Advertisement

ಯಕ್ಷಧ್ರುವ ಪಟ್ಲ ಸಂಭ್ರಮ-2017 ಸಮಾರೋಪ 

12:28 PM Aug 16, 2017 | Team Udayavani |

ಮುಂಬಯಿ: ಯಾವುದೇ ಕಲೆಯು ಕಲಾವಿದರಿ ಲ್ಲದೆ ಪರಿಪೂರ್ಣವಾಗಲಾರದು. ಕಲಾವಿದರೇ ಕಲೆಯನ್ನು ಜೀವಂತಗೊಳಿಸುವವರು. ಆದ್ದರಿಂದ ಕಲಾವಿದರಾದವರಿಗೆ ಅವರ ಕಲೆಗೆ ಬೆಲೆ ನೀಡುವುದು ಕಲಾಭಿಮಾನಿಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಉದ್ಯಮಿ, ವಿ. ಕೆ. ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕರುಣಾಕರ್‌ ಎಂ. ಶೆಟ್ಟಿ ಅವರು ನುಡಿದರು.

Advertisement

ಆ. 13ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಂಬಯಿ ಘಟಕವು ಆಯೋಜಿಸಿದ ಯಕ್ಷಧ್ರುವ ಪಟ್ಲ ಸಂಭ್ರಮ-2017 ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಹಿರಿಯ ಪ್ರಾಚೀನ ಕಲೆ ಯಕ್ಷಗಾನಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಆರಂಭದಿಂದಲೂ ಅದೆಷ್ಟೋ ಹಿರಿಯ ಕಲಾವಿದರು ಕಲೆಯ ಉಳಿವಿಗಾಗಿ ತಮ್ಮ ಬದುಕನ್ನು ಸವೆಸಿ ಅಳಿದು ಹೋಗಿದ್ದಾರೆ. ಹಲವಾರು ಮಂದಿ ಇಂದಿಗೂ ಕಷ್ಟ-ಕಾರ್ಪಣ್ಯದಿಂದ ಜೀವನ ನಡೆಸುತ್ತಿದ್ದಾರೆ. ಕಲೆಯನ್ನೇ ನಂಬಿ ಬದುಕಿದ ಅಂತಹ ಕಲಾವಿದರ ಪರಿಸ್ಥಿತಿ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಅಂಥವರನ್ನು ಮೇಲಕ್ಕೆತ್ತುವ  ಪಟ್ಲ ಸತೀಶ್‌ ಶೆಟ್ಟಿ ಅವರ ಪರಿಶ್ರಮ-ಸಾಹಸ ಅಭಿನಂದನೀಯವಾಗಿದೆ. ಅವರು ಇತರರಿಂದ ಪಡೆದು ಅಶಕ್ತ ಕಲಾವಿದರಿಗೆ ನೀಡುವ ಔಚಿತ್ಯಪೂರ್ಣ ಸೇವಾ ಕಾರ್ಯಕ್ಕೆ ಕಲಾಭಿಮಾನಿಗಳಾದ ನಾವು ಸಹಕರಿಸೋಣ ಎಂದು ನುಡಿದರು.

ಪಟ್ಲ  ಭಾಗವತಿಕೆಯ ಜಾದೂಗಾರ 
ಗೌರವ ಅತಿಥಿಯಾಗಿ ಪಾಲ್ಗೊಂಡ ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ನ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ ಅವರು, ತನ್ನ ಅದ್ಭುತ ಕಂಠಸಿರಿಯಿಂದ ವಿಶ್ವವ್ಯಾಪಿ ಅಭಿಮಾನಿಗಳನ್ನು ಹೊಂದಿರುವ ಕಿರಿಯ ವಯಸ್ಸಿನ ಸತೀಶ್‌ ಪಟ್ಲ ಭಾಗವತಿಕೆಯ ಜಾದೂಗಾರ ಹಾಗೂ ಮೋಡಿಗಾರ. ಅವರ ಭಾಗವತಿಕೆ ಕಾಳಿಂಗ ನಾವಡರ ಶೈಲಿಯಂತಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಎಲ್ಲರ ಸಹಕಾರವಿರಲಿ 
ಬಂಟರ ಸಂಘ ಮುಂಬಯಿ ಜೊತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ ಅವರು ಮಾತನಾಡಿ, ಕಲಾವಿದರಿಗೆ ಜಾತೀಯ ಪ್ರಭೇದ ಎಂಬುವುದಿಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ತುಳು-ಕನ್ನಡದ ಎಲ್ಲಾ ಜಾತೀಯವರಿದ್ದು, ಒಮ್ಮತದಿಂದ ಯಕ್ಷಕಲಾ ಸೇವೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ತೊಂದರೆಯಲ್ಲಿರುವ ಅವರೆಲ್ಲರ ಬದುಕಿಗೆ ಆಸರೆಯಾಗಿ ಪಟ್ಲರು ಮಾಡುತ್ತಿರುವ ಉತ್ತಮ ಕಾರ್ಯಕ್ಕೆ ಎಲ್ಲರ ಸಹಕಾರವಿರಲಿ ಎಂದು ಹೇಳಿದರು.

