ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಆರೋಗ್ಯ ಸೇವೆಗೆ ಸರ್ಕಾರ ನೀಡಿದ ಕೊಡುಗೆ ಏನು ಎಂದು ಪೃಶ್ನಿಸಿದ ವೈದ್ಯರು, ಬೆಳಗಾವಿ-ಕಲಬುರ್ಗಿ ಮಧ್ಯದಲ್ಲಿರುವ ವಿಜಯಪುರ ಜಿಲ್ಲೆಗೆ ಆರೋಗ್ಯಸೌಧ ನಿರ್ಮಿಸುವಂತೆ ಆಗ್ರಹಿಸಿದರು.

ಪ್ರಸೂತಿ ತಜ್ಞೆ ಡಾ.ಜ್ಯೋತಿ ಕೊರಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next