Advertisement

ಮಂಗಳೂರು: ವಾರಾಂತ್ಯಕ್ಕೆ ಯಕ್ಷಗಾನ ತಿರುಗಾಟಕ್ಕೆ ತೆರೆ

12:24 AM May 25, 2023 | Team Udayavani |

ಮಂಗಳೂರು: ಪ್ರಸಕ್ತ ಸಾಲಿನ ಯಕ್ಷಗಾನ ತಿರುಗಾಟ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಈ ವಾರಾಂತ್ಯದೊಳಗೆ ಕಲಾವಿದರು ಗೆಜ್ಜೆ ಬಿಚ್ಚಲಿದ್ದಾರೆ. ಆ ಮೂಲಕ ಸುಮಾರು ಆರು ತಿಂಗಳ ಯಕ್ಷಗಾನದ ಅಬ್ಬರ ತೆರೆ ಬೀಳಲಿದೆ.

Advertisement

ಈ ಬಾರಿ ರಾತ್ರಿ 10 ಗಂಟೆಯ ಬಳಿಕ ಮೈಕ್‌ ಬಳಕೆ ನಿಷೇಧಿಸಿರುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಜಿಲ್ಲಾಡಳಿತಗಳು ಕಟ್ಟುನಿಟ್ಟಾಗಿ ಪಾಲಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಮೇಳಗಳು ಕಾಲಮಿತಿಯಲ್ಲೇ ಪ್ರದರ್ಶನ ನೀಡಿವೆ. ಕೆಲವು ಕಡೆಗಳಲ್ಲಿ ಕೆಲವು ಪ್ರಸಂಗಗಳು ರಾತ್ರಿಯಿಡೀ ಪ್ರದರ್ಶನ ಕಂಡಿವೆ. ಪ್ರತೀ ವರ್ಷ ಕೊನೆಯ ಒಂದು ತಿಂಗಳು ಮಳೆಯಿಂದ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿತ್ತು. ಆದರೆ ಈ ಬಾರಿ ಕೊನೆಯ ದಿನಗಳ ವರೆಗೂ ಬಹುತೇಕ ಮಳೆಯ ತೊಂದರೆಯಿಲ್ಲದೆ ಪ್ರದರ್ಶನ ಕಂಡಿವೆ.

ತೆಂಕುತಿಟ್ಟಿನ ಮೇಳಗಳ ಪೈಕಿ ಕಟೀಲು ಯಕ್ಷಗಾನ ಪ್ರದರ್ಶನ ಹೆಚ್ಚಿನ ಬೇಡಿಕೆಯೊಂದಿಗೆ ಸಾಂಗವಾಗಿ ನೆರವೇರಿದೆ. ಕಟೀಲು ಎಲ್ಲ ಆರು ಮೇಳಗಳು ಒಂದೊಂದು ಮೇಳ ತಲಾ 170ರಷ್ಟು ಪ್ರದರ್ಶನ ನೀಡಿವೆ. ಮೇ 26ರಂದು ರಾತ್ರಿ ಈ ಎಲ್ಲ ಮೇಳಗಳು ಏಕಕಾಲದಲ್ಲಿ ಕ್ಷೇತ್ರದ ರಥಬೀದಿಯಲ್ಲಿ ಪ್ರದರ್ಶನ ನೀಡಿಲಿದ್ದು, ಬಳಿಕ ದೇವಿಯ ಸನ್ನಿಧಿಯಲ್ಲಿ ಕಲಾವಿದರು ಗೆಜ್ಜೆ ಬಿಚ್ಚಲಿದ್ದಾರೆ.

ಧರ್ಮಸ್ಥಳ ಮೇಳದ ಯಕ್ಷಗಾನಗಳೂ ಈ ಬಾರಿ ಎಲ್ಲ ಕಡೆಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಈ ಬಾರಿ ಸುಮಾರು 195 ಪ್ರದರ್ಶನ ನೀಡಿದ್ದು, ಮೇ 28ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೊನೆಯ ಪ್ರದರ್ಶನ ನಡೆಯಲಿದೆ.

ಪಾವಂಜೆ ಮೇಳಕ್ಕೂ ಹೆಚ್ಚಿನ ಬೇಡಿಕೆಯಿತ್ತು. ಒಟ್ಟು 206 ಪ್ರದರ್ಶನ ನೀಡಿದ್ದು, ಕೊನೆಯ ಪ್ರದರ್ಶನ ಮೇ 25ರಂದು ಕ್ಷೇತ್ರದಲ್ಲಿ ನಡೆಯಲಿದೆ. ಈ ಬಾರಿ ಹೊಸದಾಗಿ ಆರಂಭವಾಗಿರುವ ಗೆಜ್ಜೆಗಿರಿ ಕ್ಷೇತ್ರದ ಮೇಳವೂ 170ಕ್ಕೂ ಹೆಚ್ಚಿನ ಕಡೆಗಳಲ್ಲಿ ಪ್ರದರ್ಶನ ನೀಡಿದೆ.

Advertisement

ಗೆಜ್ಜೆಗಿರಿ, ಹನುಮಗಿರಿ, ಬಪ್ಪನಾಡು, ಕೊಲ್ಲಂಗಾನ, ಸಸಿಹಿತ್ಲು, ಸುಂಕದಕಟ್ಟೆ ಮೇಳಗಳ ಪ್ರದರ್ಶನ ಈಗಾಗಲೇ ಅಂತ್ಯಕಂಡಿದೆ. ಇನ್ನು ಕಲಾವಿದರು ಪರ್ಯಾಯ ಉದ್ಯೋಗದತ್ತ ಮುಖ ಮಾಡಬೇಕಾಗಿದ್ದು, ಕೆಲವು ಮೇಳಗಳಲ್ಲಿ ಅರ್ಧ ಸಂಬಳ ನೀಡುವ ಸಂಪ್ರದಾಯವೂ ಇದೆ. ಮಳೆಗಾಲದಲ್ಲಿ ಕರಾವಳಿಯ ವಿವಿಧೆಡೆ ಸಹಿತ, ಬೆಂಗಳೂರು, ಮುಂಬಯಿ ಎಂದು ದೂರದ ಊರುಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುವುದರಿಂದ ಕೆಲವು ಕಲಾವಿದರು ಅದರಲ್ಲಿ ಪಾತ್ರಮಾಡುವ ಅವಕಾಶವನ್ನೂ ಪಡೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next