ಪಟ್ಲರ ಕಾರ್ಯ ಶ್ಲಾಘನೀಯ: ಸೂರತ್‌ನ ಹೊಟೇಲ್‌ ಉದ್ಯಮಿ ರಾಧಾಕೃಷ್ಣ  ಶೆಟ್ಟಿ ಮಾತನಾಡಿ, ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸುವ ಕಲಾವಿದರಿಗೆ ನಿಜವಾದ ಅರ್ಥದಲ್ಲಿ ನೆರವು ನೀಡಲು ಮುಂದಾಗಿರುವ ಪಟ್ಲರ ಕಾರ್ಯ ಶ್ಲಾಘನೀಯ. ಕಲೆಯ ಬೆಲೆಯನ್ನು ಅರಿತವರು ಈ ಯೋಜನೆಗೆ ಖಂಡಿತಾ ಸಹಕರಿಸುವರೆಂಬ ವಿಶ್ವಾಸ ನನಗಿದೆ ಎಂದು ನುಡಿದರು.

Advertisement

ಕಲಾವಿದರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ
ಉದ್ಯಮಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ಪಟ್ಲ ಸತೀಶ್‌ ಶೆಟ್ಟಿ ಯಕ್ಷಗಾನ ಕ್ಷೇತ್ರದ ಅಮಿತಾಭ್‌ ಬಚ್ಚನ್‌ ಇದ್ದಂತೆ. ಕಲಾವಿದರ ಒಳಿತಿಗಾಗಿ ಚಿಂತನೆ ನಡೆಸುವವರಲ್ಲಿ ಪಟ್ಲ ಮೊದಲಿಗರು. ಯಕ್ಷಗಾನವು ಮುಂದೆ ಸಮೃದ್ಧ ಕಲೆಯಾಗಿ ಉಳಿಯಲು ಕಲಾವಿದರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಟ್ರಸ್ಟ್‌ನ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಯಾವುದೇ ಜವಾಬ್ದಾರಿ ವಹಿಸಿಕೊಂಡರೂ ಅದನ್ನು ವ್ಯವಸ್ಥಿತ ರೀತಿಯಲ್ಲಿ ಮುಗಿಸಿ ಯಶಸ್ವಿಯಾಗುವಂತೆ ಪರಿಶ್ರಮಪಡುತ್ತಾರೆ ಎಂಬುವುದಕ್ಕೆ ಈ ಕಾರ್ಯಕ್ರಮವೂ ಒಂದು ನಿದರ್ಶನವಾಗಿದೆ ಎಂದು ಅವರ ತಂಡವನ್ನು ಅಭಿನಂದಿಸಿದರು.

