Advertisement

ಹಾರಾಡಿ ಪರಂಪರೆಯ ಮೇರು ಯಕ್ಷಗಾನ ಕಲಾವಿದ ಕೋಡಿ ಶಂಕರ ಗಾಣಿಗರು

08:03 PM Dec 14, 2022 | ವಿಷ್ಣುದಾಸ್ ಪಾಟೀಲ್ |

ಯಕ್ಷಗಾನದ ಗಂಡು ಮೆಟ್ಟಿದ ನೆಲ ಬ್ರಹ್ಮಾವರ ಮತ್ತು ಆಸು ಪಾಸಿನಲ್ಲಿ ಹಲವು ದಿಗ್ಗಜ ಕಲಾವಿದರು ರಂಗಕ್ಕೆ ಅದರಲ್ಲಿಯೂ ನಡು ಬಡಗು ತಿಟ್ಟಿನ ಶ್ರೀಮಂತಿಕೆ ಹೆಚ್ಚಿಸಿದವರಿದ್ದಾರೆ. ಆ ಪೈಕಿ ದೊಡ್ಡ ಹೆಸರು ಯಕ್ಷರಂಗದಲ್ಲೇ ಮೊದಲಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಹಾರಾಡಿ ರಾಮ ಗಾಣಿಗರದ್ದು, ಅದೇ ಪರಂಪರೆಯ ಇನ್ನೊಂದು ಕೊಂಡಿ ಕೋಡಿ ಶಂಕರ ಗಾಣಿಗರು.

Advertisement

ಹಾರಾಡಿಯಲ್ಲಿ ಬಚ್ಚ ಗಾಣಿಗ ಮತ್ತು ಕಾವೇರಿಯಮ್ಮ ದಂಪತಿಗಳ ಸುಪುತ್ರನಾಗಿ 1932ರಲ್ಲಿ ಜನಿಸಿದರು. ಎರಡು ವರ್ಷದ ಮಗುವಾಗಿದ್ದಾಗ ಕಲಾವಿದರಾಗಿದ್ದ ತಂದೆ ಮಾರಣಕಟ್ಟೆ ಮೇಳದಲ್ಲೆ ವಿಧಿವಶರಾದ ಬಳಿಕ ಮೂಲಮನೆ ಕುಂದಾಪುರದ ಕೋಡಿಯಲ್ಲಿ ನೆಲೆ ನಿಲ್ಲುವ ಅನಿವಾರ್ಯತೆ ಎದುರಾಯಿತು. ಅದೇ ಹೆಸರು ಕೋಡಿ ಯಕ್ಷಗಾನದಲ್ಲಿ ಬಹುಖ್ಯಾತಿ ಪಡೆಯಿತು.

ಪ್ರಖ್ಯಾತ ಕಲಾವಿದ ಯಕ್ಷಗಾನ ರಂಗದ ಸರ್ವ ಶ್ರೇಷ್ಠ ದಿಗ್ಗಜ ಹಾರಾಡಿ ರಾಮ ಗಾಣಿಗರ ಅಣ್ಣನ ಮಗ ಮತ್ತು ಖ್ಯಾತ ಪುರುಷ ವೇಷಧಾರಿ ಕುಷ್ಟ ಗಾಣಿಗರ ಸೋದರಳಿಯರಾದ ಶಂಕರ ಗಾಣಿಗರನ್ನು ಯಕ್ಷರಂಗ ಕೈ ಬೀಸಿ ಕರೆಯಿತು. ಹಾರಾಡಿ ಮನೆತನದ ದಿಗ್ಗಜರ ಖ್ಯಾತಿಯ ಕಿರೀಟದಲ್ಲಿ ಶೋಭಿಸಿದ ಒಂದು ಅಮೂಲ್ಯ ರತ್ನವಾಗಿ ಇಂದಿಗೂ ಯಕ್ಷರಂಗದಲ್ಲಿ ನೆನಪಿನ ಆಳದಲ್ಲಿ ಉಳಿದಿದ್ದಾರೆ.

ಐದನೇ ತರಗತಿ ವಿಧ್ಯಾಭ್ಯಾಸ ಪಡೆದು ಯಕ್ಷಗಾನ ರಂಗದ ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್ ಅವರಿಂದ ಗೆಜ್ಜೆ ಕಟ್ಟಿಸಿ ಕೊಂಡು ಹಾರಾಡಿ ಬಾಬು ಗಾಣಿಗ, ಬಸವ ಗಾಣಿಗ, ಸುರಗಿಕಟ್ಟೆ ಬಸವ ಗಾಣಿಗ, ಹಾರಾಡಿ ಮಹಾಬಲ ಗಾಣಿಗ, ಸರ್ವಗಾಣಿಗ ಹೀಗೆ ದೊಡ್ಡ ಕಲಾವಿದರೆಲ್ಲ ಇವರ ಬಂಧುಗಳೇ ಇದ್ದುದರಿಂದ ಕಲಾ ಸೇವೆಯಲ್ಲಿ ದೊಡ್ಡ ಖ್ಯಾತಿಯನ್ನು ಪಡೆಯಲು ಅನುಕೂಲವಾಯಿತು. 15 ವರ್ಷ ಸ್ತ್ರೀವೇಷಧಾರಿಯಾಗಿ, 15 ವರ್ಷ ಪುರುಷವೇಷಧಾರಿಯಾಗಿ ಹವವು ವೇಷಗಳನ್ನು ಮಾಡಿ ನಂತ್ರ 30 ವರ್ಷಗಳ ಕಾಲ ಪ್ರಧಾನ (ಎರಡನೆ) ವೇಷಧಾರಿಯಾಗಿ ರಂಗಸ್ಥಳವನ್ನು ಶ್ರೀಮಂತಗೊಳಿಸಿದರು.

