Advertisement
ವಿಧಾನಪರಿಷತ್ತಿನಲ್ಲಿ ಸದಸ್ಯ ಡಾ| ಮಂಜುನಾಥ ಭಂಡಾರಿ ಯಕ್ಷಗಾನ ಅಕಾಡೆಮಿಯನ್ನು ಪ್ರಾಧಿಕಾರವಾಗಿಸುವಂತೆ ಸಲಹೆ ನೀಡಿದ್ದರು. ಸಚಿವರು ಉತ್ತರಿಸಿ, ಕರ್ನಾಟಕ ಜನಪದ ಅಕಾಡೆಮಿಯಿಂದ ಪ್ರತ್ಯೇಕಿಸಿ ಯಕ್ಷಗಾನ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿ ರಚಿಸಲಾಗಿದೆ. ಪಡುವಲಪಾಯ, ಮೂಡಲಪಾಯ, ತೆಂಕು, ಬಡಗು, ಬಡಾಬಡಗು, ಗೊಂಬೆಯಾಟ ಮೊದಲಾದ ಪ್ರಕಾರಗಳಿವೆ. ಅಕಾಡೆಮಿಯಲ್ಲಿ ಯಕ್ಷಗಾನದ ಉತ್ತೇಜನಕ್ಕೆ ಎಲ್ಲ ಪ್ರಯತ್ನ ಮಾಡಲಾಗಿದೆ. ಪ್ರತೀ ವರ್ಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಡಾ| ಭಂಡಾರಿ ಪ್ರತಿಕ್ರಿಯಿಸಿ, 2,500 ವರ್ಷಗಳ ಪಾರಂಪರಿಕ ಇತಿಹಾಸ ಹೊಂದಿರುವ ಯಕ್ಷಗಾನ ವಿಶಿಷ್ಟ ಕಲೆ. ಡಾ| ಶಿವರಾಮ ಕಾರಂತ, ಡಾ| ಕು.ಶಿ. ಹರಿದಾಸ ಭಟ್ಟರಂತಹವರಿಂದ ಸಂಶೋಧನೆಗೆ ಒಳಗಾಗಿದೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಂಸ್ಥೆ ನೇತೃತ್ವದಲ್ಲಿ 8 ಸಾವಿರ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಆದ್ದರಿಂದ ಅಕಾಡೆಮಿಯ ಅನುದಾನ ಸಾಲದು. ಯಕ್ಷಗಾನ ಪರಂಪರೆ ಮುಂದಿನ ಪೀಳಿಗೆಗೆ ಮುಂದುವರಿಯಲು ಪಠ್ಯ ರಚನೆ ಸೇರಿದಂತೆ ಅನೇಕ ಕೆಲಸಗಳಾಗಬೇಕು. ಜಗತ್ತಿನ ಮ್ಯೂಸಿಯಂನಲ್ಲಿ ಯಕ್ಷಗಾನದ ದಾಖಲೀಕರಣಕ್ಕೆ ಅವಕಾಶ, ಹಿರಿಯ ಕಲಾವಿದರಿಗೆ ಸಂಭಾವನೆ, ಕಲಾವಿದರ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಆದ್ದರಿಂದ ಪ್ರಾಧಿಕಾರ ರಚಿಸಿ ವಾರ್ಷಿಕ 50 ಕೋ.ರೂ. ಅನುದಾನ ಮೀಸಲಿಡಬೇಕು. ವಿಶ್ವಕ್ಕೆ ಯಕ್ಷಗಾನದ ಮೆರುಗನ್ನು ನೀಡಬೇಕು ಎಂದು ಪ್ರತಿಪಾದಿಸಿದರು.