Advertisement

Yakshagana ರಂಗದಿಂದ ಮರೆಯಾದ ಮೃದು ಮಧುರ ಮಾತುಗಳ ಕುಂಬಳೆ ಶ್ರೀಧರ್ ರಾವ್

07:25 PM Jul 05, 2024 | ವಿಷ್ಣುದಾಸ್ ಪಾಟೀಲ್ |

ತೆಂಕುತಿಟ್ಟು ಯಕ್ಷಗಾನ ರಂಗದಿಂದ ಹಿರಿಯ ಕೊಂಡಿಯೊಂದು ಕಳಚಿಕೊಂಡಿದೆ. ಯಕ್ಷಗಾನ ರಂಗಕ್ಕೆ ಆರು ದಶಕಗಳ ಕಾಲ ಭಾವಪೂರ್ಣ ಪಾತ್ರಗಳ ಮೂಲಕ ಮಹೋನ್ನತ ಕೊಡುಗೆ ಸಲ್ಲಿಸಿದ ಕುಂಬಳೆ ಶ್ರೀಧರ್ ರಾವ್ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿರುವುದು ಯಕ್ಷರಂಗಕ್ಕೆ ಬಲು ದೊಡ್ಡ ನಷ್ಟ ಎನ್ನಬಹುದು.

Advertisement

1949 ರ ಮಾರ್ಚ್ ತಿಂಗಳಿನಲ್ಲಿ ಕೇರಳದ ಕನ್ನಡ ನೆಲ ಯಕ್ಷಗಾನದ ದಿಗ್ಗಜರ ತವರು ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮಾಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರನಾಗಿ ಜನಿಸಿದರು. ಅನೇಕ ಪಾತ್ರಗಳಿಗೆ ಜೀವ ತುಂಬಿ ವಾಗ್ಚಾತುರ್ಯ ತೋರಿ ಹಲವರನ್ನು ಬೇರಗು ಮೂಡಿಸಿದ್ದ ಶ್ರೀಧರ್ ರಾವ್ ಅವರು ಆ ಕಾಲದಲ್ಲಿ ಬಡತನದ ಕಾರಣದಿಂದಾಗಿ ಕಲಿತದ್ದು ಕೇವಲ ಮೂರನೇ ತರಗತಿ ಮಾತ್ರ. ಬಾಲ್ಯದಲ್ಲೇ ತೀವ್ರವಾದ ಕಲಾಸಕ್ತಿ ಇದ್ದುದೇ ನಾನು ಕಲಾವಿದನಾಗಲು ಕಾರಣವಾಯಿತು ಎಂದು ಶ್ರೀಧರ್ ರಾವ್ ಅವರು ಹೇಳಿಕೊಳ್ಳುತ್ತಿದ್ದರು.

ಯಕ್ಷಗಾನ ಕಲಾವಿದನಾಗಬೇಕು ಎಂಬ ಆಸೆ ಚಿಗುರಿದಾಗಲೇ ಕಲ್ಲಾಡಿ ಕೊರಗ ಶೆಟ್ಟಿ ಅವರ ಸಂಚಾಲಕತ್ವದ ಕುಂಡಾವು ಮೇಳದ(ಇರಾ) ಕಣ್ಣಿಗೆ ಬಿದ್ದರು. ಭಾಗ್ಯವೋ ಎಂಬಂತೆ ಆ ಕಾಲದ ಕಂಚಿನ ಕಂಠದ ದಿಗ್ಗಜ ಭಾಗವತ ಮರವಂತೆ ನರಸಿಂಹ ದಾಸರ ಪದ್ಯಕ್ಕೆ ಹೆಜ್ಜೆ ಹಾಕಿ ರಂಗವೇರುವ ಅವಕಾಶ ಬ್ರಹ್ಮ ಕಪಾಲ ಪ್ರಸಂಗದಲ್ಲಿ ಒದಗಿ ಬಂತು. ಮೇಳ ಸೇರಿದ ಬಳಿಕ ಅನಿವಾರ್ಯವಾಗಿದ್ದ ನಾಟ್ಯವನ್ನು ಕುಂಬಳೆ ಚಂದ್ರಶೇಖರ ಮತ್ತು ಕಮಲಾಕ್ಷ ಹಾಸ್ಯಗಾರ ಅವರ ಬಳಿ ಅಭ್ಯಸಿಸಿದರು. ಬಡಗು ತಿಟ್ಟು ಯಕ್ಷಗಾನದ ಮೇಲೂ ಅಪಾರ ಪ್ರೀತಿ ಹೊಂದಿದ್ದ ಶ್ರೀಧರ ರಾಯರು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಬಂದು ಬಡಗು ತಿಟ್ಟಿನ ಸೂಕ್ಷ್ಮ ಹೆಜ್ಜೆಗಳನ್ನು ಸಮರ್ಥ ಗುರುಗಳ ಬಳಿ ಅಭ್ಯಾಸ ಮಾಡಿದ್ದರು, ಮಾತ್ರವಲ್ಲದೆ ಭರತ ನಾಟ್ಯವನ್ನೂ ಅಭ್ಯಾಸ ಮಾಡಿ ತಾನು ನಿರ್ವಹಿಸುತ್ತಿದ್ದ ಸ್ತ್ರೀ ಪಾತ್ರಗಳಿಗೆ ಅಳವಡಿಸಿಕೊಂಡು ಅಂದ ಹೆಚ್ಚಿಸಿದ್ದರು. ಇದು ಅವರ ಕಲಾ ಶ್ರದ್ಧೆಗೆ ಸಾಕ್ಷಿ ಎನ್ನಬಹುದು.

