ಆತನ ಹೆಸರು ಸತ್ಯಹರಿಶ್ಚಂದ್ರ. ಆದರೆ ಆತ ಬಾಯಿಬಿಟ್ಟರೆ ಸುಳ್ಳಿನ ಕಂತೆ. ಆತನಿಗೊಂದಿಷ್ಟು ಸ್ನೇಹಿತರು. ಇಡೀ ಹಳ್ಳಿ ಸುತ್ತುತ್ತಾ “ಜಾಲಿ ಜಾಲಿ.. ಎಲ್ಲಾ ಜಾಲಿ’ ಎಂಬಂತಿದ್ದ ಆತನಿಗೆ ಸುಳ್ಳು ಭಯ ತರಿಸುತ್ತದೆ. ಒಂದೇ ಒಂದು ಸುಳ್ಳು ಹೇಳಿದರೆ ಆತ, ಆತನ ಸ್ನೇಹಿತರು ಸತ್ತೇ ಹೋಗುತ್ತಾರೆ. ಅಂತಹ ಘಟನೆಯೊಂದು ನಡೆಯುತ್ತದೆ. ಅಲ್ಲಿಂದ ಆತನ “ಬಂಕ್ ಸೀನ’ನಾಗಿ ಎಲ್ಲಾ ಸತ್ಯ ಹೇಳುತ್ತಾನೆ. ಅಷ್ಟಕ್ಕೂ ಆ ಘಟನೆ ಯಾವುದು ಎಂಬ ಕುತೂಹಲವಿದ್ದರೆ “ಯಲಾಕುನ್ನಿ’ಯತ್ತ ಮುಖ ಮಾಡಬಹುದು.
ಕೋಮಲ್ ನಾಯಕರಾಗಿರುವ “ಯಲಾಕುನ್ನಿ’ ಒಂದು ಕಾಮಿಡಿ ಡ್ರಾಮಾ. ಇಡೀ ಸಿನಿಮಾ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಹಳ್ಳಿ ರಾಜಕೀಯ, ಪಂಚಾಯ್ತಿ, ಚುನಾವಣೆ, ಗಿಮಿಕ್, ಲೆಕ್ಕಾಚಾರದೊಂದಿಗೆ ನಡೆಯುವ ಕಥೆಯಲ್ಲಿ ಸತ್ಯಹರಿಶ್ಚಂದ್ರನ ಗೇಮ್ ಗಳೇ ಮೇಲಿಗೈ ಸಾಧಿಸುತ್ತವೆ. ಇಂತಹ ಸನ್ನಿವೇಶಗಳೇ ಇಡೀ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಚಿತ್ರದಲ್ಲಿ ಸಿಕ್ಕಾಪಟ್ಟೆ ಗಂಭೀರವಾದ ಕಥೆಯಂತೂ ಇಲ್ಲ. ಆದರೆ, ಸನ್ನಿವೇಶಗಳಲ್ಲೇ ಹಾಸ್ಯ ತುಂಬಿ ನಗು ತರಿಸಲಾಗಿದೆ.
ಕಾಮಿಡಿ ಸಿನಿಮಾಗಳಿಗೆ ಸಂಭಾಷಣೆ ಜೀವಾಳ. “ಯಲಾಕುನ್ನಿ’ಯ ಸಂಭಾಷಣೆ ಕೂಡಾ ಹಾಸ್ಯದ “ತೂಕ’ ಹೆಚ್ಚಿಸಿದೆ. ಮುಖ್ಯವಾಗಿ ಸಿನಿಮಾದ ಹೈಲೈಟ್ ಎಂದರೆ ಅದು ವಜ್ರಮುನಿ ಗೆಟಪ್‌ನಲ್ಲಿ ಕೋಮಲ್ ಕಾಣಿಸಿಕೊಂಡಿರೋದು. ಸಿನಿಮಾದಲ್ಲಿ ಬರುವ ವಜ್ರಮುನಿ ಎಪಿಸೋಡ್ ಚಿತ್ರದ ಪ್ಲಸ್‌ಗಳಲ್ಲಿ ಒಂದು. ಇಡೀ ಚಿತ್ರಕ್ಕೆ ಬೇರೊಂದು “ಕಲರ್’ ನೀಡುವಲ್ಲಿ ಇದು ಯಶಸ್ವಿಯಾಗಿದೆ. “ಯಲಾಕುನ್ನಿ’ ಹೇಗೆ ಕಾಮಿಡಿ ಸಿನಿಮಾವೋ ಅದೇ ರೀತಿ ಲವ್ ಸ್ಟೋರಿಯೂ ಹೌದು. ಹಾಸ್ಯಪುರಾಣದ ಜೊತೆಗೆ ಪ್ರೇಮಪುರಾಣವೂ ಸಾಗಿಬಂದಿದೆ.
ಕೋಮಲ್ ಎರಡು ಗೆಟಪ್‌ನಲ್ಲಿ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸತ್ಯ ಹರಿಶ್ಚಂದ್ರನಾಗಿ ಫನ್‌ರೈಡ್ ಒಂದು ಕಡೆಯಾದರೆ, ವಜ್ರಮುನಿ ಗೆಟಪ್‌ನಲ್ಲಿ “ಖಡಕ್’ ಆಗಿ ಮಿಂಚಿದ್ದಾರೆ. ಉಳಿದಂತೆ ನಿಸರ್ಗ ಅಪ್ಪಣ್ಣ, ಮಹಾಂತೇಶ್, ಮಿತ್ರ, ಜಯಸಿಂಹ ಮುಸುರಿ, ಮಯೂರ್ ಪಟೇಲ್, ಯತಿರಾಜ್ ಸೇರಿದಂತೆ ಇತರರು ನಟಿಸಿದ್ದಾರೆ. ಟೈಮ್ ಪಾಸ್ ಸಿನಿಮಾವಾಗಿ “ಯಲಾ ಕುನ್ನಿ’ಯದ್ದು ಜಾಲಿ ರೈಡ್.
ರವಿಪ್ರಕಾಶ್ ರೈ