Advertisement
75-80 ಮನೆಗಳು, 2,000 ಜನಸಂಖ್ಯೆಯನ್ನು ಹೊಂದಿರುವ ಪಶ್ಚಿಮ ಘಟ್ಟದ ತಪ್ಪಲಿನ ಊರು ಕಮಲಶಿಲೆ ಗ್ರಾಮದ ಯಳಬೇರು.
Related Articles
Advertisement
ಯಳಬೇರು ಪ್ರದೇಶದ ಹೆಣ್ಣು ಮಕ್ಕಳ ಸಹಿತ ಒಟ್ಟು 40 ಮಂದಿ ಮಕ್ಕಳು ಸಿದ್ದಾಪುರ, ಕುಂದಾಪುರ, ಶಂಕರನಾರಾಯಣ, ಕೋಟೇಶ್ವರ ಸಹಿತ ಬೇರೆ ಕಡೆಗಳಿಗೆ ಶಾಲಾ- ಕಾಲೇಜುಗಳಿಗೆ ವ್ಯಾಸಂಗಕ್ಕೆಂದು ಬರುತ್ತಿದ್ದಾರೆ. ಇವರೆಲ್ಲ ಬಸ್‌ನ ವ್ಯವಸ್ಥೆಯಿಲ್ಲದ ಕಾರಣ, ಮನೆಯಿಂದ ಬೆಳಗ್ಗೆ 6.30ಕ್ಕೆ ಹೊರಟರೆ, ಮನೆ ಸೇರುವುದು ಸಂಜೆ 7 ಗಂಟೆಯ ನಂತರವೇ. ಮಕ್ಕಳು ಓದುವುದು ಎಷ್ಟೊತ್ತಿಗೂ? ದುರ್ಗಮವಾದ ಕಾಡ ಹಾದಿಯಲ್ಲಿ ಮಕ್ಕಳು ನಡೆದುಕೊಂಡು ಬಂದು ಮನೆ ಸೇರುವುದೇ ಸವಾಲಿನ ಸಂಗತಿ. ಮಕ್ಕಳು ಮನೆಗೆ ಬಂದು ತಲುಪುವವರೆಗೆ ಹೆತ್ತವರಿಗೆ ಆತಂಕ ತಪ್ಪಿದ್ದಲ್ಲ. ಮಳೆಗಾಲದಲ್ಲಂತೂ ಇದು ಇನ್ನೂ ಭೀಕರ. ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಇಲ್ಲಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆಯಾಗಿದೆ.
ಮೊದಲು ಹಳ್ಳಿಹೊಳೆ ಗ್ರಾ.ಪಂ.ನಲ್ಲಿದ್ದ ಕಮಲಶಿಲೆಯನ್ನು ಈಗ ಅಲ್ಲಿಂದ ಪ್ರತ್ಯೇಕಗೊಳಿಸಿ, ಆಜ್ರಿಯೊಂದಿಗೆ ಸೇರಿಸಲಾಗಿದೆ. ಆದರೆ ಈಗಲೂ ಯಳಬೇರು, ಸುತ್ತಮುತ್ತಲಿನ ಭಾಗದ ಜನರು ಮಾತ್ರ ವಿಎ ಕಚೇರಿ, ಪ್ರಾಥಮಿಕ ಆಸ್ಪತ್ರೆಗೆ ಹಳ್ಳಿಹೊಳೆಯನ್ನೇ ಆಶ್ರಯಿಸಿದ್ದಾರೆ. ಆದರೆ ಇಲ್ಲಿಗೆ ತೆರಳಬೇಕಾದರೆ 7-8 ಕಿ.ಮೀ. ದೂರ ಕ್ರಮಿಸಬೇಕಿದೆ. ಬಸ್‌ನ ವ್ಯವಸ್ಥೆಯಿಲ್ಲ.
ಒಂದು ಕರೆಗೂ ಕಷ್ಟ…
ಈ ಯಳಬೇರು ಪ್ರದೇಶದ ಜನರು ಕರೆ ಮಾಡಬೇಕಾದರೆ ಮನೆಯಿಂದ ಕನಿಷ್ಠ 1-2 ಕಿ.ಮೀ. ದೂರ ಬರಬೇಕಿದೆ. ತುರ್ತಾಗಿ ಯಾರಿಗಾದರೂ ಅನಾರೋಗ್ಯ ಉಂಟಾಗಿ ವಾಹನ ಕರೆಸುವುದು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಬೇರೆ ಏನಾದರೂ ಸಮಸ್ಯೆಯಾದರೂ ಕರೆ ಮಾಡಲು ಒಂದೆರಡು ಕಿ.ಮೀ. ದೂರ ಬರಬೇಕಾದ ಸ್ಥಿತಿಯಿದೆ.
ಪ್ರಧಾನಿ, ಸಿಎಂಗೂ ದೂರು
ಯಳಬೇರಿನ ಜನರು ಅನುಭವಿಸು ತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಹಲವು ಬಾರಿ ಮನವಿ ಪತ್ರ, ಪೋಸ್ಟ್ ಕಾರ್ಡ್ ಮೂಲಕ ಬೇಡಿಕೆಯನ್ನು ಸಲ್ಲಿಸಲಾಗಿದೆ. ಆದರೆ ಯಾರಿಂದಲೂ ಸೂಕ್ತವಾದ ಸ್ಪಂದನೆ ಮಾತ್ರ ವ್ಯಕ್ತವಾಗಿಲ್ಲ.
ಯಾವುದೇ ಪ್ರಯೋಜನವಿಲ್ಲ: ರಸ್ತೆ ಸರಿಯಿಲ್ಲ, ನೆಟ್‌ವರ್ಕ್ ಇಲ್ಲ, ಬಸ್‌ನ ವ್ಯವಸ್ಥೆಯಿಲ್ಲದೆ ಇಲ್ಲಿನ ಜನರು, ವಿದ್ಯಾರ್ಥಿಗಳು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ, ಸಿಎಂ, ಸಂಸದ, ಶಾಸಕರು, ಅಧಿಕಾರಿಗಳೆಲ್ಲರಿಗೂ ಮನವಿ ಮಾಡಿದ್ದೇವೆ. ಯಾವುದೇ ಪ್ರಯೋಜವಾಗಿಲ್ಲ. ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇನ್ನಾದರೂ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ನಮ್ಮದು. – ಆದರ್ಶ ಶೆಟ್ಟಿ, ಯಳಬೇರು ನಿವಾಸಿ
ನೆಟ್‌ವರ್ಕ್‌ಗೆ ಪ್ರಸ್ತಾವನೆ: ಯಳಬೇರಿಗೆ 4 ಕೋ.ರೂ.ವೆಚ್ಚದಲ್ಲಿ 4 ಕಿ.ಮೀ. ರಸ್ತೆ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಭಾಗಕ್ಕೂ ವಿಸ್ತರಿಸಲಾಗುವುದು. ನೆಟ್‌ವರ್ಕ್ ಬಗ್ಗೆ ಈಗಾಗಲೇ 5 ಕಡೆ ಟವರ್ ಮಂಜೂರಾಗಿದ್ದು, ಹೆಚ್ಚುವರಿಯಾಗಿ 16 ಕಡೆಗಳಿಗೂ ಮನವಿ ಕೊಡಲಾಗಿದ್ದು, ಅದರಲ್ಲಿ ಯಳಬೇರಿಗೆ ಪ್ರಯತ್ನಿಸಲಾಗುವುದು. ಬಸ್ ಬೇಡಿಕೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. – ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು
-ಪ್ರಶಾಂತ್ ಪಾದೆ