Advertisement

ಅಭಿಜಾತ ಕಲಾವಿದ ಜಲವಳ್ಳಿ 

12:30 AM Mar 15, 2019 | |

ಬಡಗುತಿಟ್ಟು ಯಕ್ಷಗಾನದಲ್ಲಿ ತಮ್ಮ ವಿಶಿಷ್ಟ ವೇಷಗಾರಿಕೆ,ಹೆಜ್ಜೆಗಾರಿಕೆ, ರಂಗ ಚಲನೆ, ಅಭಿನಯ, ಹಿತಮಿತವಾದ ಪ್ರಬುದ್ಧ ಮಾತುಗಾರಿಕೆಯಿಂದ ರಂಜಿಸಿದ ಜಲವಳ್ಳಿ ವೆಂಕಟೇಶ್‌ ರಾವ್‌ 86ರ ಹರೆಯದಲ್ಲಿ ನಿಧನರಾದರು. 

Advertisement

ಜಲವಳ್ಳಿಯವರು ಓದಿದ್ದು ಬರೇ ಎರಡನೇ ತರಗತಿಯವರೆಗೆ. ಯಕ್ಷಗಾನ ಕುರಿತ ತೀವ್ರ ತುಡಿತ ಅವರು ಯಕ್ಷಗಾನ ಸೇರಲು ಕಾರಣವಾಯಿತು. ಹದಿನಾರರ ಹರಯದಲ್ಲೇ ಗುಂಡುಬಾಳ ಮೇಳ ಸೇರಿದರು. ಗುಂಡುಬಾಳ ರಂಗಸ್ಥಳವೇ ಅವರ ಕಲಿಕೆಯ ಕೇಂದ್ರವಾಯಿತು. ಅವರದ್ದು ಏಕಲವ್ಯ ಪ್ರತಿಭೆ, ನೋಡಿ ಕಲಿತದ್ದೇ ಹೆಚ್ಚು. ಹತ್ತು ವರ್ಷದಲ್ಲಿ ಶ್ರೇಷ್ಠ ಕಲಾವಿದರಾಗಿ ಮೂಡಿಬಂದರು. ಮುಂದೆ ಎರಡು ವರ್ಷ ಕೆರೆಮನೆ ಇಡಗುಂಜಿ ಮೇಳದಲ್ಲಿ ಕಲಾ ವ್ಯವಸಾಯ ಮಾಡಿದರು. ಮುಂದೆ ಕೊಂಡದಕುಳಿ ಮೇಳಕ್ಕೆ ಸ್ತ್ರೀ ವೇಷಧಾರಿಯಾಗಿ ಸೇರಿಕೊಂಡರು. ಕೊಳಗಿಬೀಸ್‌ ಮೇಳದಲ್ಲಿ ಮೂರೂರು ದೇವರು ಹೆಗಡೆ, ಆ್ಯಕ್ಟರ್‌ ಜೋಶಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮೊದಲಾದ ಮೇರು ಕಲಾವಿದರೊಂದಿಗೆ ಸೇರಿಕೊಂಡು ಹಲವು ಪೌರಾಣಿಕ ಪ್ರಸಂಗಗಳನ್ನು ಜನಪ್ರಿಯಗೊಳಿಸಿದರು. ಅನಂತರ ಮೂರು ವರ್ಷ ತೆಂಕಿನ ಸುರತ್ಕಲ್‌ ಮೇಳದಲ್ಲಿ ಕಲಾಸೇವೆಗೈದರು. ಶೇಣಿ ಗೋಪಾಲಕೃಷ್ಣ ಭಟ್ಟರ ಒಡನಾಟವು ಇವರು ಮಾತುಗಾರಿಕೆಯಲ್ಲಿ ಪ್ರೌಢತೆ ಸಾಧಿಸಲು ಕಾರಣವಾಯಿತು. ಅಲ್ಲಿಯೂ ಶನೀಶ್ವರ ಮಹಾತೆ¾, ಗುಣ ಸುಂದರಿ ಮೊದಲಾದ ಪ್ರಸಂಗಗಳ ಯಶಸ್ಸಿನಲ್ಲಿ ಇವರ ಕೊಡುಗೆ ಗಮನಾರ್ಹ. ಶನೀಶ್ವರ ಮಹಾತೆ¾ಯ ಶನಿಯ ಪಾತ್ರಕ್ಕೊಂದು ರೂಪ ಕೊಟ್ಟವರೇ ಇವರು. ಆಗಲೇ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರೆಂಬ ಖ್ಯಾತಿಯನ್ನು ಸಂಪಾದಿಸಿದರು. ಸಾಲಿಗ್ರಾಮ ಮೇಳದಲ್ಲಿ ಸುದೀರ್ಘ‌ ಎರಡುವರೆ ದಶಕಗಳ ತಿರುಗಾಟ ನಡೆಸಿದರು. ಮುಂದೆ ಪೆರ್ಡೂರು, ಕಮಲ ಶಿಲೆ, ಗೋಳಿಗರಡಿ ಮೇಳವೂ ಸೇರಿದಂತೆ ಒಟ್ಟು ಆರು ದಶಕಗಳ ಕಲಾವ್ಯವಸಾಯ ಮಾಡಿದ್ದಾರೆ.

