Advertisement
ಕಾವೇರಿಯಮ್ಮ ಮತ್ತು ಸೀತಾರಾಮ ನಡ್ವಂತಿಲ್ಲಾಯರ ದ್ವಿತೀಯ ಪುತ್ರ ಅನಂತಕೃಷ್ಣ ಭಟ್ಟರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ಮಲತಾಯಿ ರುಕ್ಮಿಣಿ ಯವರ ಆರೈಕೆಯಲ್ಲಿ ಬೆಳೆದವರು. ವಿಟ್ಲ ಹೈಯರ್ ಎಲಿಮೆಂಟರಿ ಶಾಲೆ ಯಲ್ಲಿ ಏಳನೆಯ ತರಗತಿಯ ತನಕ ಓದಿದ ಬಳಿಕ ವಿದ್ಯಾಭ್ಯಾಸ ಅಲ್ಲಿಗೇ ಅನಿವಾರ್ಯವಾಗಿ ನಿಂತು ಹೋಯಿತು. ತಂದೆಯ ಅನಾರೋಗ್ಯ ನಿಮಿತ್ತ, ಚಿಕ್ಕವಯಸ್ಸಿನಲ್ಲೇ ಜವಾಬ್ದಾರಿ ಇವರ ಹೆಗಲಿಗೇರಿತು.
Related Articles
Advertisement
ಮುಂದೆ ಆಂಜನೇಯ ಯಕ್ಷಗಾನ ಕಲಾಸಂಘದ ಕಾರ್ಯದರ್ಶಿಯ ಜವಾಬ್ದಾರಿಯು 1975ರಲ್ಲಿ ಇವರ ಪಾಲಿಗೆ ಬಂತು. ಅವರು ಕಾರ್ಯದರ್ಶಿಯಾದ ಬಳಿಕ ಹಲವು ಉದಾರಿಗಳ ಸಹಾಯದಿಂದ, ಸಂಘಕ್ಕೆ ಬೇಕಾದ ಪರಿಕರಗಳನ್ನು ಜೋಡಿಸಿ ಕೊಂಡು, ಸಂಘದ ಅಭಿವೃದ್ಧಿಯ ಕಡೆಗೆ ಗಮನವಿತ್ತರು. ಗಮನಾರ್ಹ ಬದಲಾವಣೆ ಗಳನ್ನು ತಂದು, ತನ್ನ ಕಾಲ ಮೇಲೆಯೇ ನಿಲ್ಲುವ ಸ್ಥಿತಿಗೆ ತಂಡವನ್ನು ಕರೆದೊಯ್ದರು.
ಯಕ್ಷಗಾನ ತಾಳಮದ್ದಳೆ ಮಾತ್ರವಲ್ಲದೆ ಅನಂತಕೃಷ್ಣ ಭಟ್ಟರು, ಯಕ್ಷಗಾನ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಕಲ್ಮಡ್ಕದಲ್ಲಿ ಗಣಪತಿ ಭಟ್ಟರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಸಂಗಮ ಯಕ್ಷಗಾನ ನಾಟಕ ಸಭಾದ ಸದಸ್ಯರೂ ಆಗಿದ್ದರು. ಇವೆಲ್ಲ ಚಟುವಟಿಕೆಗಳ ಜತೆಗೆ ತಮ್ಮ ಊರಾದ ಕಾಣಿಯೂರಿನಲ್ಲಿ ತನ್ನ ಆಪ್ತರನ್ನು ಜತೆಗೂಡಿಸಿಕೊಂಡು ತನ್ನ ನಿರ್ದೇಶನದಲ್ಲಿ ಬರೆಪ್ಪಾಡಿ ಅನಂತಕೃಷ್ಣ ಭಟ್ ಬಳಗವೆನ್ನುವ ಹೆಸರಿನೊಂದಿಗೆ ಅಲ್ಲಲ್ಲಿ ಪ್ರದರ್ಶನವನ್ನೂ ನೀಡುತ್ತಿದರು.
ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರಿನಲ್ಲಿ ಅವರು ಕಾರ್ಯದರ್ಶಿ ಯಾದ ಬಳಿಕ ವಾರ್ಷಿಕೋತ್ಸವದಂದು ಒಬ್ಬರು ಕಲಾವಿದರನ್ನು ಗೌರವಿಸುವ ಪರಿಪಾಠವನ್ನಿರಿಸಿಕೊಂಡಿದ್ದರು. 1977ರಿಂದ ಪೊಳಲಿ ಶಂಕರನಾರಾಯಣ ಶಾಸ್ತ್ರೀ, ಕೊಳಂಬೆ ಪುಟ್ಟಣ್ಣ ಮಾಸ್ಟರ್, ಕೀರಿಕ್ಕಾಡು ವಿಷ್ಣು ಭಟ್, ದೇರಾಜೆ ಸೀತಾರಾಮಯ್ಯ, ಕುರಿಯ ವಿಠuಲ ಶಾಸ್ತ್ರೀ, ಅಳಿಕೆ ರಾಮಯ್ಯರೈ, ಶಂಕರನಾರಾಯಣ ಸಾಮಗ, ಎನ್.ವಿ. ಕೃಷ್ಣ ರಾವ್, ಕರಾಯ ಸಂಜೀವ ಶೆಟ್ಟಿ ಅಳಿಕೆ, ಕುಡಾಣ ಗೋಪಾಲಕೃಷ್ಣ ಭಟ್, ಕೆ.ನಾರಾಯಣ ಭಟ್ಟ ಮೊದಲಾದ ಮಹನೀಯರುಗಳನ್ನು ಗೌರವಿಸಿದ್ದರು.
1975ರಿಂದ 1998ರ ತನಕ ಆಂಜನೇಯ ಯಕ್ಷಗಾನ ಕಲಾಸಂಘದ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ ಅನಂತಕೃಷ್ಣರು, ಅನಂತರದ ಕಾರ್ಯದರ್ಶಿಗಳೊಂದಿಗೆ ಕೊನೆಯ ತನಕವೂ ಕೈಜೋಡಿಸುವ ಹುಮ್ಮನಸ್ಸನ್ನು ಉಳಿಸಿಕೊಂಡಿದ್ದರು. ಇದರೊಂದಿಗೆ ಅವರಿಗೆ ಮಹಿಳಾ ಯಕ್ಷಗಾನ ತಂಡವನ್ನು ಸ್ಥಾಪಿಸಬೇಕೆಂಬ ಉತ್ಕಟವಾದ ಬಯಕೆಯಿತ್ತು. ಛಲಬಿಡದೆ, ಬೊಳುವಾರಿನ ದಿ| ನಾರಾಯಣ ಭಟ್ಟರ ಪುತ್ರಿ ಪ್ರೇಮಲತಾ ರಾವ್ ಅವರನ್ನು ಮುಂಚೂಣಿಯಲ್ಲಿ ಇರಿಸಿಕೊಂಡು, ಪರಿಚಯಸ್ಥ ಹೆಮ್ಮಕ್ಕಳನ್ನು ಒಗ್ಗೂಡಿಸಿ, ಒಂದು ಪ್ರಸಂಗದ ಅಭ್ಯಾಸವನ್ನು ಪ್ರಾರಂಭಿಸಿಯೇ ಬಿಟ್ಟರು. 26-3-2005ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಇದರ ಉದ್ಘಾಟನೆ ನಡೆಯಿತು.
ಅನಂತಕೃಷ್ಣ ಬರೆಪ್ಪಾಡಿಯವರ ಮಾರ್ಗದರ್ಶನದಲ್ಲಿ ನಡೆದ ಪಂಚವಟಿ-ಖರಾಸುರ ವಧೆ ಮೊದಲ ಪ್ರದರ್ಶನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕಿಲ್ಲೆ ಪ್ರತಿಷ್ಠಾನವು ಪುತ್ತೂರಿ ನಲ್ಲಿ ಏರ್ಪಡಿಸಿದ್ದ ಯಕ್ಷಗಾನ ಸ್ಪರ್ಧೆಯಲ್ಲಿ ಈ ತಂಡಕ್ಕೆ ಬಹುಮಾನ ಬಂದುದರಿಂದ, ಸಂಘದ ಮುನ್ನಡೆಗೆ ಅದುವೇ ನಾಂದಿಯಾಯಿತು. ಮುಂದೆ ಸಂಘದ ಜವಾಬ್ದಾರಿಯನ್ನು ಮುಂದಿನ ಪದಾಧಿಕಾರಿಗಳಿಗೆ ಬಿಟ್ಟುಕೊಟ್ಟರೂ ಚಟುವಟಿಕೆಗಳಿಂದ ವಿಮುಖರಾಗಲಿಲ್ಲ.
ಇತ್ತೀಚೆಗಿನ ದಿನಗಳ ತನಕವೂ ಅವರು ಉತ್ಸಾಹದ ಚಿಲುಮೆಯಾಗಿದ್ದರು. ಪೇಜಾವರ ಶ್ರೀಗಳ ಪರ್ಯಾಯದ ಸಂದರ್ಭದಲ್ಲಿ ನಡೆದ ವಾಲಿವಧೆ ತಾಳಮದ್ದಳೆಯಲ್ಲಿ ವಾಲಿಯಾಗಿ ಕಾಣಿಸಿಕೊಂಡಿದ್ದರು. ಶ್ರೀಗಳ ಬಾಲ್ಯ ಸ್ನೇಹಿತ, ಪೂರ್ವಾಶ್ರಮದ ಬಂಧುವೂ ಆಗಿದ್ದುದರಿಂದ, ಶ್ರೀಗಳು ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆಯೂ ಆ ತಾಳಮದ್ದಳೆ ವೀಕ್ಷಿಸಲು ಬಂದಿದ್ದರು. ಇನ್ನೂ ಒಂದೆರಡು ತಾಳಮದ್ದಳೆಗಳನ್ನು ಆಯೋಜಿಸುವ ಸಿದ್ಧತೆಯಲ್ಲಿದ್ದರು. ಮರಣಿಸುವ ಒಂದೆರಡು ದಿನದ ಹಿಂದೆ ಕಡಬಕ್ಕೆ ಹೋಗಿ ತಮ್ಮ ಗುರುಸಮಾನರಾದ ಗಣಪಯ್ಯ ಮಾಸ್ತರರನ್ನು ಭೇಟಿಯಾಗಿ ಬಂದಿದ್ದರು.
ಅನಂತಕೃಷ್ಣ ಅವರ ಪತ್ನಿ ಸುಗುಣಾ ಭಟ್ ಅವರೆಲ್ಲ ಕೆಲಸಗಳಿಗೂ ಸ್ಫೂರ್ತಿಯಾಗಿ ದ್ದರು. ಇಂದು ಅವರು ತನ್ನೆಲ್ಲ ಕಾರ್ಯಗಳನ್ನು ಬದಿಗಿರಿಸಿ, ಎದ್ದು ಹೋದಂತೆ, ಎಲ್ಲವನ್ನೂ ಬಿಟ್ಟು ತೆರಳಿದ್ದಾರೆ.
ಪದ್ಮಾ ಕೆ. ಆರ್. ಆಚಾರ್ಯ