Advertisement

ಮನಸೂರೆಗೊಂಡ ಯಕ್ಷಗಾನ -ನಾಟ್ಯ –ಹಾಸ್ಯ ವೈಭವ

06:00 AM Aug 03, 2018 | |

ಜು. 29ರಂದು ಉಡುಪಿಯ ಪುರಭವನ ತುಂಬಿ ತುಳುಕಿ ಸಮೀ ಪದ ರಸ್ತೆ ಬ್ಲಾಕ್‌ ಆಗುವಂತೆ ಮಾಡಿದ್ದ ಒಂದು ಅದ್ಭುತ ಕಾರ್ಯಕ್ರಮ ಕೊಡಿಸುವಲ್ಲಿ ಕುತ್ಪಾಡಿ ಫ್ರೆಂಡ್ಸ್‌  ಸಂಘಟನೆ ಸಫ‌ಲವಾಗಿದೆ ಮತ್ತು ಯಕ್ಷಗಾನಕ್ಕೂ ಈ ರೀತಿ ಪ್ರೇಕ್ಷಕರನ್ನು ಸೆಳೆಯುವ ಶಕ್ತಿಯಿದೆ ಎಂಬುದು ಸಾಬೀತಾಯಿತು. ಯಕ್ಷಗಾನ –  ನಾಟ್ಯ – ಹಾಸ್ಯ ವೈಭವದಲ್ಲಿ ಪಾಲ್ಗೊಂಡ ಮಹಿಳೆಯರು ಸಂಖ್ಯೆ ಗಮನಾರ್ಹವಾಗಿತ್ತು. ಈ ವೇದಿಕೆಯಲ್ಲಿ ಭಾಗವತರು ಮತ್ತು ಮುಮ್ಮೇಳ ಕಲಾವಿದರು ಸೇರಿ ಒಂಟು 6 ಮಂದಿ ಮಹಿಳೆಯರಿದ್ದರು. 

Advertisement

ಕಾರ್ಯಕ್ರಮದಲ್ಲಿ ನಾಲ್ವರು ಪ್ರಮುಖ ಭಾಗವತರಿದ್ದುದು  ವಿಶೇಷ ಆಕರ್ಷಣೆಯಾಗಿತ್ತು.  ಹಿರಿಯರಾದ ದಿನೇಶ್‌  ಅಮ್ಮಣ್ಣಾಯ, ತೆಂಕು – ಬಡಗು ಶೈಲಿಯ ಸವ್ಯ ಸಾಚಿ ಸತ್ಯ ನಾರಾಯಣ ಪುಣಿಂಚತ್ತಾಯ, ತೆಂಕಿನ ಖ್ಯಾತ ಭಾಗವತರಾದ ಗಿರೀಶ್‌ ರೈ ಕಕ್ಕೆ ಪದವು ಮತ್ತು ಕಾವ್ಯಾಶ್ರೀ ಆಜೇರು ಅವರು  ಏಕಕಾಲದಲ್ಲಿ ಗಾನ ವೈಭವ ನಡೆಸಿಕೊಟ್ಟರು. 

ಎಲ್ಲ ಭಾಗವತರು ಸೇರಿ ಗಣಪತಿ ಸ್ತುತಿ ನಡೆಸಿದ ಬಳಿಕ ಗಾನ ವೈಭವವನ್ನು ದಿನೇಶ್‌ ಅಮ್ಮಣ್ಣಾಯರು ಬೊಟ್ಟಿ ಕೆರೆ ಪುರುಷೋತ್ತಮ ಪೂಂಜ ಅವರ ಮಾನಿಷಾದ ಪ್ರಸಂಗದ ಕೈಲಾಸ ಭಾವದಿ ಬಯಕೆಯೊಂದಿದೆ ಸಲಿಸು ಹಾಡಿನ ಮೂಲಕ ಆರಂಭಿಸಿದರು. ಬಳಿಕ ಬಡಗು ಶೈಲಿಯಲ್ಲಿ ದಕ್ಷಾ ಧ್ವರ ಪ್ರಸಂಗದ  ನೋಡಿರಿ ದ್ವಿಜರು ಪೋಪಿ ಹರು ಹಾಡನ್ನು  ಸತ್ಯ ನಾರಾಯಣ ಪುಣಿಂಚತ್ತಾಯರು, ಬಳಿಕ ಕರವ ಮುಗಿದಳು ಕಂಡು ರಘುಪತಿಯ  ಹಾಡನ್ನು ಅಮ್ಮಣ್ಣಾಯರು, ಮುದದಿ ಇಳಿದು ಹೋದಳು ಜಾನಕಿ ಹಾಡನ್ನು  ಗಿರೀಶ್‌ ರೈ ಕಕ್ಕೆ ಪದವು ಹಾಡಿ ರಂಜಿಸಿದರು. ಆ ಬಳಿಕ ಕಾವ್ಯಾ ಶ್ರೀ ಹರ ನಾಡಿನ ಶಂಕರ ಎಂಬ ಭಕ್ತಿ ಪ್ರಧಾನ ಹಾಡಿಗೆ ದನಿಯಾದರು. ಮುಂದೆ  ಚೂಡಾಮಣಿಯ ಕ್ಷೇಮವೇ ಹನುಮ ನಮ್ಮವರಿಗೆ ಹಾಡಿಗೆ  ಪುಣಿಂಚತ್ತಾಯ ಮತ್ತು ಅಮ್ಮಣ್ಣಾಯರು ದನಿಯಾದರು. ಕೊನೆಗೆ ಅಮ್ಮಣ್ಣಾಯರು ಪರಮ ಋಷಿ ಮಂಡಲದ ಮಧ್ಯದಿ ಹಾಡಿನ ಮೂಲಕ ಗಾನ ವೈಭವಕ್ಕೆ ಮಂಗಳ ಹಾಡಿದರು. 