ಇರಾ ಮೇಳದಿಂದ ಕಲಾ ಜೀವನ ಆರಂಭಿಸಿ ಕುತ್ಯಾಳ ಗೋಪಾಲ ಕೃಷ್ಣ ಯಕ್ಷಗಾನ ಮಂಡಳಿ ಕೂಡ್ಲು, ಮೂಲ್ಕಿ, ಕರ್ನಾಟಕ ಮೇಳದಲ್ಲಿ ಘಟಾನುಘಟಿ ಕಲಾವಿದರೊಂದಿಗೆ ಹಲವು ಪಾತ್ರಗಳಿಗೆ ಜೀವ ತುಂಬಿದರು. ಬಳಿಕ ಧಮಸ್ಥಳ ಮೇಳವೊಂದರಲ್ಲೇ ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಕಲಾ ಸೇವೆ ಮಾಡಿ ಪುರಾಣ ಪ್ರಪಂಚದ ನೂರಾರು ಪಾತ್ರಗಳನ್ನು ನಿರ್ವಹಿಸಿ ಜನಮಾನಸದಲ್ಲಿ ನೆಲೆಯಾಗಿದ್ದರು.

ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ, ಪುರುಷ ವೇಷ ಮಾಡಲು ಆರಂಭಿಸಿದ ಬಳಿಕ ಈಶ್ವರನ ಪಾತ್ರ ಅಪಾರ ಖ್ಯಾತಿ ತಂದು ಕೊಟ್ಟಿತು. ಲಕ್ಷ್ಮಿ, ಸುಭದ್ರೆ, ದಾಕ್ಷಾಯಿಣಿ, ಪ್ರಮೀಳೆ, ಶಶಿಪ್ರಭೆ ಸೇರಿ ಅನೇಕ ಪಾತ್ರಗಳಿಗೆ ತನ್ನದೇ ಆದ ಪರಂಪರೆಯ ಚೌಕಟ್ಟಿನ ಪರಿಧಿಯೊಳಗೆ ಜೀವ ತುಂಬಿದ್ದರು.ಪಂಚವಟಿಯ ಶ್ರೀರಾಮ ಸೇರಿ ಅನೇಕ ಪುರುಷ ಪಾತ್ರಗಳನ್ನು ರಂಗದಲ್ಲಿ ಮೆರೆಸಿದ್ದರು. ರಾವ್ ಅವರ ಗರತಿ ಪಾತ್ರಗಳನ್ನು ಇಂದಿಗೂ ಹಿರಿಯ ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ದಮಯಂತಿ, ಸೀತಾ ಪರಿತ್ಯಾಗದ ಸೀತೆ ಮೊದಲಾದ ಪಾತ್ರಗಳಿಗೆ ಜೀವ ತುಂಬಿದ್ದರು.

Advertisement

ಧರ್ಮಸ್ಥಳ ಮೇಳದ ಸುದೀರ್ಘ ಕಲಾಯಾನದಲ್ಲಿ ಕುಂಬಳೆ ಸುಂದರ್ ರಾವ್, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಸೂರಿಕುಮೇರು ಗೋವಿಂದ ಭಟ್ ಮೊದಲಾದವರೊಂದಿಗೆ ರಂಗ ವೈಭವ ಸಾಕ್ಷಾತ್ಕಾರ ಗೊಳಿಸಿದ್ದರು.

ನಿಡ್ಲೆ ಗೋವಿಂದ ಭಟ್ ಅವರೊಂದಿಗೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರಧಾನ ಕಲಾವಿದರಾಗಿ ಕರ್ನಾಟಕದುದ್ದಕ್ಕೂ, ಅನ್ಯರಾಜ್ಯಗಳಲ್ಲಿ ಭಿನ್ನ ಭಿನ್ನ ಪಾತ್ರಗಳ ಮೂಲಕ ತನ್ನ ಪ್ರತಿಭೆ ಮೆರೆದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಹಿರಿಯ ಮತ್ತು ಈಗಿನ ಯುವ ಕಲಾವಿದರೊಂದಿಗೆ ಆತ್ಮೀಯವಾಗಿ ತಾಳಮದ್ದಳೆ ಕ್ಷೇತ್ರದಲ್ಲೂ ಹಲವು ಪಾತ್ರಗಳಿಗೆ ಅರ್ಥ ಹೇಳಿ ವೇದಿಕೆಯ ಕಳೆ ಹೆಚ್ಚಿಸಿದ ಹಿರಿಮೆ ಶ್ರೀಧರ್ ರಾವ್ ಅವರದ್ದು.