ಸೌಕೂರು ಮೇಳದಲ್ಲಿ ಪ್ರಥಮವಾಗಿ ಗೆಜ್ಜೆ ಕಟ್ಟಿ ಬಳಿಕ ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ, ಮಂದಾರ್ತಿ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದರು. ಕರ್ಣಾರ್ಜುನದ ಕರ್ಣ,ಶಶಿಪ್ರಭಾ ಪರಿಣಯದ ಮಾರ್ತಾಂಡ ತೇಜ, ಲವಕುಶ ಕಾಳಗದ ವಿಭೀಷಣ, ಪ್ರಹ್ಲಾದ ಚರಿತ್ರೆಯ ಹಿರಣ್ಯಕಶ್ಯಪು, ಕೃಷ್ಣಾರ್ಜುನದ ಅರ್ಜುನ, ಜಾಂಬವತಿ ಕಲ್ಯಾಣದ ಜಾಂಬವ ಪಾತ್ರಗಳನ್ನು ಹಿರಿಯ ಯಕ್ಷಗಾನ ವಿಮರ್ಶಕರು ಮತ್ತು ಪ್ರೇಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

Advertisement

ಯಕ್ಷರಂಗಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಶಂಕರ ಗಾಣಿಗರು ತನ್ನ 84 ನೇ ವಯಸ್ಸಿನಲ್ಲಿ 2016 ಸೆಪ್ಟೆ೦ಬರ್ 1 ರಂದು ಇಹಲೋಕದ ಯಾತ್ರೆ ಮುಗಿಸಿದರು.

ಡಾ. ಶಿವರಾಮ ಕಾರಂತರು ಅರವತ್ತರ ದಶಕದಲ್ಲಿ ನಿರೂಪಿಸಿದ ನೃತ್ಯ ನಾಟಕಗಳಲ್ಲಿ ಅಂಬೆ, ಶಲ್ಯ, ಭೀಮ ಮೊದಲಾದ ಪಾತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದರು ಎನ್ನುವುದನ್ನು ಅವರ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.

ದೇವಿ ಮಹಾತ್ಮೆಯ ಶುಂಭಾಸುರ, ರೇಣುಕಾ ಮಹಾತ್ಮೆಯ ಜಮದಗ್ನಿ, ರುಕ್ಮಾಂಗದ ಚರಿತ್ರೆಯ ರುಕ್ಮಾಂಗದ, ವೀರಮಣಿ, ಅಂಗಾರವರ್ಮ, ಚಿತ್ರಸೇನ, ಸುಲೋಚನ, ಕಂಸ, ಕಾಲನೇಮಿ ಭಸ್ಮಾಸುರ, ಮಧು, ಕೈಟಭ, ರಕ್ತಬೀಜಾಸುರ ಮುಂತಾದ ಪಾತ್ರಗಳು ಇಂದಿಗೂ ಹಿರಿಯ ಯಕ್ಷ ಪ್ರೇಮಿಗಳ ನೆನಪಿನಂಗಳದಲ್ಲಿ ಉಳಿದಿವೆ. ಸಾಧನೆಗೆ ಅರ್ಹವಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿ ಹಲವು ಸನ್ಮಾನಗಳನ್ನು ಶಂಕರ ಗಾಣಿಗರು ಪಡೆದಿದ್ದರು.

ಇವರ ಸಹೋದರಳಿಯ ಕೋಡಿ ವಿಶ್ವನಾಥ ಗಾಣಿಗರು ಖ್ಯಾತ, ಪ್ರಬುದ್ಧ ಕಲಾವಿದರಾಗಿದ್ದು ಸದ್ಯ ಮಂದಾರ್ತಿ ಮೇಳದಲ್ಲಿ ಎರಡನೇ ವೇಷಧಾರಿಯಾಗಿದ್ದು ಪರಂಪರೆಯನ್ನು ನೆನಪಿಸಿಕೊಡುವಲ್ಲಿ ಸಮರ್ಥರಾಗಿದ್ದಾರೆ ಎಂದು ಯಕ್ಷಗಾನ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next