ತಾಳ, ಮುದ್ರೆಗಳು, ಹೆಜ್ಜೆಗಾರಿಕೆ, ರಸಾಭಿನಯ, ಮಾತುಗಾರಿಕೆ, ಪುಂಡು ವೇಷದ ಒಡ್ಡೋಲಗ, ಯುದ್ಧ ನೃತ್ಯ, ಬಣ್ಣದ ವೇಷದ ಒಡ್ಡೋಲಗ, ಕೃಷ್ಣನ ಒಡ್ಡೋಲಗ ಹೀಗೆ ಯಕ್ಷಗಾನದ ಅನೇಕ ನಿಕಷಗಳ ಬಗ್ಗೆ ಸ್ಪಷ್ಟವಾದ ವಿವರಣೆ ಮತ್ತು ಅಭಿನಯವನ್ನು ಪ್ರಾತ್ಯಕ್ಷಿಕೆ ಒಳಗೊಂಡಿತ್ತು.
ಮೈಸೂರಿನ ಸರಸ್ವತಿಪುರಂನ ವಿಜಯ ವಿಠ್ಠಲ ಶಾಲೆಯ ವಿಶ್ವೇಶತೀರ್ಥ ಮಂಟಪದಲ್ಲಿ ಮೈಸೂರಿನ ಕರಾವಳಿಯ ಯಕ್ಷಗಾನ ಕೇಂದ್ರ ಇದರ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರು ನೀಡಿದ ಯಕ್ಷಗಾನ ಪ್ರಾತ್ಯಕ್ಷಿಕೆ ಮೆಚ್ಚುಗೆಗೆ ಪಾತ್ರವಾಯಿತು.
ಯಕ್ಷಗಾನದ ಎಲ್ಲ ಅಂಗಗಳ ಬಗ್ಗೆ ಸೂಕ್ಷ್ಮ ಒಳನೋಟವನ್ನು ನೀಡುವ ಯಕ್ಷದೇಗುಲ ಪರಿಕಲ್ಪನೆಯ ಈ ಪ್ರಾತ್ಯಕ್ಷಿಕೆಯ ವಿಶೇಷತೆಯೆಂದರೆ ಬಣ್ಣದ ವೇಷ ಮತ್ತು ಪುಂಡುವೇಷಗಳೆರಡು ವೀಕ್ಷಕರೆದುರೇ ಸಿದ್ಧಗೊಳ್ಳುವ ಬಗೆ. ತಾಳ, ಮುದ್ರೆಗಳು, ಹೆಜ್ಜೆಗಾರಿಕೆ, ರಸಾಭಿನಯ, ಮಾತುಗಾರಿಕೆ, ಪುಂಡು ವೇಷದ ಒಡ್ಡೋಲಗ, ಯುದ್ಧ ನೃತ್ಯ, ಬಣ್ಣದ ವೇಷದ ಒಡ್ಡೋಲಗ, ಕೃಷ್ಣನ ಒಡ್ಡೋಲಗ ಹೀಗೆ ಯಕ್ಷಗಾನದ ಅನೇಕ ನಿಕಷಗಳ ಬಗ್ಗೆ ಸ್ಪಷ್ಟವಾದ ವಿವರಣೆ ಮತ್ತು ಅಭಿನಯವನ್ನು ಪ್ರಾತ್ಯಕ್ಷಿಕೆ ಒಳಗೊಂಡಿತ್ತು. ಹಾಗೆಯೇ ರಂಗದ ಇಕ್ಕೆಲಗಳಲ್ಲಿ ಇಬ್ಬರು ಕಲಾವಿದರು ಬಣ್ಣದ ವೇಷ ಮತ್ತು ಪುಂಡುವೇಷಗಳನ್ನು ಧರಿಸುವ ಪ್ರಕ್ರಿಯೆ ನಡೆಯುತ್ತದೆ. ಅಕ್ಕಿಹಿಟ್ಟಿನಿಂದ ತಯಾರಿಸಲ್ಪಟ್ಟ ಬಣ್ಣದ ವೇಷಧಾರಿ ಚುಟ್ಟಿ ಗೆರೆಗಳ ಮೂಲಕ ರಕ್ಕಸ ವೇಷವೊಂದು ರೂಪುಗೊಳ್ಳುತ್ತದೆ. ಹಾಗೆ ಪ್ರಾತ್ಯಕ್ಷಿಕೆ ವೀಕ್ಷಕರೆದುರು ಅಟ್ಟೆ ಕ್ಯಾದಿಗೆ ಮುಂದಲೆ ಕಟ್ಟುವ ಮೂಲಕ ಪುಂಡು ವೇಷ ರೂಪುಗೊಳ್ಳುತ್ತದೆ. ವೇಷಧಾರಿಗಳು ವೇಷ ಕಟ್ಟುತ್ತಿರುವಂತೆಯೇ ಅವರು ಬಳಸುವ ಪರಿಕರಗಳ ಬಗ್ಗೆ ಮಾಹಿತಿ ಮತ್ತು ಅವೆಲ್ಲವೂ ಸೇರಿ ಒಟ್ಟಂದದಲ್ಲಿ ಜೋಡಣೆಯಾದಾಗ ಉಂಟಾಗುವ ಆಕಾರದ ಬಗ್ಗೆ ತಿಳಿಸುತ್ತಾರೆ. ಹಾಗೆ ಹಾಸ್ಯ, ಶೃಂಗಾರ, ವೀರ, ಕರುಣರಸಗಳನ್ನು ಒಳಗೊಂಡ ದೃಶ್ಯದ ತುಣುಕುಗಳನ್ನು ಈ ಪ್ರಾತ್ಯಕ್ಷಿಕೆ ಒಳಗೊಂಡಿತ್ತು.
ಕಲಾವಿದ ಸುಜಯೀಂದ್ರ ಹಂದೆ ನಿರೂಪಿಸಿ, ಪ್ರಾತ್ಯಕ್ಷಿಕೆಯಲ್ಲಿ ಕಲಾವಿದರಾಗಿ ಭಾಗವತರು ದೇವರಾಜ ದಾಸ್, ಲಂಬೋದರ ಹೆಗಡೆ ಮದ್ದಲೆಯಲ್ಲಿ ಗಣಪತಿ ಭಟ್, ಚಂಡೆಯಲ್ಲಿ ಮಾಧವ, ವೇಷಧಾರಿಯಾಗಿ ಕೃಷ್ಣಮೂರ್ತಿ ಉರಾಳ, ತಮ್ಮಣ್ಣ ಗಾಂವ್ಕರ್, ನವೀನ್ ಕೋಟ, ನರಸಿಂಹ ತುಂಗ, ಮನೋಜ್ ಭಟ್, ಕಡ್ಲೆ ಗಣಪತಿ ಹೆಗಡೆ, ಉಪ್ಪುಂದ ಗಣೇಶ, ಉದಯ ಭೋವಿ ಮತ್ತು ರಾಜು ಪೂಜಾರಿ ಅವರು ಭಾಗವಹಿಸಿದರು. ಕೆ. ಮೋಹನ್ ನಿರ್ದೇಶನದಲ್ಲಿ, ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆಯಿತು.
ಕೋಟ ಸುದರ್ಶನ ಉರಾಳ