ಕ್ರಾಂತಿಯ ಅಲೆ
ಉದ್ಯಮಿ ವಿಸ್ವಾತ್‌ ಕೆಮಿಕಲ್ಸ್‌ನ ಸಿಎಂಡಿ ಬಿ. ವಿವೇಕ್‌ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿಂದು ಕ್ರಾಂತಿಯ ಅಲೆಯನ್ನು ಎಬ್ಬಿಸಿರುವ ಪಟ್ಲ ಸತೀಶ್‌ ಶೆಟ್ಟಿ ಮುಂದೊಂದು ದಿನ ಮಹಾನ್‌ ವ್ಯಕ್ತಿಯಾಗಿ ಮೆರೆಯಲಿದ್ದಾರೆ. ಅವರ ಸುಮಧುರ ಕಂಠ, ಕಲಾವಿದರಿಗೆ ಸಹಾಯ ನೀಡಬೇಕೆನ್ನುವ ಅವರ ಸಹೃದಯತೆ ಇವೆಲ್ಲವೂ ಶ್ರೀ ದೇವಿಯ ಪ್ರೇರಣೆಯ ಫಲಸ್ವರೂಪವಾಗಿದೆ. ಅವರ ನಿಧಿ ಸಂಗ್ರಹ ಅಭಿಯಾನಕ್ಕೆ ಐಕಳ ಹರೀಶ್‌ ಶೆಟ್ಟಿ ಅವರನ್ನು ಬಿಟ್ಟರೆ ಬೇರೊಬ್ಬರು ಸಿಗಲು ಸಾಧ್ಯವಿಲ್ಲ. ಈ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದರು.

ಸಮಾಜ ಸೇವಾ ಗುಣ
ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನಕುರ್ಕಿಲ್‌ಬೆಟ್ಟು ಸಂತೋಷ್‌ ಶೆಟ್ಟಿ ಅವರು ಮಾತನಾಡಿ, ಹುಟ್ಟುವಾಗಲೇ ಇಂತಹ ಸಮಾಜ ಸೇವಾ ಗುಣವನ್ನು ಮೈಗೂಡಿಸಿಕೊಂಡು ಬಂದಿರುವ ಪಟ್ಲರು ತಾನೊಬ್ಬನೇ ದೊಡ್ಡವನಾಗದೆ ತನ್ನೊಂದಿಗಿರುವ ಕಲಾವಿದರನ್ನೂ ದೊಡ್ಡವರನ್ನಾಗಿ ಬಿಂಬಿಸಲು ಚಿಂತನೆ ನಡೆಸುತ್ತಿರುವುದು ಅವರ ಸಹೃದಯತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಪ್ರತೀ ವರ್ಷವೂ ನಡೆಯುತ್ತಿರಬೇಕು 
ಕ್ರಿಸ್ಟಲ್‌ ಅಟೋಮೇಶನ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಆಡಳಿತ ನಿರ್ದೇಶಕ ಚಂದ್ರಶೇಖರ್‌ ಎಸ್‌. ಶೆಟ್ಟಿ ಅವರು ಮಾತನಾಡಿ, ಪಟ್ಲ ಸಂಭ್ರಮ ಪ್ರತೀ ವರ್ಷವೂ ನಡೆಯುತ್ತಿರಬೇಕು. ಯಕ್ಷಪ್ರಿಯೆ ಕಟೀಲು ಶ್ರೀ ಭ್ರಮರಾಂಬಿಕೆಯ ಆಶೀರ್ವಾದದಿಂದ ಎಲ್ಲಾ ಕಲಾವಿದರಿಗೂ ಒಳಿತಾಗಲಿ ಎಂದರು.

ಭಗವಂತ ಒಲಿಯುತ್ತಾನೆ 
ಮುಂಬಯಿ ಘಟಕದ ಉಪಾಧ್ಯಕ್ಷ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು ಮಾತನಾಡಿ, ನಾವು ನಮ್ಮ ಜೀವನದ ಜೊತೆಗೆ ಸಮಾಜಕ್ಕೋಸ್ಕರವೂ ಜೀವನವನ್ನು ಮುಡಿಪಾಗಿಸಿಕೊಂಡರೆ ಭಗವಂತ ಒಲಿಯುತ್ತಾನೆ. ಜೊತೆಗೆ ಜೀವನವೂ ಪಾವನವಾಗುತ್ತದೆ. ದಾನಿಗಳಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಒಡಿಯೂರುಶ್ರೀಗಳ ಮಾತು ಇಂದು ಸತ್ಯ
ಟ್ರಸ್ಟ್‌ನ  ಕೇಂದ್ರ ಸಲಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್‌ ಅವರು ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಇಪ್ಪತ್ತೆರಡು ತಿಂಗಳ ಮಗು ಇಪ್ಪತ್ತೆರಡು ವರ್ಷಗಳ ಸಾಧನೆ ಮಾಡುತ್ತದೆ ಎಂದು ಭವಿಷ್ಯವಾಣಿ ನುಡಿದ ಒಡಿಯೂರುಶ್ರೀಗಳ ಮಾತು ಇಂದು ಸತ್ಯವಾಗಿರುವುದು ಗೋಚರಕ್ಕೆ ಬರುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗಳನ್ನು ಸಾಧಕ ಕಲಾವಿದರಿಗೆ ಪ್ರದಾನಿಸಲಾಯಿತು. ದೇಣಿಗೆ ನೀಡಿ ಸಹಕರಿಸಿದ ದಾನಿಗಳೆಲ್ಲರನ್ನು ಐಕಳ ಹರೀಶ್‌ ಶೆಟ್ಟಿ, ಕಡಂದಲೆ ಸುರೇಶ್‌ ಭಂಡಾರಿ ಹಾಗೂ ಇತರ ಪದಾಧಿಕಾರಿಗಳು ಗೌರವಿಸಿದರು. 

