Advertisement

ಯಕ್ಷಕಲಾ ರಕ್ಷಣ ವೇದಿಕೆ ಮುಂಬಯಿ ವತಿಯಿಂದ ಯಕ್ಷಗಾನ, ಸಮ್ಮಾನ

04:53 PM Feb 12, 2019 | Team Udayavani |

ಮುಂಬಯಿ: ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಶುದ್ಧ ಜ್ಞಾನದ ಕಲೆ ಯಕ್ಷಗಾನವಾಗಿದೆ. ಎಲ್ಲಿಯವರೆಗೆ ರಾಮಾಯಣ, ಮಹಾಭಾರತ ಮತ್ತು ಮಹಾಕಾವ್ಯಗಳ ಉಪಾಸನೆ ನಡೆಯುತ್ತದೋ ಅಲ್ಲಿಯವರೆಗೆ ಭಾರತ ಸುರಕ್ಷಿತವಾಗಿರುತ್ತದೆ. ಕಲಾವಿದರನ್ನು ಗೌರವಿಸುವ ಮೂಲಕ ವಿವಿಧ ಕಲಾಪ್ರಕಾರಗಳನ್ನು ಸಮೃದ್ಧಿಗೊಳಿಸಬೇಕು ಎಂದು ಥಾಣೆ ಜಿಲ್ಲಾ ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷ ಪೊಲ್ಯ ಉಮೇಶ್‌ ಶೆಟ್ಟಿ ನುಡಿದರು.

Advertisement

ಫೆ. 7ರಂದು ಮೀರಾರೋಡ್‌ ಪೂರ್ವದ ಸಾಯಿಬಾಬಾ ನಗರದ ಸೈಂಟ್‌ ಥೋಮಸ್‌ ಚರ್ಚ್‌ ಸಭಾಗೃಹದಲ್ಲಿ ನಡೆದ ಯಕ್ಷಕಲಾ ರಕ್ಷಣ ವೇದಿಕೆ ಮುಂಬಯಿ ಇದರ ದಕ್ಷಿಣೋತ್ತರ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಅಶ್ವಿ‌ನಿ ಕೊಂಡದಕುಳಿಯವರ ನಿರ್ದೇಶನದ ಯಕ್ಷಗಾನ ಪ್ರದರ್ಶನಗಳ ಮುಂಬಯಿ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಫಲಾಪೇಕ್ಷೆಗಳಿಲ್ಲದೆ, ಕಡು ಬಡತನದಲ್ಲಿಯೂ ಕಲಾಸೇವೆಗೈಯುವ ಸಂಘಟಕ, ಸಂಚಾಲಕ ಸದಾಶಿವ ವಾಲ್ಪಾಡಿ ಅವರ ಸಾಧನೆ ಅಪಾರವಾಗಿದೆ. ಅವರ ಪರಿಶ್ರಮದಿಂದ ಪಾರಂಪಾರಿಕ ಯಕ್ಷಗಾನ ಶೈಲಿ, ಪುರಾಣ ಕಥೆಗಳ ಬಯಲಾಟಗಳು ಜೀವಂತವಾಗಿದೆ.  ಇವುಗಳ ಬೆಳವಣಿಗೆಗೆ ಕಲಾಪೋಷಕರು, ಕಲಾಭಿಮಾನಿಗಳು ಸಹಕರಿಸಬೇಕು ಎಂದರು.

ಮೀರಾರೋಡ್‌ ಪಲಿಮಾರು ಮಠದ ಟ್ರಸ್ಟಿ ವಿದ್ವಾನ್‌ ರಾಧಾಕೃಷ್ಣ ಭಟ್‌ ಇವರು ಮಾತನಾಡಿ, ಸನಾತನ ಧರ್ಮಗಳ ವಿಶೇಷತೆಯನ್ನು ಬೋಧಿ ಸುವ ಮಾಧ್ಯಮ ಯಕ್ಷಗಾನವಾಗಿದೆ. ಇದು ಬದುಕಿನ ಜವಾಬ್ದಾರಿ ತಿಳಿಸುತ್ತದೆ. ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಶುದ್ಧ ಕನ್ನಡದ ಉಚ್ಚಾರಣೆ ಯಕ್ಷಗಾನದ ಉಸಿರಾಗಿದೆ ಎಂದರು.

ವಾಸ್ತು ಶಾಸ್ತ್ರಜ್ಞ ಅಶೋಕ್‌ ಪುರೋಹಿತ್‌ ಮಾತನಾಡಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಸಾರ್ಥಕತೆ ಹೊಂದಲು ಪೌರಾಣಿಕ ಕಥೆಗಳ ಅಧ್ಯಯನ ಅತ್ಯಗತ್ಯ. ಧನಾತ್ಮಕ ಚಿಂತನೆ ಮೂಲಕ ಒತ್ತಡ ರಹಿತ ಜೀವನ ಸಾಗಿಸಲು ಧ್ಯಾನ ಅಗತ್ಯ ಎಂದರು.

