Advertisement

ಯಕ್ಷಗಾನ ಬೊಂಬೆಯಾಟ: ಕೆ.ವಿ. ರಮೇಶ್‌ರಿಂದ ಸಾಕ್ಷಚಿತ್ರ ಪ್ರದರ್ಶನ

03:50 AM Jul 07, 2017 | Harsha Rao |

ಬದಿಯಡ್ಕ: ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಎಡನೀರಿನಲ್ಲಿ ನಡೆದ ಯಕ್ಷಗಾನ ತರಬೇತಿ ಶಿಬಿರದಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ. ರಮೇಶ್‌ ಅವರಿಂದ ಯಕ್ಷಗಾನ ಬೊಂಬೆಯಾಟ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಬೊಂಬೆ ಕುಣಿತ ಪ್ರಾತ್ಯಕ್ಷಿಕೆ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಕೆ.ವಿ.ರಮೇಶ್‌ ಅವರು ಮಾತನಾಡಿ ಇಷ್ಟೊಂದು ಚಂದವಾದ ಕಲೆ ಪ್ರಪಂಚದಲ್ಲಿ ಬೇರೆ ಇಲ್ಲ. ಆದುದರಿಂದ ಇದನ್ನು ಉಳಿಸುವ ಪ್ರಯತ್ನ ಆಗಲೇಬೇಕು. ಈ ಕಲೆಯ ಮೇಲಿನ ಪ್ರೀತಿಯನ್ನು  ಬೆಳೆಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಯಕ್ಷಗಾನ ಬೊಂಬೆಯಾಟದ ಬಗೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು  ಐದು ದೇಶಗಳಲ್ಲಿ  ಯಕ್ಷಗಾನ ಬೊಂಬೆಯಾಟ ಪ್ರದರ್ಶನ ನೀಡಿದ್ದೇನೆ. 1995ರಲ್ಲಿ  ಪಾಕಿಸ್ಥಾನದಲ್ಲಿ ಮೊದಲ ಪ್ರದರ್ಶನ ನೀಡಲಾಗಿತ್ತು. ಪಂಚವಟಿ  ಪ್ರಸಂಗವನ್ನು ಮೊದಲು ಪ್ರದರ್ಶಿಸಲಾಗಿತ್ತು. ದೇಶ-ವಿದೇಶಗಳಲ್ಲಿ  3000ದಷ್ಟು ಪ್ರದರ್ಶನಗಳನ್ನು ನಡೆಸಲಾಗಿದೆ. ಯಕ್ಷಗಾನ ಬೊಂಬೆಯಾಟಕ್ಕೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ ಎಂದರು.

ಬಣ್ಣಗಾರಿಕೆಗಳಿಗೆ ನಾಜೂಕು ಇರುವುದು ಕರಾವಳಿಯಲ್ಲಿ ಮಾತ್ರ. ಪರಂಪರೆಗೆ ಒತ್ತು ಕೊಟ್ಟು ಯಕ್ಷಗಾನದ ಬೊಂಬೆಗಳಿಗೆ ವೇಷಭೂಷಣಗಳನ್ನು ಮಾಡಲಾಗಿದೆ. ಇದೀಗ ಈ  ಬೊಂಬೆಗಳಿಗೆ 15 ವರ್ಷಗಳು ಸಂದಿವೆ ಎಂದರು.

ವಿವಿಧ ಭಂಗಿಯ ಬೊಂಬೆ ತಯಾರಿಗೆ ನಿರ್ಧಾರ
ವಿದೇಶದಲ್ಲಿ ಪ್ರದರ್ಶನ ನೀಡಿದಾಗ ಅಲ್ಲಿ ಕಥಾ ಸಾರಂಶವನ್ನು  ಇಂಗ್ಲೀಷಿನಲ್ಲಿಯೇ ಹೇಳಲಾಗುತ್ತದೆ. ಬಳಿಕ ಪ್ರಸಂಗವನ್ನು ಕನ್ನಡದಲ್ಲಿಯೇ ಹೇಳಲಾಗುತ್ತದೆ. ಬೊಂಬೆಯಾಟವನ್ನು ಒಂದು ಗಂಟೆ ಹೊತ್ತು ಪ್ರದರ್ಶಿಸಲಾಗುತ್ತದೆ. ಅರ್ಧ ಗಂಟೆ ದೃಶ್ಯ, ಕಾಲು ಗಂಟೆ  ಭಾಗವತಿಕೆ ಮತ್ತು ಕಾಲು ಗಂಟೆ  ಅರ್ಥಗಾರಿಕೆ ನಡೆಯುತ್ತದೆ ಎಂದು ಹೇಳಿದ ಕೆ.ವಿ.ರಮೇಶ್‌ ಅವರು, ಬೊಂಬೆಗಳನ್ನು  ಹಿಮ್ಮೇಳವಾಗಿ  ಬಳಸಲು ಸಾಧ್ಯವಿಲ್ಲ. ಒಂದು ವೇಷವನ್ನು ವಿವಿಧ ಭಂಗಿಯಲ್ಲಿ ತಯಾರಿಸಿ  ಬೊಂಬೆಗಳನ್ನು ಸಿದ್ಧಪಡಿಸಲು  ತೀರ್ಮಾನಿಸಲಾಗಿದೆ ಎಂದರು.

Advertisement

ಭಾರತದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ  ಯಕ್ಷಗಾನ ಬೊಂಬೆಯಾಟ ಪ್ರದರ್ಶನ  ನಡೆದಿದೆ. ಕೇವಲ ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರವಲ್ಲ. ಉಳಿದ ರಾಜ್ಯಗಳಾದ್ಯಂತ  ಪ್ರದರ್ಶನವಾಗಿದೆ. ಯಕ್ಷಗಾನ ಅಭ್ಯಾಸ ಮಾಡಿದ್ದೇ ಬೊಂಬೆಯಾಟಕ್ಕೆ ಸ್ಫೂರ್ತಿಯಾಯಿತು ಎಂದು ಕೆ.ವಿ. ರಮೇಶ್‌ ಹೇಳಿದರು.

ನಾಟ್ಯಗುರು ದಿವಾಣ ಶಿವಶಂಕರ ಭಟ್‌ ಉಪಸ್ಥಿತರಿದ್ದರು. ಸುಜಾತಾ, ಅನುರಾಧಾ, ವೃಂದ, ತಿಲಕ ಚರ್ಚೆಯಲ್ಲಿ ಭಾಗವಹಿಸಿದ್ದರು. ಶಿಬಿರಾರ್ಥಿ ದಿತಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಸಂಯೋಜನಾಧಿಕಾರಿ ಡಾ| ರತ್ನಾಕರ ಮಲ್ಲಮೂಲೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.  ಜಯಪ್ರಕಾಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next