ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಯಕ್ಷಗಾನ ಗೆಜ್ಜೆ ಸದ್ದು ಮಾಡುತ್ತಿದೆ. ಯಕ್ಷಗಾನಕ್ಕೊಂದು ಹೊಸ ಭರವಸೆ ಮೂಡಿಸಿದ್ದು ಇಲ್ಲಿನ ಯಕ್ಷ ಶಿಕ್ಷಣ. ಉಡುಪಿ ಜಿಲ್ಲೆಯ ಹಲವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಬಿಡುವಿನ ಸಮಯದಲ್ಲಿ ಮಕ್ಕಳ ಯಕ್ಷಗಾನದ ಹೆಜ್ಜೆ ಹೊಸ ನಿರೀಕ್ಷೆಗಳೊಂದಿಗೆ ರಂಗೇರುತ್ತಿದೆ. ಸಾಂಪ್ರದಾಯಿಕ ಚೌಕಟ್ಟಿನೊಳಗೆ ಹಿರಿಯ ಯಕ್ಷಗಾನ ಗುರುಗಳಿಂದ 25 – 30ರಷ್ಟು ವಿದ್ಯಾರ್ಥಿಗಳು ಪ್ರತಿ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಪೌರಾಣಿಕ ಯಕ್ಷಗಾನ ಪ್ರಸಂಗಗಳ ಜತೆ ಪೌರಾಣಿಕ ಕಥಾಜ್ಞಾನವನ್ನು ಸಂಪಾದಿಸುತ್ತ ಆಧುನಿಕ ಮನೋರಂಜನಾ ಮಾಧ್ಯಮಗಳ ಭರಾಟೆಯ ನಡುವಿನಲ್ಲೂ ಯಕ್ಷಗಾನೀಯ ಸುಗಂಧ ತೇಲಿ ಬರುತ್ತಿದೆ.
ಉಡುಪಿಯ ರಾಜಾಂಗಣ ದಲ್ಲಿ ಪರ್ಯಾಯ ಮಠ, ಶ್ರೀಕೃಷ್ಣ ಮಠ ಹಾಗೂ ಯಕ್ಷಗಾನ ಕಲಾರಂಗದ ಪ್ರೋತ್ಸಾಹದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯುವ ಮಕ್ಕಳ ಯಕ್ಷಗಾನ ಪ್ರದರ್ಶನ ಈ ಕ್ಷೇತ್ರಕ್ಕೊಂದು ಹೊಸ ಭರವಸೆ ಮೂಡಿಸಿದೆ. ಉಡುಪಿ ಸುತ್ತಮುತ್ತಲಿನ ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ.
ಎಳವೆಯಲ್ಲಿಯೇ ಮಕ್ಕಳಲ್ಲಿ ಯಕ್ಷಗಾನ ಆಸಕ್ತಿ ಹುಟ್ಟಿಸಿದರೆ ಮುಂದಿನ ಶಿಕ್ಷಣದ ಜತೆಗೆ ಪಠ್ಯೇತರ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚು ಅನುಕೂಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಭರತನಾಟ್ಯ, ಫಿಲ್ಮ್ಡ್ಯಾನ್ಸ್, ಸಂಗೀತ ಕಲಿಕೆಯು ಹೆಚ್ಚು ಮಹತ್ವ ಪಡೆಯುತ್ತಿರುವಂತೆ ಆ ಸಾಲಿಗೆ ಯಕ್ಷಗಾನವೂ ಸೇರುತ್ತಿರುವುದು ಸಮಾಧಾನಕರ ಸಂಗತಿ. ಮಾಧ್ಯಮಿಕ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಾಲೇಜು ವಾರ್ಷಿಕೋತ್ಸವಗಳಲ್ಲಿ ಯಕ್ಷಗಾನಾಭಿನಯಕ್ಕೆ ಹೆಚ್ಚು ಆಸಕ್ತರಾಗುತ್ತಿದ್ದಾರೆ. ಇದು ಶೈಕ್ಷಣಿಕ ಪರಿಸರದಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.
ಮಾಧ್ಯಮಿಕ ಶಾಲೆಗಳಲ್ಲಿರುವ ಯಕ್ಷ ಶಿಕ್ಷಣವನ್ನು ಕಾಲೇಜುಗಳಿಗೂ ವಿಸ್ತರಿಸಿದರೆ ಕಲಾ ಪರಂಪರೆಯ ಮಹತ್ವವನ್ನು ಜೀವಂತವಾಗಿಡಲು ಸಾಧ್ಯ. ವಾರ್ಷಿಕೋತ್ಸವ ಮತ್ತು ವಿಶೇಷ ಸಂದರ್ಭಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ.
ಉಡುಪಿ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥರ ಅನುಗ್ರಹದಲ್ಲಿ ಪೂರ್ಣಪ್ರಜ್ಞ ಪ.ಪೂ. ಕಾಲೇಜಿನಲ್ಲಿ ಇತ್ತೀಚಿಗೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಸಹ ಯೋಗದಲ್ಲಿ “ಶ್ವೇತಕುಮಾರ ಚರಿತ್ರೆ’ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಬಹುಮಂದಿ ವಿದ್ಯಾರ್ಥಿಗಳೇ ಪ್ರಮುಖ ಪಾತ್ರ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ಪಾರಂಪರಿಕ ಶೈಲಿಯ ಯಕ್ಷಗಾನವನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿ ಸುವ ಅದಮಾರು ಮಠ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಈ ಗುಣ ಇತರರಿಗೂ ಮಾದರಿಯಾಗಲಿ.
ಅಶ್ವತ್ಥ್ ಭಾರದ್ವಾಜ್ ಕೆ.