ಯಕ್ಷಗುರು ಹೆರಂಜಾಲು ಗೋಪಾಲ ಗಾಣಿಗ, ರಂಗತಜ್ಞ ಗುಣಪಾಲ ಉಡುಪಿ, ಸಂತೋಷ್‌ ಗುರುಸ್ವಾಮಿ ಮೂಡು ಮಾರ್ನಾಡು ಇವರನ್ನು ಗಣ್ಯರು ಸಮ್ಮಾನಿಸಿ ದರು. ಸಂಚಾಲಕ ಸದಾಶಿವ ವಾಲ್ಪಾಡಿ ಗಣ್ಯರನ್ನು ಗೌರವಿಸಿದರು.

Advertisement

ವೇದಿಕೆಯಲ್ಲಿ ಮಹಾರಾಷ್ಟ್ರ ಮಾನವ ಸೇವಾ ಸಂಘದ ಡಾ| ಹರೀಶ್‌ ಶೆಟ್ಟಿ, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಬಿಲ್ಲವರ ಅಸೋಸಿಯೇಶನ್‌ ಮಲಾಡ್‌ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಶೇಖರ ಪೂಜಾರಿ, ಉದ್ಯಮಿ, ಕಲಾಪೋಷಕ ನವೀನ ಭಂಡಾರಿ, ವಿಶ್ವ ಮತ್ತು ರಾಷ್ಟ್ರೀಯ ಜಾಗತಿಕ ಮಾನವಾಧಿಕಾರಿ ಸಂಸ್ಥೆಯ ಅಧ್ಯಕ್ಷ ಸಮಾಜ ರತ್ನ ಲಯನ್‌ ಡಾ| ಕೆ. ಟಿ. ಶಂಕರ್‌, ಸಮಾಜ ಸೇವಕ ಶಂಕರ ಪೂಜಾರಿ ಪೆಲತ್ತೂರು, ಬಂಟ್ಸ್‌ ಫೋರಂ  ಮೀರಾ-ಭಾಯಂದರ್‌ ಗೌರವಾಧ್ಯಕ್ಷ ಸಂತೋಷ್‌ ರೈ ಬೆಳ್ಳಿಪಾಡಿ, ಕಲಾಪೋಷಕ ಚಂದ್ರಶೇಖರ ಶೆಟ್ಟಿ,  ಭಾಯಂದರ್‌ ಹನುಮಾನ್‌ ಭಜನಾ ಮಂಡಳಿಯ ಅಧ್ಯಕ್ಷ ಜಯರಾಮ ಶೆಟ್ಟಿ, ದಿನೇಶ್‌ ಶೆಟ್ಟಿ, ಹರೀಶ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಚಲನಚಿತ್ರ ಮತ್ತು ರಂಗಭೂಮಿ ನಟ ಜಿ. ಕೆ. ಕೆಂಚನಕೆರೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು.

ಅಶ್ವಿ‌ನಿ ಕೊಂಡದಕುಳಿ ಅವರ ಸಂಯೋಜನೆ ಯಲ್ಲಿ ಹಾಗೂ ಹೆರಂಜಾಲು ಗೋಪಾಲ ಗಾಣಿಗ ಅವರ ನಿರ್ದೇಶನದಲ್ಲಿ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಂಡಿತು. ಭಾಗವತ ರಾಗಿ ಗೋಪಾಲ ಕೃಷ್ಣ ಗಾಣಿಗ ಹೆರಂಜಾಲು, ಮದ್ದಳೆಯಲ್ಲಿ ಶಶಿಕುಮಾರ್‌ ಆಚಾರ್‌ ಉಡುಪಿ, ಚೆಂಡೆಯಲ್ಲಿ ರಾಮನ್‌ ಹೆಗ್ಡೆ ಅವರು ಸಹಕರಿಸಿದರು. ಮುಮ್ಮೇಳದಲ್ಲಿ ಕಲಾವಿದರುಗಳಾಗಿ ಅಶ್ವಿ‌ನಿ ಕೊಂಡದಕುಳಿ, ನರೇಂದ್ರ ಹೆಗ್ಡೆ, ಲಕ್ಷ್ಮೀನಾರಾಯಣ ಭಟ್‌, ನಾಗೇಂದ್ರ ಭಟ್‌ ಮೂರುರು, ಮಹಾಬಲೇಶ್ವರ ಭಟ್‌ ಇಟಗಿ, ಟಿ. ವಿ. ಸ್ಫೂರ್ತಿ ಭಟ್‌ ಮೊದಲಾದವರು ಪಾಲ್ಗೊಂಡಿದ್ದರು.  

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next