ಪಟ್ಲ ಸಂಭ್ರಮದ ಯಶಸ್ಸಿಗೆ ಕಾರಣಕರ್ತರಾದ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರನ್ನು ಕೇಂದ್ರ ಸಮಿತಿಯ ವತಿಯಿಂದ ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. 
ಗಣ್ಯರು ದೀಪಪ್ರಜ್ವಲಿಸಿ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು.
ಉಪಾಧ್ಯಕ್ಷ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಕರ್ನೂರು ಮೋಹನ್‌ ರೈ ಸಹಕರಿಸಿ ವಂದಿಸಿದರು. ವೇದಿಕೆಯಲ್ಲಿ ಶಿವರಾಮ ಭಂಡಾರಿ, ಶಶಿಧರ ಶೆಟ್ಟಿ ಬರೋಡ, ಜಯಂತ್‌ ಶೆಟ್ಟಿ ಸೂರತ್‌, ಸಂಜೀವ ಎನ್‌. ಶೆಟ್ಟಿ, ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ರೇಷ್ಮಾ ರವಿರಾಜ್‌ ಶೆಟ್ಟಿ, ಕೃಷ್ಣ ಶೆಟ್ಟಿ, ಶಾಂತಾರಾಮ ಶೆಟ್ಟಿ, ಜಯರಾಮ ಎನ್‌. ಶೆಟ್ಟಿ, ವೇಣುಗೋಪಾಲ್‌ ಶೆಟ್ಟಿ ಥಾಣೆ, ಸಚ್ಚಿದಾನಂದ ಶೆಟ್ಟಿ  ಮೀರಾರೋಡ್‌, ಸಂಚಾಲಕರುಗಳಾದ ಐಕಳ ಗಣೇಶ್‌ ಶೆಟ್ಟಿ, ಅಶೋಕ್‌ ಶೆಟ್ಟಿ ಪೆರ್ಮುದೆ, ಇತರ ಪದಾಧಿಕಾರಿಗಳಾದ ಬಾಬು ಎಸ್‌. ಶೆಟ್ಟಿ ಪೆರಾರ, ಸಿಎ ಸುರೇಂದ್ರ ಶೆಟ್ಟಿ, ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಸುರೇಶ್‌ ಬಿ. ಶೆಟ್ಟಿ ಮರಾಠ, ಜತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು. ಅನಂತರ ಶ್ರೀ ಕಟೀಲು ಕ್ಷೇತ್ರ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.

ಅಶಕ್ತ ಯಕ್ಷಕಲಾವಿದರು ಮತ್ತವರ ಕುಟುಂಬಿಕರ ಕಣ್ಣೀರು ಒರೆಸುವ ಈ ಮಹತ್ವದ ಕಾರ್ಯಕ್ರಮವು ದೇವರು ಮೆಚ್ಚುವ ಮಾನವೀಯತೆಯ ಕಾರ್ಯವಾಗಿದೆ. ಅತೀ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡುತ್ತಿರುವ ಪಟ್ಲರ ಮಾನವೀಯ ಸೇವಾ ಕಾರ್ಯಕ್ಕೆ ಕಲಾಭಿಮಾನಿಗಳು, ದಾನಿಗಳು ಸಹಕರಿಸಲು ಮುಂದೆ ಬರಬೇಕು. ಐಕಳ ಹರೀಶ್‌ ಶೆಟ್ಟಿ, ಕಡಂದಲೆ ಸುರೇಶ್‌ ಭಂಡಾರಿ ಅವರಂತಹ ಸಂಘಟನಾ ದಿಗ್ಗಜರು ಟ್ರಸ್ಟ್‌ ನಲ್ಲಿರುವುದರಿಂದ ನಿಧಿ ಸಂಗ್ರಹವು ಅಕ್ಷಯ ಪಾತ್ರೆಯಂತೆ ತುಂಬಿ ತುಳುಕಲಿದೆ 
– ಕೆ. ಡಿ. ಶೆಟ್ಟಿ (ಸಿಎಂಡಿ : ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌).