ಬಳಿಕ ಕೃಷ್ಣ ವಂದೇ ಜಗದ್ಗುರು ನಾಟ್ಯ ವೈಭವ ಪ್ರಸ್ತುತಗೊಂಡಿತು. ತೆಂಕು ಹಾಡು ಮತ್ತು ಬಡಗು ಶೈಲಿಯಲ್ಲಿ ಈ ನಾಟ್ಯ ಕಾರ್ಯಕ್ರಮ ಜರಗಿತು. ಅದ್ವಿಕಾ ಶೆಟ್ಟಿ, ಸನ್ನಿಧಿ ಶೆಟ್ಟಿ ಮತ್ತು ಉಪಾಸನಾ ಎಂಬ ಹೆಣ್ಮಕ್ಕಳು ಶ್ರೀಕೃಷ್ಣನ ವಿವಿಧ ಲೀಲೆಗಳನ್ನು ಪ್ರದರ್ಶಿಸಿದರು. ಮೊಣಕಾಲು ಕುಣಿತವನ್ನೂ ಒಳಗೊಂಡಿದ್ದ ಇದನ್ನು ಮಕ್ಕಳು ನಡೆಸಿಕೊಟ್ಟರೂ ಪ್ರಬುದ್ಧತೆ ಕಂಡು ಬಂತು. ಆ ಬಳಿಕ ಪ್ರೇಕ್ಷಕರನ್ನು ಸೆಳೆದು ನಿಲ್ಲಿಸಿದ್ದು ಖ್ಯಾತ ಜೋಡಿಯಾಗಿರುವ ಡಾ| ವರ್ಷಾ ಶೆಟ್ಟಿ ಮತ್ತು ದಿಶಾ ಶೆಟ್ಟಿ ಅವರ ರಾಧಾ ವಿಲಾಸ  ನೃತ್ಯ ರೂಪಕ. ಮುನಿಸು, ಶೃಂಗಾರ, ಚೇಷ್ಟೆ, ಸರಸ ಹೀಗೆ ಹಲವು ರಸ ಘಳಿಗೆಗಳು ಅತ್ಯುತ್ತಮವಾಗಿ ಮೂಡಿ ಬಂತು. ಕೃಷ್ಣನ ಪಾತ್ರ ಧಾರಿ ದಿಶಾ ಶೆಟ್ಟಿ ಅವರ ಚೇಷ್ಟೆಯಂತು ಪ್ರೇಕ್ಷಕರಲ್ಲಿ ನಗು ಉಕ್ಕಿಸಿತು. 
ರಾಧೆಯ  ವಯ್ನಾರ, ಮುನಿಸು, ಲಯ ಬದ್ಧ ನಾಟ್ಯ ಶಹಬ್ಟಾಸ್‌ ಎನಿಸಿತು.

ಬಳಿಕ  ಶ್ರೀನಿವಾಸ ಕಲ್ಯಾಣ ಕಥಾಭಾಗವನ್ನು ಪ್ರದರ್ಶಿಸಲಾಗಿದ್ದು, ಇದರಲ್ಲಿ ದಿವಾಕರ್‌ ರೈ ಸಂಪಾಜೆ, ರಕ್ಷಿತ್‌  ಪಡ್ರೆ, ಸೀತಾರಾಮ ಕುಮಾರ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ  ಮಿಂಚಿದರು.  ಶ್ರೀನಿವಾಸನ ಸಖನಾಗಿ ಸೀತಾರಾಮ ಕುಮಾರ್‌ ಅವರ  ಹಾಸ್ಯ ನಗೆ ಬುಗ್ಗೆಗಳನ್ನು  ಚಿಮ್ಮಿಸಿತು. ಶ್ರೀನಿವಾಸವಾಗಿ ದಿವಾಕರ ರೈ ಮತ್ತು ಪದ್ಮಾವತಿಯಾಗಿ ರಕ್ಷಿತ್‌ ಅವರ  ಅದ್ಭುತ ಅಭಿನಯ ಹೊಸ ಕಳೆಗಟ್ಟಿತ್ತು. 

Advertisement

ಮದ್ದಳೆಯಲ್ಲಿ  ಬಡಗು ಶೈಲಿಯಲ್ಲಿ ಶಶಿಕುಮಾರ್‌ ಮತ್ತು  ತೆಂಕಿನಲ್ಲಿ ವಿಜಯ ಆಚಾರ್ಯ ಅವರ ಕೈಚಳಕ ವಿಶೇಷವಾಗಿತ್ತು. ಶಶಿಕುಮಾರ್‌ ಅವರು 6 ಮದ್ದಳೆಯನ್ನು ಏಕಕಾಲಕ್ಕೆ ನುಡಿಸಿದ್ದು ಮತ್ತು ವಿಜಯ ಆಚಾರ್ಯ ಅವರು ಒಂದರಲ್ಲಿ ಹಲವು ದನಿಗಳನ್ನು ಹೊರಹೊಮ್ಮಿಸಿದ್ದು ಮುದ ನೀಡಿತು. 

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next