Advertisement
ಪ್ರತಿಭೆಯ ಜಾಡು ಹಿಡಿದು ಅವಕಾಶಗಳು ಅಟ್ಟಿಸಿಕೊಂಡು ಬರುತ್ತವೆ. ಹಾಗಾಗಿ ಭಾಸ್ಕರರಿಗೆ ಯಕ್ಷಗಾನ, ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಯನ್ನು ಊರಲು ಸಾಧ್ಯವಾಯಿತು. ಬದುಕಿನಲ್ಲಿ ಹೊಸ ಹೊಸ ಭಾಸ್ಕರನನ್ನು ನೋಡುವ ಭಾಗ್ಯ ಪ್ರಾಪ್ತವಾಯಿತು.ತಾಳಮದ್ದಳೆ ಅರ್ಥದಾರಿ, ವೇಷಧಾರಿ, ಪ್ರವಚನಕಾರ, ಶಿಕ್ಷಕ, ಸಂಘಟಕ, ಲೇಖಕ, ಕವಿ, ಚಿಂತಕ, ಸಂಶೋಧಕ, ಬೋಧಕ, ಕಲಾ ಪ್ರತಿಪಾದಕ, ವಾಹಿನಿಗಳಲ್ಲಿ ನಿರ್ವಾಹಕ, ಕಮ್ಮಟ-ಕಾರ್ಯಾಗಾರಗಳ ನಿರ್ದೇಶಕ. ಇವೆಲ್ಲವೂ ಒಬ್ಬನಲ್ಲಿ ಮಿಳಿತವಾಗಿರುವುದು ಅಪರೂಪ, ಅನನ್ಯ. ಈ ಮಿಳಿತದೊಳಗಿದೆ ಯಶದ ಸರ್ವ ದರ್ಶನ.
Related Articles
Advertisement
ಭಾಸ್ಕರ ರೈ ಕುಕ್ಕುವಳ್ಳಿಯವರ ಕಲಾಯಾನವನ್ನು ಸೀಮಿತ ಅಕ್ಷರಪುಂಜದಲ್ಲಿ ಹಿಡಿದಿಡಲು ಕಷ್ಟ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದಾಗ ಮಂಗಳೂರಿನಲ್ಲಿ (2004) ಪ್ರಥಮ ಬಾರಿಗೆ ಮಹಿಳಾ ಯಕ್ಷಗಾನ ಸಮ್ಮೇಳನ “ಯಕ್ಷಪ್ರಮೀಳಾ’ ಸಂಘಟಿಸಿದ್ದರು. ನೆನಪು ಸಂಚಿಕೆ ಪ್ರಕಾಶಿಸಿದ್ದರು. ಜಾಲತಾಣದಲ್ಲಿ ಜಾಲಾಡಿದಾಗ ಕೈಮುಗಿದ ಭಂಗಿಯ ಯಕ್ಷಗಾನದ ಕಿರೀಟ ವೇಷವೊಂದು ಅಲ್ಲಲ್ಲಿ ಕೈಗೆಟಕುತ್ತದೆ. ಅದು ಭಾಸ್ಕರ ರೈ ಅವರದ್ದೆಂದು ಬಹುತೇಕರಿಗೆ ತಿಳಿದಿಲ್ಲ. ವಿವಿಧ ಅಂತಾರಾಷ್ಟ್ರೀಯ ಕಂಪೆನಿಗಳು, ಬ್ಯಾಂಕ್‌ಗಳು, ಸಂಘಸಂಸ್ಥೆಗಳ ಜಾಹೀರಾತು ಪುಟದಲ್ಲಿ ಈ ಚಿತ್ರ ಹರಿದಾಡುತ್ತಿದೆ.
ನೂರಾರು ಸಮ್ಮಾನಗಳು, ಪ್ರಶಸ್ತಿಗಳು, ಪಡೆದ ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ಈಗ ಯಕ್ಷರಕ್ಷಾ ಪ್ರಶಸ್ತಿಯ ಬಾಗಿನ. ಅಜೆಕಾರು ಕಲಾಭಿಮಾನಿ ಬಳಗವು ಪ್ರಶಸ್ತಿಯನ್ನು ಪ್ರದಾನಿಸುತ್ತಿದೆ. ಯಕ್ಷಗಾನದ ಸೊಬಗನ್ನು, ಬೆರಗನ್ನು ಮುಂಬಯಿ ನಗರದಲ್ಲಿ ಅನಾವರಣಗೊಳಿಸುವ ಈ ಬಳಗದ ಕಲಾಪ್ರೀತಿ, ಕಲಾವಿದರ ಪ್ರೀತಿ ಶ್ಲಾಘನೀಯ. ಆಪ್ತ ಕುಕ್ಕುವಳ್ಳಿಯವರಿಗೆ ಅಭಿನಂದನೆ, ಅಭಿವಂದನೆ.
ನಾರಾಯಣ ಕೆ.ಪಿ.