Advertisement

ಹಿರಿಯರ ಮೋಡಿ ಮಾಡಿದ ಎಳೆಯರ ಯಕ್ಷಗಾನ

06:00 AM Jul 13, 2018 | |

ಅಪ್ಪನ ಮಾತು ರಾಜಾದೇಶವನ್ನು ಮೀರುವಂತಿಲ್ಲ. ಇತ್ತ ಪ್ರೀತಿಯ ಮಡದಿಯ ಮಾತನ್ನು ತಳ್ಳಿ ಹಾಕುವಂತಿಲ್ಲ. ಯಾವುದನ್ನು ಧಿಕ್ಕರಿಸಿದರೂ ಇಕ್ಕಟ್ಟಿನಲ್ಲಿ ಸಿಲುಕುವ ಆತಂಕ. ಮಡದಿಯ ಜತೆಗಿನ ಈ ಆತಂಕದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಹಿರಿಯರೂ ತಲೆದೂಗುವಂತೆ ಕಟ್ಟಿಕೊಟ್ಟದ್ದು ಸುಧನ್ವ ಪ್ರಭಾವತಿಯರು. ಹಾಗೋ ಹೀಗೋ ಮಡದಿಯ ಬೇಡಿಕೆಗೆ ಸ್ಪಂದಿಸಿ ವೇಳೆ ಮೀರಿತು ಎಂದು ತಂದೆ ಹಂಸಧ್ವಜನಿಂದ ಶಿಕ್ಷೆಗೆ ಗುರಿಯಾಗಿ ಶ್ರೀಹರಿಯ ದಯೆಯಿಂದ ಯುದ್ಧರಂಗದಲ್ಲಿ ವೀರಾವೇಶದಿಂದ ಹೋರಾಡಿ ಶ್ರೀಕೃಷ್ಣನ ದರ್ಶನ ಮಾಡಿದ ಸುಧನ್ವ (ಪಾತ್ರಧಾರಿ ಅಲ್ಲ) ಇವನೇಯಾ ಎಂಬ ಅನುಮಾನ ಕಾಡುವಂತಹ ಪಾತ್ರ ಪೋಷಣೆ. ಅಸಲಿಗೆ ಸುಧನ್ವ ಪಾತ್ರವನ್ನು ಇಬ್ಬರು ಮಾಡಿದ್ದರು. ಆದರೆ ಎಲ್ಲಿಯೂ ಭಾವಸುರಣೆಗೆ ಧಕ್ಕೆಯಾಗದಂತೆ ಒಟ್ಟು ಪ್ರಸಂಗದ ಚೌಕಟ್ಟಿಗೆ ಎಳೆತನದಿಂದ ಅಡ್ಡಿಯಾಗದಂತೆ ಅಭಿನಯಿಸಿದ್ದರು.

Advertisement

ಉಡುಪಿ ರಾಜಾಂಗಣದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಸಹಯೋಗದಲ್ಲಿ ಸೋದೆ ಹಾಗೂ ಪಲಿಮಾರು ಮಠದ ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ತರಬೇತಿ ತರಗತಿಯ ವಾರ್ಷಿಕೋತ್ಸವ ಪ್ರಯುಕ್ತ ಮಕ್ಕಳಿಂದ ನಡೆದ ಸುಧನ್ವಾರ್ಜುನ ಹಾಗೂ ತರಣಿಸೇನ ಕಾಳಗ ಹಿರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕಟೀಲು ಮೇಳದ ಕಲಾವಿದ ರಾಕೇಶ್‌ ರೈ ಅಡ್ಕ ಅವರಿಂದ ಸೂಕ್ತ ತರಬೇತಿ ಪಡೆದು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಮರ್ಥ ರಂಗ ನಿರ್ದೇಶನದಲ್ಲಿ ಎರಡೂ ಪ್ರಸಂಗಗಳು ಪ್ರದರ್ಶನಗೊಂಡವು. ತರಣಿಸೇನ ಕಾಳಗ ಆದ ಬಳಿಕ ಚಿಕ್ಕದಾಗಿ ಸಭಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸೋದೆ ಮಠಾಧೀಶರು ಹಾಗೂ ಪರ್ಯಾಯ ಪಲಿಮಾರು ಮಠಾಧೀಶರು ಮಕ್ಕಳ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸೋದೆ ಮಠದಲ್ಲಿಯೇ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಗಿತ್ತು. ಮಕ್ಕಳ ಜತೆ ಕೆಲವು ಪಾತ್ರಗಳನ್ನು ವಯಸ್ಕರೂ ಮಾಡಿ ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರು.

ತರಣಿಸೇನ ಕಾಳಗದಲ್ಲಿ ರಾಮ-ನಾಗರಾಜ ಭಟ್‌, ಲಕ್ಷ್ಮಣ -ಧನರಾಜ್‌, ವಿಭೀಷಣ-ನಿರುಪಮ, ಜಾಂಬವಂತ-ಶರತ್‌, ನಳ-ಸುಧನ್ವ ಮುಂಡ್ಕೂರ್‌, ನೀಲ-ಸುಮನ್ಯು ಮಂಡ್ಕೂರ್‌, ಸುಗ್ರೀವ-ವಿಷ್ಣುಪಾದ, ರಾವಣ-ಡಾ| ಸುನಿಲ್‌ ಮುಂಡ್ಕೂರ್‌, ರಾವಣದೂತ-ವಾದಿರಾಜ್‌, ತರಣಿ ಸೇನ1-ಶ್ರೀಶ ಕೆದಿಲಾಯ, 2-ಸಂದೀಪ್‌, ಸರಮೆ-ರವಿನಂದನ್‌, ಹನೂಮಂತ-ಗಿರಿರಾಜ್‌ ಹಾಗೂ 8 ಮಂದಿ ಕಪಿಗಳ ಪಾತ್ರ ಮಾಡಿದ್ದರು. 

ಸುಧನ್ವಾರ್ಜುನದಲ್ಲಿ ಅರ್ಜುನನಾಗಿ ಅಶ್ವಿ‌ತ್‌ ಸರಳಾಯ ಅಡೂರು, ವೃಷಕೇತುವಾಗಿ ವಿಶ್ವಮೇಧ, ಪ್ರದ್ಯುಮ್ನನಾಗಿ ಅರ್ಪಿತಾ, ನೀಲಧ್ವಜನಾಗಿ ಪ್ರಣಮ್ಯ ರಾವ್‌, ಯವನಾಶ್ವನಾಗಿ ಅನ್ವಿತಾ, ಸುಧನ್ನನಾಗಿ ವಿಂಧ್ಯ ಹಾಗೂ ಪ್ರಣಮ್ಯ ತಂತ್ರಿ, ಸುಗಭೆìಯಾಗಿ ಸೌಮ್ಯ, ಪ್ರಭಾವತಿಯಾಗಿ ಕಾವ್ಯ, ಅನುಸಾಲ್ವನಾಗಿ ಕೃಷ್ಣ ಪ್ರಕಾಶ್‌, ಹಂಸಧ್ವಜನಾಗಿ ನಾಗರಾಜ್‌ ಭಟ್‌, ಶಂಖನಾಗಿ ಮೋಹನ್‌, ಲಿಖೀತನಾಗಿ ಪ್ರಸನ್ನ ಆಚಾರ್‌, ಶ್ರೀಕೃಷ್ಣನಾಗಿ ಗಿರಿರಾಜ್‌ ಚೆನ್ನಾಗಿ ಪಾತ್ರ ನಿರ್ವಹಿಸಿದ್ದರು. 

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ಹಿರಿಯ ಅನುಭವಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಶ್ರೀನಿವಾಸ ಬಳ್ಳಮಂಜ, ಮದ್ದಳೆಯಲ್ಲಿ ನೆಕ್ಕರೆಮೂಲೆ ಗಣೇಶ್‌ ಭಟ್‌, ಚೆಂಡೆಯಲ್ಲಿ ಮುರಾರು ಕಡಂಬಳಿತ್ತಾಯ, ಹಿಮ್ಮೇಳವನ್ನು ಕಳೆಗಟ್ಟಿಸಿದ್ದರು. ಪ್ರಸಂಗ ಎಲ್ಲಿಯೂ ಮಕ್ಕಳಾಟಿಕೆ ಎನಿಸಿಲ್ಲ. ಹಿರಿಯರ ಯಕ್ಷಗಾನದಂತೆಯೇ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದರು. ಕೇವಲ ಸ್ವರಭಾರ ಹಾಗೂ ವೇಷದ ಗಾತ್ರ ಕಂಡು ಮಕ್ಕಳೆಂದು ಅರಿಯಬೇಕು ಅಷ್ಟೆ. 

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next