Advertisement
ಯಕ್ಷಗಾನದ ಕರ್ಮಭೂಮಿ ಬ್ರಹ್ಮಾವರ ಸಮೀಪದ ಕುಂಜಾಲಿನಲ್ಲಿ ಪದ್ಮನಾಭ ನಾಯಕ್ ಮತ್ತು ಶಾರಾದಾ ಅವರ ಪುತ್ರನಾಗಿ 1945 ರಲ್ಲಿ ಜನಿಸಿದ ರಾಮಕೃಷ್ಣ ಅವರು 7 ನೇ ತರಗತಿಯ ವರೆಗೆ ವ್ಯಾಸಂಗ ಮಾಡಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು.
Related Articles
Advertisement
ಮಂದಾರ್ತಿ ಮೇಳ, ಅಮೃತೇಶ್ವರಿ ಮೇಳ, ಮಾರಣಕಟ್ಟೆ,ಕೊಲ್ಲೂರು , ಶಿರಸಿ ಮೇಳ ,ಇಡಗುಂಜಿ ಮೇಳ , ಸಾಲಿಗ್ರಾಮ ಮೇಳ ಗಳಲ್ಲಿ ಒಟ್ಟು 40 ವರ್ಷಗಳ ಸುಧೀರ್ಘ ತಿರುಗಾಟ ಮಾಡಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಡಾ.ಶಿವರಾಮ ಕಾರಂತರ ಗಮನ ಸೆಳೆದಿದ್ದ ರಾಮಕೃಷ್ಣ ನಾಯಕ್ ಅವರು ಬ್ಯಾಲೆ ತಂಡದೊಂದಿಗೆ ಹಾಂಕಾಂಗ್ ಪ್ರವಾಸವನ್ನೂ ಮಾಡಿ ವಿದೇಶದಲ್ಲೂ ತನ್ನ ಪ್ರತಿಭೆ ಮೆರೆದಿದ್ದಾರೆ.
ಇಡಗುಂಜಿ ಮೇಳದಲ್ಲಿ ಕೆರೆಮನೆ ದಿಗ್ಗಜ ಕಲಾವಿದರಾದ ಮಹಾಬಲ ಹೆಗಡೆ, ಶಂಭು ಹೆಗಡೆ ಅವರ ಒಡನಾಟವೂ ರಾಮಕೃಷ್ಣ ಅವರಿಗೆ ಉತ್ತರ ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಲು ಸಾಧ್ಯವಾಯಿತು.
ಬೇಡರ ಕಣ್ಣಪ್ಪ ಪ್ರಸಂಗದ ಕಾಶಿಮಾಣಿ ಪಾತ್ರ ಅವರಿಗೆ ಇನ್ನಿಲ್ಲದ ಖ್ಯಾತಿ ತಂದು ಕೊಟ್ಟಿತು.ಅವರು ಮುಗ್ಧ ಬ್ರಾಹ್ಮಣ ಮಾಣಿಯ ಪಾತ್ರದ ಚಿತ್ರಣ ಅದ್ಭುತವಾಗಿತ್ತು ಮತ್ತು ಅದನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎನ್ನುವುದು ಹಲವು ಹಿರಿಯ ಯಕ್ಷಗಾನ ಅಭಿಮಾನಿಗಳ ಅಭಿಪ್ರಾಯ. ದಿಗ್ಗಜ ವಾಗ್ಮಿಗಳಾದ ಶೇಣಿ ಗೋಪಾಲಕೃಷ್ಣ ಭಟ್ ಅವರ ಕೈಲಾಸ ಶಾಸ್ತ್ರೀ ಪಾತ್ರಕ್ಕೆ ರಾಮಕೃಷ್ಣ ಅವರ ಮಾಣಿ ಅಪಾರ ಜನ ಮೆಚ್ಚುಗೆ ಗೆ ಪಾತ್ರವಾಗಿದ್ದು ಇಂದಿಗೂ ಹಲವು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಮಾತೃಭಾಷೆ ಮೋಡಿ!ಶಿರಸಿ ಮೇಳದಲ್ಲಿನ ಅಂದಿನ ಜನಪ್ರಿಯ ಪ್ರಸಂಗವಾದ ಭಾಗ್ಯ ಭಾರತಿಯಲ್ಲಿ ರಾಮಕೃಷ್ಣ ಮತ್ತು ದಿವಂಗತ ತೆಕ್ಕಟ್ಟೆ ಆನಂದ ಮಾಸ್ಟರ್ ಅವರ ಮರ್ತಪ್ಪ ಚರ್ಡಪ್ಪ ಜೋಡಿ ಗಲ್ಲಾ ಪೆಟ್ಟಿಗೆ ಸೂರೆಗೈದಿದ್ದು, ಅಮೋಘ ಜೋಡಿ ಎನಿಸಿಕೊಂಡು ಮಾತೃಭಾಷೆಯಾದ ಕೊಂಕಣಿಯ ಸಂಭಾಷಣೆಯಲ್ಲಿ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿದ್ದನ್ನು ಇಂದಿಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ರಾಮಕೃಷ್ಣ ಅವರ ಹರಿಶ್ಚಂದ್ರ ಪ್ರಸಂಗದ ನಕ್ಷತ್ರಿಕ, ಶೂರ್ಪನಖಾ ವಿವಾಹದ ವಿದ್ಯುಜ್ಜೀವ , ಬೇಹಿನ ಚರ, ವೃದ್ಧ ಬ್ರಾಹ್ಮಣ, ಸುಕನ್ಯಾ ಪರಿಣಯ ವಿಢೂರಥ, ಪ್ರಹ್ಲಾದ ಚರಿತ್ರೆಯ ದಡ್ಡ , ವನಪಾಲಕಿ, ದಮಯಯಂತಿಯ ಬಾಹುಕ, ಕಂದರ ಪಾತ್ರಗಳು ಬೇರೆ ಹಾಸ್ಯಗಾರರಿಂದ ಸರಿಗಟ್ಟಲು ಅಸಾಧ್ಯ ಎನಿಸುವಷ್ಟು ಪ್ರಸಿದ್ಧವಾಗಿದ್ದವು.