ಯಕ್ಷ ಕಲಾವಿದರ ಬದುಕಿನ ಹೊಂಬೆಳಕಾಗಿರುವ ಪಟ್ಲರ ನಿಸ್ವಾರ್ಥ ಸೇವೆಗೆ ಸಮಸ್ತ ತುಳು-ಕನ್ನಡಿಗರು, ಸಹಕಾರ-ಪ್ರೋತ್ಸಾಹ ನೀಡಬೇಕು. ಉಳ್ಳವರಿಂದ ಪಡೆದು ಇಲ್ಲದವರಿಗೆ ಹಂಚುವ ಪಟ್ಲರ ಕಾರ್ಯ ಅಭಿನಂದನೀಯ. ಪಟ್ಲರಂತಹ ನೂರಾರು ಪಟ್ಲರು ಹುಟ್ಟಿಬರಲಿ. ಯಕ್ಷಗಾನವಷ್ಟೇ ಅಲ್ಲದೆ ಇತರ ಕಲಾಕ್ಷೇತ್ರಗಳ ಅಭಿವೃದ್ಧಿಗಾಗಿ ಅವರೆಲ್ಲರೂ ಹೋರಾಟ ನಡೆಸಲಿ. ಈ ಮಹಾನ್‌ ಕಾರ್ಯಕ್ಕೆ ನನ್ನ ಸಹಕಾರ ಸದಾಯಿದೆ 
– ಪದ್ಮನಾಭ ಎಸ್‌. ಪಯ್ಯಡೆ (ಸಿಎಂಡಿ : ಸಂಪೂರ್ಣ ಹೊಟೇಲ್ಸ್‌ ಪ್ರೈವೇಟ್‌ ಲಿಮಿಟೆಡ್‌).

ಯಕ್ಷಧ್ರುವ ಪಟ್ಲ ಸಂಭ್ರಮಕ್ಕೆ ಸಂಪೂರ್ಣ ಮಹಾರಾಷ್ಟ್ರದ ಜನತೆ ನೀಡಿರುವ ಸ್ಪಂದನೆಗೆ ಕೃತಜ್ಞತೆಗಳು. ಯಕ್ಷಗಾನ ಕಲಾವಿದರ ಬದುಕಿನ ಒಳಿತಿಗಾಗಿ ಜಾತಿ, ಮತ, ಭೇದ-ಭಾವ ಇಲ್ಲದೆ ಎಲ್ಲರೂ ಒಂದಾಗಿ ಒಂದೇ ವೇದಿಕೆಯಡಿಯಲ್ಲಿ ಸೇರಿ ಆಯೋಜಿಸಲ್ಪಟ್ಟ ಈ ಸಂಭ್ರಮವು ಮಾದರಿ ಕಾರ್ಯಕ್ರಮವಾಗಿ ಯಶಸ್ವಿಯಾಗಿರುವುದಕ್ಕೆ ಎಲ್ಲರನ್ನು ಅಭಿಂದಿಸುತ್ತಿದ್ದೇನೆ. ದಾನಿಗಳ ಪ್ರೋತ್ಸಾಹ, ಸಹಕಾರ ಈ ಸಂಸ್ಥೆಯ ಮೇಲೆ ಸದಾಯಿರಲಿ 
– ಐಕಳ ಹರೀಶ್‌ ಶೆಟ್ಟಿ (ಗೌರವಾಧ್ಯಕ್ಷ : ಯಕ್ಷಧ್ರುವ ಪಟ್ಲ ಫೌಂಡೇಷನ್‌ 
ಮುಂಬಯಿ ಘಟಕ).

Advertisement

Udayavani is now on Telegram. Click here to join our channel and stay updated with the latest news.

Next