ಹಂತ ಹಂತವಾಗಿ ಬೆಳೆದು ಬಂದವರು
ನಿತ್ಯವೇಷ, ಕಟ್ಟು ವೇಷ, ಪುಂಡುವೇಷ, ಪೀಠಿಕೆ ವೇಷ, ಸಖಿ ಸ್ತ್ರೀ ವೇಷ ಹೀಗೆ ಹಂತ ಹಂತವಾಗಿ ಪ್ರಧಾನ ಪಾತ್ರಗಳತ್ತ ಬಂದು ಖ್ಯಾತಿ ಪಡೆದವರು ಶ್ರೀಧರ್ ರಾವ್ ಅವರು.

ಆಕರ್ಷಕ ಶರೀರ ಮತ್ತು ಶಾರೀರ ಹೊಂದಿದ್ದುದೂ ಅವರ ಕಲಾ ಬದುಕಿನ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿತು. ಹಿರಿಯ ಪ್ರೇಕ್ಷಕರು ಇಂದಿಗೂ ಶ್ರೀಧರ ರಾಯರ ಮೃದು ಮಧುರ ಸುಸ್ಪಷ್ಟ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ.

ಕರ್ನಾಟಕ ಮೇಳದಲ್ಲಿ ಅಳಕೆ ರಾಮಯ್ಯ ರೈ, ಕೊಳ್ಯೂರು ರಾಮಚಂದ್ರ ರಾಯರಂತಹ ದಿಗ್ಗಜ ಕಲಾವಿದರ ಒಡನಾಟ ಮತ್ತು ಅವರ ಪತ್ರಗಳನ್ನು ನೋಡುತ್ತಾ ನಾನು ಬೆಳೆದೆ ಎಂದು ಶ್ರೀಧರ್ ರಾವ್ ಅವರು ಚೌಕಿ ಮನೆಯಲ್ಲಿ ಯುವ ಕಲಾವಿದರೊಂದಿಗೆ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು.

ತನ್ನ ಪುಣ್ಯವೋ ಎಂಬಂತೆ ಯಕ್ಷಗಾನ ಕ್ಷೇತ್ರ ಹಾಗೂ ತಾಳಮದ್ದಳೆಯ ವಿಖ್ಯಾತ ವಾಗ್ಮಿ ಶೇಣಿ ಗೋಪಾಲಕೃಷ್ಣ ಭಟ್ ಅವರ ಒಡನಾಟ ಮಾರ್ಗದರ್ಶನ ನನ್ನ ಕಲಾ ಬದುಕಿನ ಆರಂಭದಲ್ಲೇ ಸಿಕ್ಕಿದ್ದು ದೊಡ್ಡ ಬೆಳಕಾಗಿ ಪರಿಣಮಿಸಿತು ಎಂದು ಶ್ರೀಧರ್ ರಾವ್ ಅವರು ನೆನಪಿಸಿಕೊಳ್ಳುತ್ತಿದ್ದರು. ಶೇಣಿಯವರೊಂದಿಗೆ ಪಾತ್ರ ಮಾಡಲು ಸಾಮಾನ್ಯ ಕಲಾವಿದರು ಭಯ ಪಡುತ್ತಿದ್ದ ಕಾಲದಲ್ಲಿ ವಾಲಿಗೆ ಜತೆಯಾಗಿ ತಾರೆ, ರಾವಣನಿಗೆ ಜತೆಯಾಗಿ ಮಂಡೋದರಿ, ಬ್ರಹ್ಮನಿಗೆ ಜತೆಯಾಗಿ ಶಾರದೆ,ಈಶ್ವರನಿಗೆ ದಾಕ್ಷಾಯಣಿ ಮತ್ತು ಪಾರ್ವತಿಯಾಗಿ ಜನ ಮೆಚ್ಚುಗೆ ಪಡೆದಿದ್ದರು.

ದಾಮೋದರ ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ ಅವರಂತಹ ದಿಗ್ಗಜ ಭಾಗವತ ಪದ್ಯಗಳಿಗೆ ಹೆಜ್ಜೆ ಹಾಕಿದ ಹಿರಿಮೆ ಇವರದ್ದಾಗಿದೆ.

ಕಲಾ ಬದುಕಿನ ಪಯಣ ಮುಂದುವರಿಸಿದ ಶ್ರೀಧರ್ ರಾವ್ ಅವರು ಉಪ್ಪಿನಂಗಡಿ ಸಮೀಪದ ಕೃಷ್ಣ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ಪತ್ನಿ ಸುಲೋಚನಾ, ಪುತ್ರರಾದ ಗಣೇಶ್ ಪ್ರಸಾದ್, ಕೃಷ್ಣ ಪ್ರಸಾದ್, ದೇವಿ ಪ್ರಸಾದ್ ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next