Advertisement
ಕಾಸರಗೋಡಿನ ಪಡ್ರೆಯಲ್ಲಿ ಜನಿಸಿ ಅಜ್ಜ, ತಂದೆಯಿಂದ ಭಾಗವತಿಕೆ ಕಲಿತರು. ತಂದೆ ಕೂಡ ಒಳ್ಳೆಯ ವೇಷಧಾರಿ, ಭಾಗವತರೂ ಹೌದು. ಅಜ್ಜ ನಾರಾಯಣ ಬಲಿಪರು ಅಥವಾ ದೊಡ್ಡ ಬಲಿಪರು ದಂತಕಥೆ. ಅದನ್ನೇ ಇವರೂ ಉಳಿಸಿಕೊಂಡು ಬಂದರು. ನಾಲ್ಕಾಣೆ ಸಂಬಳದ ಸಂಗೀತ ಭಾಗವತನಿಂದ ತೊಡಗಿಸಿಕೊಂಡ ಅವರು ಅಖೀಲ ರಾಷ್ಟ್ರೀಯ ಮಟ್ಟದ ಪಾರಂಪರಿಕ ರಂಗಭೂಮಿ ಶ್ರೇಷ್ಠರಲ್ಲಿ ಒಬ್ಬರಾದರು.
Related Articles
Advertisement
ಅವರಿಗೆ ಉತ್ತಮ ಎಂಬ ಪದ ಬಳಕೆ ಮಾಡಬಾರದು. ಸಜ್ಜನಿಕೆ, ಕಲಾವಂತಿಕೆ, ಪಾಂಡಿತ್ಯ, ಪ್ರಾವೀಣ್ಯ, ಎಲ್ಲದರಲ್ಲೂ ಅಸಾಧಾರಣ ಪ್ರತಿಭೆ. ಸರ್ವಾಂಗಶ್ರೇಷ್ಠರು. ಅಂತಹವರು ಎಷ್ಟು ಕಾಲ ಇದ್ದರೂ ಬೇಕು. ನಮಗಾಗಿರುವ ದುಃಖವನ್ನು ಹೇಳಲು ಶಬ್ದಗಳಿಲ್ಲ, ಅಂಥದ್ದು ಇನ್ನೊಂದಿಲ್ಲ. ಅದೊಂದು ರತ್ನ, ವಜ್ರ, ಚಿನ್ನ.
ಅವರ ಭಾಗವತಿಕೆಯ ಶುದ್ಧ ಶೈಲಿ, ಸಂಚಾರ, ಅಳತೆ ಶ್ರೀಮಂತ. ತೆಂಕುತಿಟ್ಟಿನ ಪ್ರಾತಿನಿಧಿಕ ಭಾಗವತಿಕೆ ಅವರದ್ದು. ಸಾಹಿತ್ಯವೂ ಶುದ್ಧ ಅವರಿದ್ದರೆ ರಂಗಸ್ಥಳಕ್ಕೆ ಉಠಾವು. ಅವರ ಹಾಡು ಆಲಿಸುವುದು ಸಲೀಸು. ದೇಶದ ಹಳೆಯ ತರಹದ ಸಂಗೀತವನ್ನು ಉಳಿಸಿದ ಪುಣ್ಯಾತ್ಮರು.
ಪಾರ್ತಿಸುಬ್ಬನ ಪದ್ಯಗಳನ್ನು ಮೂಲ ಸ್ವರೂಪದಲ್ಲೇ ಬಾಯ್ದೆರೆ ಮಾಡಿದ್ದರು, ಹಾಡುತ್ತಿದ್ದರು. ಪಂಚವಟಿ, ಚೂಡಾಮಣಿ, ನಳದಮಯಂತಿ, ದೇವಿಮಹಾತೆ¾, ಗದಾ ಯುದ್ಧ, ಮುಂತಾದ ಪ್ರಸಂಗಗಳ ಅವರ ಹಾಡುಗಳೆಲ್ಲವೂ ಶ್ರೇಷ್ಠ. ಅವರೂ 25-30 ಪೌರಾಣಿಕ ಪ್ರಸಂಗಗಳನ್ನು ಬರೆದಿದ್ದಾರೆ. ಪೌರಾಣಿಕವನ್ನೇ ಬರೆದಿದ್ದಾರೆ. ಅವರ ಬರಹಗಳು ಜಯಲಕ್ಷ್ಮಿ ಹೆಸರಿನಲ್ಲಿ ಸಮಗ್ರ ಬಲಿಪ ಸಂಪುಟವಾಗಿ ಬಂದಿದೆ. ಡಾ| ನಾಗವೇಣಿ ಮಂಚಿಯವರು ಬಲಿಪ ಗಾನಯಾನ ಎಂಬ ಕೃತಿ ಬರೆದಿದ್ದಾರೆ.
ನನಗೆ ಅವರೊಂದಿಗೆ 40 ವರ್ಷಗಳ ಒಡನಾಟ. ದೊಡ್ಡ ಸ್ಮೃತಿ ಅದು. ಬಲಿಪರ 75ನೇ ವರ್ಷಕ್ಕೆ ಡಾ| ಮೋಹನ ಅಳ್ವರು, ಶ್ರೀಪತಿ ಭಟ್ಟರು ಮತ್ತಿತರರು ಸೇರಿಕೊಂಡು ಬಲಿಪ ಅಮೃತ ಭವನ ಎಂದು ನಿರ್ಮಿಸಿದೆವು,
ಬಲಿಪರ ವ್ಯಕ್ತಿತ್ವ ರಂಗಸ್ಥಳದಲ್ಲಿ ಪುನಃ ಮೂಡಿಬರಲಿ. ಅವರ ಛಾಪು ಈಗ ಹೆಚ್ಚು ಬೇಕು, ಯಕ್ಷರಂಗ ಬೇರೆ ಬೇರೆ ಕಡೆ ಸಾಗುವ ಕಾಲದಲ್ಲಿ ನಿಯಂತ್ರಕ ರೇಖೆಯಾಗಿ ಲಗಾಮು, ಕಡಿವಾಣವಾಗಿ, ಮುಂದೆ ರಂಗಸ್ಥಳದ ಒಂದು ಕಂಬವಾಗಿ ಪೀಠವಾಗಿ, ಬೆಳಕಾಗಿ, ಸ್ವರವಾಗಿ, ಯೋಗ್ಯತಾವಂತ ಕಲೆಯ ಸಮಗ್ರ ಪ್ರಾವೀಣ್ಯದ ಪ್ರತಿನಿಧಿಯಾಗಿ ಬಲಿಪರು ಯಾವಾಗಲೂ ನಮ್ಮ ಮನಸ್ಸಿನಲ್ಲಿರುತ್ತಾರೆ. ಆ ಬಲಿಪ ಚೈತನ್ಯವು ತೆಂಕುತಿಟ್ಟನ್ನು, ಯಕ್ಷಗಾನವನ್ನು ಕಾಪಾಡುತ್ತದೆ, ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.