Advertisement

ಭೀಕರ ಸೈಕ್ಲೋನ್‌ ಆಗಿ ‘ಯಾಸ್‌’ಪರಿವರ್ತನೆ : ಒಡಿಶಾ, ಕರಾವಳಿ ಹಾದು ಹೋಗಲಿದೆ ಚಂಡಮಾರುತ

08:59 PM May 22, 2021 | Team Udayavani |

ನವದೆಹಲಿ: ಯಾಸ್‌ ಚಂಡಮಾರುತವು ಅತ್ಯಂತ ಭೀಕರ ಸೈಕ್ಲೋನ್‌ ಆಗಿ ಪರಿವರ್ತನೆಗೊಳ್ಳಲಿದ್ದು, ಮೇ 26ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದು ಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

Advertisement

ಉತ್ತರ ಅಂಡ ಮಾನ್‌ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಪೂರ್ವ-ಕೇಂದ್ರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಭಾನುವಾರ ಬೆಳಗ್ಗೆ ಚಂಡಮಾರುತವಾಗಿ ಬದಲಾಗಲಿದೆ. ಸೋಮವಾರ ಅದರ ತೀವ್ರತೆ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ. ಮೇ 26ರಂದು ಚಂಡಮಾರುತವು ಒಡಿಶಾ, ಪ.ಬಂಗಾಳ ಹಾಗೂ ಬಾಂಗ್ಲಾದೇಶ ಕರಾವಳಿಯನ್ನು ಹಾದು ಹೋಗಲಿದ್ದು, ಈ ರಾಜ್ಯಗಳಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈ ಅಲರ್ಟ್‌ ಘೋಷಣೆ:
ತೌಕ್ತೇ ಚಂಡಮಾರುತದ ಬೆನ್ನಲ್ಲೇ ಯಾಸ್‌ ಚಂಡಮಾರುತ ಅಪ್ಪಳಿಸಲಿದ್ದು, ಒಡಿಶಾದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಅದೇ ರೀತಿ, ಕೇರಳದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಒಡಿಶಾ, ಪ.ಬಂಗಾಳ ಹಾಗೂ ಕೇರಳದಲ್ಲಿ ಪ್ರವಾಹ ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ :ನೆಟ್ ಬ್ಯಾಂಕಿಂಗ್ ಗ್ರಾಹಕರೇ ಗಮನಿಸಿ : ಭಾನುವಾರ ಮಧ್ಯಾಹ್ನದವರೆಗೆ NEFT ಅಲಭ್ಯ

ಸೋಮವಾರದಿಂದ ಭಾರೀ ಮಳೆ:
ಯಾಸ್‌ ಪ್ರಭಾವದಿಂದಾಗಿ ಮುಂಬೈ ಹೊರತುಪಡಿಸಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ, ಕೊಂಕಣ ಭಾಗದಲ್ಲಿ ಮತ್ತು ಗೋವಾದಲ್ಲಿ ಸೋಮವಾರ ಹಾಗೂ ಮಂಗಳವಾರ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

ಮೃತದೇಹಗಳ ಡಿಎನ್‌ಎ ಪರೀಕ್ಷೆ?
ತೌಕ್ತೇ ಚಂಡಮಾರುತದ ವೇಳೆ ಮುಂಬೈ ಕರಾವಳಿಯಾಚೆ ಮುಳುಗಿದ ಬಾರ್ಜ್‌ನಲ್ಲಿದ್ದವರ ಪೈಕಿ 61 ಮಂದಿ ಸಾವಿಗೀಡಾಗಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. 61 ಮಂದಿಯ ಪೈಕಿ 30 ಮೃತದೇಹಗಳ ಗುರುತು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈಗಾಗಲೇ 28 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next