ಉಡುಪಿ: ಉತ್ತಮ ಸಮಾಜ ನಿರ್ಮಾಣಕ್ಕೆ ಪುರಾಣ ಚಿಂತನೆಗಳು ಅಗತ್ಯವಾಗಿದ್ದು, ಅವುಗಳನ್ನು ಪ್ರಚುರಪಡಿಸುವಲ್ಲಿ, ಪ್ರಸ್ತುತಗೊಳಿಸುವಲ್ಲಿ ಯಕ್ಷಗಾನ ಕಲೆಯ ಪಾತ್ರ ಹಿರಿದು ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ನುಡಿದರು.
ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ವತಿಯಿಂದ 17 ಮಂದಿ ಹಿರಿಯ ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸಮ್ಮಾನಿಸಿ ಅವರು ಆಶೀರ್ವಚನ ನೀಡಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಪುರಾಣದ ಚಿಂತನೆಗಳು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಯಕ್ಷಗಾನ ಸಹಿತ ಭಾರತದ ಎಲ್ಲ ಸ್ಥಳೀಯ ಕಲಾಪ್ರಕಾರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದು ಅನುಗ್ರಹಿಸಿದರು.
ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಶಾಸಕ ಕೆ. ರಘುಪತಿ ಭಟ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಯಕ್ಷಗಾನ ಚಿಂತಕ ಡಾ| ಚಂದ್ರಶೇಖರ ದಾಮ್ಲೆ ಇದ್ದರು.
ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ
ಯಕ್ಷಗಾನ ಕಲಾವಿದರಾದ ಸುರೇಂದ್ರ ಆಲೂರು, ಶಾಂತಾರಾಮ ಆಚಾರ್ ಬ್ರಹ್ಮಾವರ, ಸದಾಶಿವ ಕುಲಾಲ್ ವೇಣೂರು, ಕೊರಗಪ್ಪ ರೈ ಮಡಾವು, ಕೃಷ್ಣ ಜಿ. ನಾಯ್ಕ ಬೇಡ್ಕಣಿ, ದಿನಕರ ಗೋಖಲೆ ಬೆಳ್ತಂಗಡಿ, ನಾರಾಯಣ ಶಬರಾಯ, ಬಿ. ಜನಾರ್ದನ ಗುಡಿಗಾರ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ ಮೊಗವೀರ ಮೊಳಹಳ್ಳಿ, ಬೋಳ್ಗೆರೆ ಗಜಾನನ ಭಂಡಾರಿ, ವಿಶ್ವೇಶ್ವರ ರಾವ್ ಕಟೀಲು, ನಿಟ್ಟೂರು ಸುಬ್ರಹ್ಮಣ್ಯ ಭಟ್ ಹೊಸನಗರ, ಎ. ಸದಾನಂದ ಶೆಣೈ ಕಮಲಶಿಲೆ, ಅಪ್ಪುಕುಂಞ ಮಣಿಯಾಣಿ ಕಾಸರಗೋಡು, ರಾಜೀವ ಶೆಟ್ಟಿ ಹೊಸಂಗಡಿ, ಬಾಲಕೃಷ್ಣ ಶೆಟ್ಟಿ ಮುಂಡಾಜೆ ಅವರಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯ ಕೋಶಾಧಿಕಾರಿ ಮನೋಹರ್ ಕೆ. ಅವರಿಗೆ ಯಕ್ಷ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಮೃತಪಟ್ಟ ಯಕ್ಷಗಾನ ಕಲಾವಿದ ಗೋಪಾಲಗೌಡ ಅವರ ಪತ್ನಿಗೆ ಕಲಾರಂಗ ವತಿಯಿಂದ 50 ಸಾವಿರ ರೂ. ನೆರವು ನೀಡಲಾಯಿತು.ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಎಚ್.ಎಂ. ಶೃಂಗೇಶ್ವರ ವಂದಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.