ನವದೆಹಲಿ: ದೆಹಲಿಯ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ಯಮುನಾ ನದಿಯಲ್ಲಿ ನೀರಿನ ಮಟ್ಟವು ಮತ್ತಷ್ಟು ಏರಿಕೆಯಾಗಿದ್ದು, ತಗ್ಗು ಪ್ರದೇಶದಲ್ಲಿರುವ ಮನೆಗಳು ಮತ್ತು ರಸ್ತೆಗಳನ್ನು ಜಲಾವೃತಗೊಂಡಿದ್ದು ಸಿಎಂ ಅರವಿಂದ ಕೇಜ್ರಿವಾಲ್ ನಿವಾಸದ ಬಳಿಯೂ ಪ್ರವಾಹದ ನೀರು ಹರಿಯುತ್ತಿದೆ.
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ ನಿಂದ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಯಮುನಾ ನದಿಯಲ್ಲಿ ನೀರಿನ ಮಟ್ಟ 208.46 ಮೀಟರ್ ಆಗಿತ್ತು. ಪ್ರಸ್ತುತ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೂರು ಮೀಟರ್‌ಗಳಷ್ಟು ಹೆಚ್ಚಿಗೆಯಾಗಿದೆ, ಇದರಿಂದ ನದಿ ತೀರದ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿದೆ.
ಈ ನಡುವೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಮಧ್ಯ ಪ್ರವೇಶಿಸಿ ಬ್ಯಾರೇಜ್‌ನಿಂದ ನೀರು ಬಿಡುವುದನ್ನು ನಿಲ್ಲಿಸುವಂತೆ ಕೇಂದ್ರವನ್ನು ಒತ್ತಾಯಿಸಿದೆ , ಆದರೆ ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡದೆ ಬೇರೆ ವಿಧಿಯಿಲ್ಲ ಎಂದು ಕೇಂದ್ರ ಉತ್ತರಿಸಿದೆ.
ಇದರ ಪರಿಣಾಮವಾಗಿ ಕೆಲವೊಂದು ಅಪಾಯದ ಪ್ರದೇಶಗಳಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಸಿವಿಲ್ ಲೈನ್ಸ್ ಪ್ರದೇಶದ ರಿಂಗ್ ರೋಡ್ ಜಲಾವೃತಗೊಂಡಿದೆ ಮತ್ತು ಮಜ್ನು ಕಾ ತಿಲಾವನ್ನು ಕಾಶ್ಮೀರಿ ಗೇಟ್ ಐಎಸ್‌ಬಿಟಿಗೆ ಸಂಪರ್ಕಿಸುವ ಮಾರ್ಗವನ್ನು ಮುಚ್ಚಲಾಗಿದೆ. ಈ ಸ್ಥಳವು ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ದೆಹಲಿ ವಿಧಾನಸಭೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹರಿಯಾಣ ಬ್ಯಾರೇಜ್‌ನಿಂದ ನೀರಿನ ಹರಿವು ಮಧ್ಯಾಹ್ನ 2 ಗಂಟೆಯ ಬಳಿಕ ಇಳಿಯುವ ನಿರೀಕ್ಷೆಯಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.
ಇದನ್ನೂ ಓದಿ: ಉಡ್ತಾ ಕರ್ನಾಟಕವಾಗಲು ಬಿಡಲ್ಲ-ಡ್ರಗ್ಸ್ ಹಾವಳಿ ನಿಲ್ಲಿಸಲು ಕಠಿಣ ಕ್ರಮ: ಡಾ.ಜಿ.ಪರಮೇಶ್ವರ