ಗುಂಡುಬಾಳದಲ್ಲಿರುವಾಗಲೇ ಚಿಟ್ಟಾಣಿ-ಜಲವಳ್ಳಿಯವರ ಜೋಡಿ ವಿಶೇಷ ಆಕರ್ಷಣೆಯಾಗಿತ್ತು. ಮುಂದೆ ದಶಕಗಳ ಕಾಲ ಚಿಟ್ಟಾಣಿಯವರ ಮತ್ತು ಇವರ ಕೌರವ-ಭೀಮ, ರುದ್ರಕೋಪ-ರಕ್ತಜಂಘ, ಭಸ್ಮಾಸುರ-ಈಶ್ವರ, ಕೀಚಕ-ವಲಲ, ಕಾರ್ತವೀರ್ಯ-ರಾವಣ ಹೀಗೆ ಪೌರಾಣಿಕ ಹಲವು ಜೋಡಿಗಳು ಯಕ್ಷಗಾನ ಕಲಾ ರಸಿಕರ ಸ್ಮತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. 

ಅವರೊಬ್ಬ ಅಭಿಜಾತ ಕಲಾವಿದ. ಪ್ರಮಾಣ ಬದ್ಧ ಶರೀರ, ಶೃತಿ ಬದ್ಧ ಶಾರೀರ, ಅದ್ಭುತ ಲಯ ಇವೆಲ್ಲ ಅವರಿಗೆ ದೈವದತ್ತ ಕೊಡುಗೆ. ಅವರು ಯಾರನ್ನೂ ಅನುಕರಿಸಿದವರಲ್ಲ. ಅವರನ್ನೂ ಅನುಕರಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದೇ ಅವರ ಅನನ್ಯತೆ. ಅವರ ಮುಖ ವರ್ಣಿಕೆಯಲ್ಲೂ ಅಚ್ಚುಕಟ್ಟುತನ, ಸ್ವಂತಿಕೆ ಎದ್ದು ಕಾಣುತಿತ್ತು. ಅವರು ಹುಬ್ಬನ್ನು ಬರೆಯುವ ಕ್ರಮವೇ ಉಳಿದವರಿಗಿಂತ ಭಿನ್ನ. ವಿಶಾಲ ಹಣೆ ಅದಕ್ಕೆ ಅನುಕೂಲ ಒದಗಿಸಿತ್ತು. ಸಹಜ ಹುಬ್ಬಿರುವ ಜಾಗದಲ್ಲಿ ಬಣ್ಣ ಹಚ್ಚುತ್ತಿದ್ದರು. ಇದರಿಂದ ಅವರ ಕಣ್ಣಿನ ಚಲನೆ ನೀಡುತ್ತಿದ್ದ ಪರಿಣಾಮವೇ ಬೇರೆ. ಖಳ ಪಾತ್ರಗಳಿಗಂತೂ ಇದು ವಿಶೇಷ ಮೆರಗು ನೀಡುತ್ತಿತ್ತು. ದೊಡ್ಡ ಗಾತ್ರದ ಹುರಿ ಮೀಸೆಯ ಚಂದ ಅನ್ಯತ್ರ ದುರ್ಲಭ. ಅವರ ಹೆಜ್ಜೆ, ಮೈ-ಕೈ ಚಲನೆ ಎಲ್ಲವೂ ಲಯಬದ್ಧ. ರಂಗ ಚಲನೆ, ಮಾತುಗಾರಿಕೆ ಎರಡರಲ್ಲೂ ಗಾಂಭೀರ್ಯ ಉಳಿಸಿಕೊಂಡು ಪಾತ್ರ ಚಿತ್ರಿಸುತ್ತಿದ್ದರು. ಎರಡು ಸುತ್ತು ಮೂರು ಗತ್ತು ಎಂಬುದು ಅವರ ಬಗ್ಗೆ ಇದ್ದ ಪ್ರತೀತಿ. ಕಡಿಮೆ ಮಾತಿನಲ್ಲಿ ಹೆಚ್ಚು ಪರಿಣಾಮ ಹೇಗೆಂಬುದಕ್ಕೆ ಅವರ ಮಾತು ಉತ್ಕೃಷ್ಟ ಮಾದರಿ. ಬಳಸುವ ಪದ ಅದನ್ನು ಪ್ರಯೋಗಿಸುವ ರೀತಿ ಸ್ವರದ ಏರಿಳಿತ ಇಷ್ಟರಿಂದಲೆ ಮಾತಿನ ಗರಿಷ್ಟ ಸಾಧ್ಯತೆಯನ್ನು ತಲಪುತಿದ್ದರು. ಸಂವಾದದ ಸಂದರ್ಭದಲ್ಲಿ ಅಸಾಧಾರಣ ಪ್ರತ್ಯುತ್ಪನ್ನಮತಿತ್ವ ಎದುರಾಳಿಯನ್ನು ಹತತ್ರಾಣನನ್ನಾಗಿಸುತಿತ್ತು. ಭಾವ ಭಾಷೆಗಳ ಸಮನ್ವಯ ಸಾಧಿಸಿದ ಕಲಾವಿದ. ಯಮ, ಘಟೋತ್ಕಚ, ಕಂಸ, ಬಲರಾಮ ಹೀಗೆ ಅನೇಕ ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಕಟ್ಟಿ ಕೊಟ್ಟಿದ್ದಾರೆ. 

     ಅವರ ಮಗ ವಿದ್ಯಾಧರ ಜಲವಳ್ಳಿ ಪ್ರಸಿದ್ಧ ಕಲಾವಿದರಾಗಿ ತಂದೆಯಂತೆ ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಇದು ಈ ರಂಗಕ್ಕೆ ನೀಡಿದ ಇನ್ನೊಂದು ಮಹತ್ವದ ಕೊಡುಗೆ. 

Advertisement

ಪ್ರೊ| ನಾರಾಯಣ ಎಂ. ಹೆಗಡೆ 

Advertisement

Udayavani is now on Telegram. Click here to join our channel and stay updated with the latest news.

Next