ಪುಣೆ: ಹೊರನಾಡಾದ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯು ಮಾಡುತ್ತಿರುವ ಯಕ್ಷಗಾನದ ಕಲಾ ಸೇವೆ ಅನನ್ಯವಾಗಿದೆ. ಇದನ್ನು ಮನಗಂಡು ಪುಣೆಯಲ್ಲಿ ಪ್ರಥಮವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಹೊರನಾಡಿನಲ್ಲಿ ಯಕ್ಷಗಾನದ ರಕ್ಷಣೆ, ಪ್ರಸಾರ ಹಾಗೂ ಗುಣಮಟ್ಟದ ಹೆಚ್ಚಳಕ್ಕೆ ಆದ್ಯತೆ ನೀಡಿ ಯಕ್ಷಗಾನವನ್ನು ಬೆಳೆಸುವ ಉದ್ದೇಶದಿಂದ ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳಷ್ಟು ಸಂತೋಷವನ್ನು ನೀಡುತ್ತಿದೆ. ಪುಣೆಯಲ್ಲಿ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಅಕಾಡೆಮಿಯ ವತಿಯಿಂದ ಪೂರ್ಣವಾದ ಬೆಂಬಲವನ್ನು ನೀಡುತ್ತೇವೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ಅಯ್ಯಪ್ಪ ಯಕ್ಷಗಾನ ಮಂಡಳಿಗೆ ನೀಡಬಯಸುತ್ತೇನೆ ಹಾಗೂ ನನ್ನ ಅಧಿಕಾರಾವಧಿಯಲ್ಲಿ ವರ್ಷಕ್ಕೊಂದು ಕಾರ್ಯಕ್ರಮವನ್ನು ಪುಣೆಯಲ್ಲಿ ನಿಮಗೆ ನೀಡಲು ಆಸಕ್ತನಾಗಿದ್ದೇನೆ ಎಂದು ಕರ್ನಾಟಕ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಪ್ರೊ| ಎಂ. ಎ. ಹೆಗಡೆ ನುಡಿದರು.
ಡಿ.23 ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಆಶ್ರಯದಲ್ಲಿ ನಡೆದ ಯಕ್ಷಸಂಭ್ರಮ -2018ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಕನ್ನಡ, ತುಳು ಭಾಷೆಯಲ್ಲದೆ ಇನ್ನಿತರ ಭಾಷೆಗಳಲ್ಲೂ ಯಕ್ಷಗಾನ ಪ್ರಸಂಗವನ್ನು ಭಾಷಾಂತರಿಸಿ ಪ್ರಯೋಗವನ್ನು ಮಾಡುವ ಉದ್ದೇಶ ಅಕಾಡೆಮಿಯ ಮುಂದಿದ್ದು ಮುಖ್ಯವಾಗಿ ಕನ್ನಡದಿಂದ ಮರಾಠಿ ಭಾಷೆಗೆ ಪ್ರಸಂಗವನ್ನು ಭಾಷಾಂತರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಯಕ್ಷಗಾನದ ಬೆಳವಣಿಗೆ ಸಾಧ್ಯವಾಗ ಬಹುದು ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರು ಮಾತನಾಡಿ ಯಕ್ಷಗಾನ ಕಲೆಯಿಂದ ಕನ್ನಡ ಭಾಷೆ, ಸಂಸ್ಕೃತಿ ಶ್ರೀಮಂತಗೊಂಡಿದೆ. ನಮ್ಮ ಮಕ್ಕಳಿಗೆ ಗತಜೀವನದ ಭವ್ಯ ಪರಂಪರೆಯ ಸಾರ, ಆಧ್ಯಾತ್ಮಿಕ, ಕೌಟುಂಬಿಕ ಜೀವನದ ಮಹತ್ವ, ಧಾರ್ಮಿಕ ನಂಬಿಕೆಗಳ ಬಗ್ಗೆ ತಿಳಿಸುವಂತಹ ಏಕೈಕ ಮಾಧ್ಯಮವೆಂದರೆ ಅದು ಯಕ್ಷಗಾನವಾಗಿದೆ. ಆದುದರಿಂದ ಯಕ್ಷಗಾನ ಕಳೆಯ ಬಗ್ಗೆ ನಾವು ಅಭಿಮಾನ ಬೆಳೆಸಿಕೊಂಡು ಅದನ್ನು ಉಳಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕಾಗಿದೆ. ಪುಣೆಯ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾಸೇವೆ ಸ್ತುತ್ಯರ್ಹವಾಗಿದೆ ಎಂದರು.
ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ಮಾತನಾಡಿ ಯಕ್ಷಗಾನವೆಂದರೆ ಮನುಷ್ಯನನ್ನು ಮೃಗತ್ವದಿಂದ ಮನುಷ್ಯತ್ವ ದೆಡೆಗೆ ಒಯ್ಯುವ ನವರಸಭರಿತ ಸರ್ವಾಂಗ ಸುಂದರವಾದ, ಜನರ ಧರ್ಮ, ನೀತಿ ಮಟ್ಟವನ್ನು ಸುಧಾರಿಸುವ, ಭಾಷೆಯ ಸೊಗಡನ್ನು ಶ್ರೀಮಂತಗೊಳಿಸುವ ಪರಿಪೂರ್ಣ ಕಲೆಯಾಗಿದೆ. ಈ ಕಲೆಯನ್ನು ಉಳಿಸುವಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಅಯ್ಯಪ್ಪ ಯಕ್ಷಗಾನ ಮಂಡಳಿಯ ಸರ್ವ ಕಲಾವಿದರು ಅಭಿನಂದನಾರ್ಹರು. ಅವರಿಗೆ ಯೋಗ್ಯವಾದ ಪ್ರೋತ್ಸಾಹವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಪುಣೆ ಕನ್ನಡ ಸಂಘದ ವತಿಯಿಂದ ಪೂರ್ಣ ರೀತಿಯ ಸಹಕಾರ ನೀಡಲಾಗುವುದು ಎಂದರು.
ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ ಅವರು, ಮಾತನಾಡಿ ಯಕ್ಷಗಾನವನ್ನು ಉಳಿಸುವುದೆಂದರೆ ಹೊರಗಿನಿಂದ ಕಲಾವಿದರನ್ನು ತರಿಸಿ ಪ್ರದರ್ಶನ ನೀಡಿದ ಮಾತ್ರಕ್ಕೆ ಯಕ್ಷಗಾನದ ಉಳಿವು ಸಾಧ್ಯವಿಲ್ಲ. ಅದಕ್ಕಾಗಿ ನಮ್ಮ ಮಂಡಳಿಯ ಕಲಾವಿದರು ಬಹಳಷ್ಟು ಶ್ರಮವಹಿಸಿ ತಮ್ಮ ಸಮಯವನ್ನು ನೀಡಿ ಆಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಇದೀಗ ನಮ್ಮ ನಿರೀಕ್ಷೆಗಿಂತಲೂ ಮೀರಿ ಕಲಾವಿದರು ತಯಾರುಗೊಂಡಿರುವುದು ಬಹಳಷ್ಟು ಸಾರ್ಥಕದ ಭಾವವನ್ನು ತರಿಸಿದೆ. ನಮ್ಮಲ್ಲಿ ಆರ್ಥಿಕ ಶ್ರೀಮಂತಿಕೆ ಇಲ್ಲದಿದ್ದರೂ ಕಲಾಶ್ರೀಮಂತಿಕೆ ಹೊಂದಿದ ಕಲಾವಿದರಿ¨ªಾರೆ. ಪ್ರಾಮಾಣಿಕವಾಗಿ ತೊಡಗಿಸಿಕೊಂಡ ನಮ್ಮ ಕಲಾಸೇವೆಗೆ ಪುಣೆಯ ಹೃದಯವಂತ ಕಲಾಪೋಷಕರು ಸ್ವಯಂಸ್ಫೂರ್ತಿಯಿಂದ ಸಹಕಾರ ನೀಡಿ ಬೆಂಬಲಿಸುತ್ತಿರುವುದು ನಮ್ಮ ನಿಸ್ವಾರ್ಥ ಸೇವೆಗೆ ಸಂದ ಗೌರವವಾಗಿದೆ. ಪುಣೆಯ ವಿವಿಧ ಸಂಘಸಂಸ್ಥೆಗಳು ಒಂದೊಂದು ಅವಕಾಶ ನೀಡಿ ಬೆಂಬಲಿಸಿದರೆ ಯಕ್ಷಗಾನ ಕಲೆಯನ್ನು ವಿಪುಲವಾಗಿ ಬೆಳೆಯಲು ತಮ್ಮ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದರು.
ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ಶುಭ ಹಾರೈಸಿ ಸಂಘವು ಮಾಡುತ್ತಿರುವ ಕಲಾಸೇವೆಗೆ ತಮ್ಮಿಂದಾದ ನೆರವು ನೀಡುತ್ತೇನೆ ಎಂದು ತಿಳಿಸಿದರು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತುಳುಕನ್ನಡಿಗರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ, ನಾಟ್ಯಗುರು ಮದಂಗಲ್ಲು ಆನಂದ್ ಭಟ್ ಪ್ರಾಸ್ತಾವಿಕ ನುಡಿಯಲ್ಲಿ ಪುಣೆಯಲ್ಲಿ ಯಕ್ಷಗಾನ ಕಲೆಗೆ ಮೊದಲು ವೇದಿಕೆ ಒದಗಿಸಿದವರು ಪುಣೆಯ ಕನ್ನಡ ಸಂಘವಾಗಿದೆ.ಕಲೆಯನ್ನು ಉಳಿಸುವಲ್ಲಿ, ಬೆಳೆಸುವಲ್ಲಿ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಅತಿಥಿಗಳು ಮತ್ತು ಗಣ್ಯರನ್ನು ಶಾಲು ಹೊದೆಸಿ ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ಸಂಘದ ಕಲಾವಿದರಾದ ಸುಕೇಶ್ ಶೆಟ್ಟಿ ಎಣ್ಣೆಹೊಳೆ ಸ್ವಾಗತಿಸಿದರು. ಸಂಘದ ಸದಸ್ಯರಾದ ವಿಕೇಶ್ ರೈ ಶೇಣಿ ಕಾರ್ಯಕ್ರಮ ನಿರೂಪಿಸಿ ಕಲಾವಿದೆ ನಯನಾ ಸಿ. ಶೆಟ್ಟಿ ವಂದಿಸಿದರು.
ಯಕ್ಷಗಾನ ಉಳಿಸಲು ಹೊರಟಿರುವುದು ಹೆಗ್ಗಳಿಕೆ: ಸಂತೋಷ್ ಶೆಟ್ಟಿ
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಮಾತನಾಡಿ ಹೊರನಾಡಿನಲ್ಲಿ ಬಂದು ಒಬ್ಬ ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಯಕ್ಷಗಾನ ಕಲೆಯೇ ನನಗೆ ಪ್ರೇರಕ ಶಕ್ತಿಯಾಗಿದೆ. ನಾಡಿನ ಕಲೆ, ಸಂಸ್ಕೃತಿ, ಸಂಸ್ಕಾರಗಳು ನಮ್ಮ ಜೀವನದ ಸಾರ್ಥಕತೆಗೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪುಣೆಯ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯು ಬಹಳ ಅರ್ಥಪೂರ್ಣವಾದ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ. ಪುಣೆಯಲ್ಲಿ ಬಹಳಷ್ಟು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿರುವುದನ್ನು ನಾವು ಕಾಣಬಹುದು. ಆದರೆ ಯಾವುದೇ ಆಡಂಬರವಿಲ್ಲದೆ ಯಕ್ಷಗಾನದ ತರಬೇತಿಯನ್ನು ನೀಡಿ ಹೊಸ ಹೊಸ ಕಲಾವಿದರನ್ನು ತಯಾರುಗೊಳಿಸಿ ನಿಜಾರ್ಥದಲ್ಲಿ ಯಕ್ಷಗಾನವನ್ನು ಉಳಿಸುವ ಕಾಯಕದಲ್ಲಿ ತೊಡಗಿಕೊಂಡಿರುವುದು ಈ ಸಂಘದ ಹೆಗ್ಗಳಿಕೆಯಾಗಿದೆ. ಇದಕ್ಕೆ ಪೂರಕವಾಗಿ ಪುಣೆ ತುಳುಕೂಟವೂ ಯಕ್ಷಗಾನದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಈ ಮಂಡಳಿ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ನಾವೆಲ್ಲರೂ ಸಂಘದ ಕಾರ್ಯಕ್ಕೆ ಬೆಂಬಲಿಸಬೇಕಾಗಿದೆ ಎಂದು ನುಡಿದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು