ಯಕ್ಷಗಾನ ರಂಗದಲ್ಲಿ ಅಭಿನವ ಕೋಟಿಯಾಗಿ ಮೆರೆದ ಬೋಳಾರ ನಾರಾಯಣ ಶೆಟ್ಟರು ಕಣ್ಮರೆಯಾಗಿ ಮೂರು ದಶಕಗಳು ಸಂದಿವೆ. ಅವರ ಸ್ಮರಣಾರ್ಥವಾಗಿ ನೀಡುವ ಬೋಳಾರ ಪ್ರಶಸ್ತಿಗೆ 2018-19ನೇ ಸಾಲಿನಲ್ಲಿ ಯಕ್ಷಗಾನದ ಸವ್ಯಸಾಚಿಯೆನಿಸಿದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಆಯ್ಕೆಯಾಗಿದ್ದಾರೆ.
ಡಿ.22ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ದತ್ತಜಯಂತಿ ಉತ್ಸವ ಸಂದರ್ಭದಲ್ಲಿ ಜರಗುವ ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು. ಅದೇ ದಿನ ರಾತ್ರಿ ಪ್ರತಿಷ್ಠಾನದ ವತಿಯಿಂದ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಕುಶ-ಲವ, ಜಾಂಬವತಿ ಕಲ್ಯಾಣ-ದ್ರೌಪದಿ ಪ್ರತಾಪ ಯಕ್ಷಗಾನ ಬಯಲಾಟ ಜರಗಲಿದೆ.
ಪುರುಷೋತ್ತಮ ಪೂಂಜರು ಯಕ್ಷರಂಗದ ಒಳಹೊರಗನ್ನು ಬಲ್ಲ ಶ್ರೇಷ್ಠ ಸಾಧಕ. ಮೇಳದಲ್ಲಿ ಜಾಗಟೆ ಹಿಡಿಯುವ ಮೊದಲೇ, ಅವರೊಬ್ಬ ಸಮರ್ಥ ವೇಷಧಾರಿ, ನಿರ್ದೇಶಕ, ಚೆಂಡೆ ಮದ್ದಳೆವಾದಕ, ಅಲ್ಲದೆ ಅದ್ಭುತ ಪ್ರತಿಭಾ ಸಂಪನ್ನರಾದ ಪ್ರಸಂಗಕರ್ತ. ಪ್ರಸ್ತುತ ಸಮಕಾಲೀನ ಯಕ್ಷರಂಗದಲ್ಲಿ ಹಿಮ್ಮೇಳ, ಛಂದಸ್ಸು, ತಾಳ-ಲಯ, ಮಾತ್ರಾಗಣಗಳ ಸಂಪೂರ್ಣ ಜ್ಞಾನ ಹೊಂದಿದ ಮಹಾನ್ ಭಾಗವತ.
ಸುಮಾರು 32 ಪ್ರಸಂಗಗಳನ್ನು ಬರೆದು ಸವ್ಯಸಾಚಿಯೆನಿಸಿಕೊಂಡಿರುವ ಅವರ ಕನ್ನಡ ಕೃತಿಗಳು ನಳಿನಾಕ್ಷ ನಂದಿನಿ, ಮಾನಿಷಾದ, ರಾಜಾ ದ್ರುಪದ, ಸೋಮೇಶ್ವರ ಕ್ಷೇತ್ರ ಮಹಾತೆ¾, ಕಲಿಕೀಚಕ, ಅಮರ ಸಿಂಧೂದ್ಭವ, ಪಾಂಚಜನ್ಯ, ಭಕ್ತಕುಚೇಲ, ದತ್ತಸಂಭವ, ಗಂಡುಗಲಿ ಘಟೋತ್ಕಜ, ಸತೀ ಉಲೂಪಿ, ಲೋಕಾಭಿರಾಮ, ಮನ್ಮಥೋಪಖ್ಯಾನ, ಉಭಯ ಕುಲ ಬಿಲ್ಲೋಜ, ಕಾರ್ತಿಕೇಯ ಕಲ್ಯಾಣ, ಮಾತಂಗ ಕನ್ಯೆ, ಮೇಘಮಯೂರಿ, ಸ್ವರ್ಣನೂಪುರ, ಮೇಘಮಾಣಿಕ್ಯ, ಅಮೃತವರ್ಷಿಣಿ ಮತ್ತು ತುಳು ರಚನೆಗಳಾದ ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣೆ, ಗರುಡಕೇಂಜವೆ, ಬಂಗಾರª ಗೆಜ್ಜೆ, ಪಟ್ಟದ ಕತ್ತಿ, ನಲಿಕೆದ ನಾಗಿ, ಐಗುಳೆ ದಚ್ಚಿನೆ, ಕುಡಿಯನ ಕಣ್¡, ಸ್ವರ್ಣಕೇದಗೆ ಪ್ರಸಂಗಗಳು ವೃತ್ತಿ ಮೇಳಗಳಲ್ಲಿ ಪ್ರಯೋಗಗೊಂಡು ಜನಪ್ರಿಯವಾಗಿವೆ. ಭುವನಾಭಿರಾಮ, ಅಂಧಕ ನಿದಾನ, ಜೇವುಕೇದಗೆ ಎಂಬ ನೃತ್ಯರೂಪಕಗಳನ್ನೂ ರಚಿಸಿದ್ದಾರೆ.
– ಬಿ.ಆರ್. ಕೆ