ಮುಂಡರಗಿ: ಸರ್ಕಾರಿ ಶಾಲೆಗಳು ಎಂದರೆ ಮೂಗುಮುರಿಯುವವರೇ ಹೆಚ್ಚು. ಇದಕ್ಕೆ ತಾಲೂಕಿನ ಯಕ್ಲಾಸಪುರ ಗ್ರಾಮದ ಪಾರ್ವತೆವ್ವ ಹಿರೇಬಸಪ್ಪ ಹಳೇಮನಿ ಸರ್ಕಾರಿ ಪ್ರೌಢಶಾಲೆ ಅಪವಾದ. ಇಲ್ಲಿನ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳನ್ನೂ ನಾಚುವಂತಿದೆ. ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ತರಬೇತಿ, ಹಾಜರಾತಿಯಲ್ಲಿ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಅದರೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಕಳೆದ ಮೂರು ವರ್ಷಗಳಿಂದ ನೂರಕ್ಕೆ ನೂರಷ್ಟು ಫಲಿತಾಂಶ ಪಡೆದು ಹ್ಯಾಟ್ರೀಕ್ ಸಾಧನೆ ಮಾಡಿದೆ.
2011-12ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಯ ಶಿಥಿಲಾವವ್ಯವಸ್ಥೆಯಿಂದ ಕೂಡಿದ ಕೊಠಡಿಯಲ್ಲಿ ಪ್ರಭಾರಿ ಮುಖ್ಯಶಿಕ್ಷಕ ದುರ್ಗಾಪ್ರಸಾದ ಡಿ. ಅವರು ಕೇವಲ 36 ವಿದ್ಯಾರ್ಥಿಗಳೊಂದಿಗೆ 9ನೇ ತರಗತಿಯನ್ನು ಪ್ರಾರಂಭಿಸಿದರು. ನಂತರ ಗ್ರಾಮದ ಶಿಕ್ಷಕರ ವಸತಿ ನಿಲಯಕ್ಕೆ ಈ ಶಾಲೆಯು ಸ್ಥಳಾಂತರಗೊಂಡು, ಐದು ಕೊಠಡಿಗಳಲ್ಲಿ ಶಾಲೆಯು ನಡೆಯುತ್ತಿದೆ.
ಶಿಕ್ಷಕರು ಪ್ರತಿದಿನ ಶಾಲೆಗೆ ನಿಗದಿತ ಅವಧಿಗಿಂತಲೂ ಮೊದಲೇ ಹಾಜರಾಗುತ್ತಾರೆ. ಬೆಳಗ್ಗೆ 9ಕ್ಕೆ ಶಾಲೆಗೆ ಹಾಜರಾಗುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಜೆ 6:30ಕ್ಕೆ ವಾಪಸ್ಸಾಗುತ್ತಾರೆ. ಶನಿವಾರವಂತೂ ಮಧ್ಯಾಹ್ನ 1:30ರ ವರೆಗೂ ಇರುತ್ತಾರೆ. ರವಿವಾರ ಇಲ್ಲಿ ಹೆಚ್ಚುವರಿ ತರಗತಿ ನಡೆಯುತ್ತದೆ. ಶಾಲೆಯ ಆವರಣದಲ್ಲಿ ಎರಡು ಜೈವಿಕ ತ್ಯಾಜ್ಯ ನಿರ್ವಹಣಾ ಘಟಕಗಳು, ಕೈತೋಟ, 500 ವಿವಿಧ ತಳಿಯ ಗಿಡ ನೆಟ್ಟು ಪರಿಸರ ಪ್ರೇಮ ಮೆರೆಯಲಾಗಿದೆ.
ಆವರಣದಲ್ಲಿ ಎರೆ ಹುಳು ಸಾಕಾಣಿಕೆ ಮಾಡಿ ಗೊಬ್ಬರ ತಯಾರಿಸಿ ತರಕಾರಿ ಬೆಳೆಯಲು ಉಪಯೋಗಿಸಲಾಗುತ್ತಿದೆ. ಕೈತೋಟದಲ್ಲಿ ಮೆಂತೆ, ಕೋತಂಬರಿ, ರಾಜಗಿರಿ, ಫಾಲಕ್ ಸೊಪ್ಪು ಬೆಳೆದು ಸಾಂಬಾರಿಗೆ ಬಳಸಲಾಗುತ್ತಿದೆ. ಇದರೊಂದಿಗೆ ನುಗ್ಗೆಕಾಯಿ, ಟೊಮ್ಯಾಟೋ, ಗಜ್ಜರಿ, ಹಾಗಲಕಾಯಿ, ಸೌತೆಕಾಯಿ, ಬದನೆಕಾಯಿಗಳನ್ನೂ ಬೆಳೆಯಲಾಗುತ್ತಿದೆ. ಅಳ್ನಾವರದಿಂದ ಮಾವು, ಸೀತಾಫಲ, ಹಲಸು, ಮೊಸಂಬಿ, ಪೇರಲ, ವಿಶೇಷ ಹುಣಸೆ ಸಸಿಗಳನ್ನು ನೆಡಲಾಗಿದೆ ಎನ್ನುತ್ತಿದ್ದಾರೆ ಮುಖ್ಯಶಿಕ್ಷಕ ದುರ್ಗಾಪ್ರಸಾದ. ಡಿ. ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟದ ನಿಯಮದ ಜೊತೆಗೆ ಮಕ್ಕಳಿಗೆ ಪ್ರತಿ ಶನಿವಾರ ಲಘು ಉಪಾಹಾರವಾಗಿ ಚಪಾತಿ, ಉಪ್ಪಿಟ್ಟು, ದೋಸೆ, ಇಡ್ಲಿ, ಪುರಿ ಉಳ್ಳಾಗಡ್ಡಿ ಚಟ್ನಿ, ಶಿರಾ ಇವುಗಳನ್ನು ನೀಡಲಾಗುತ್ತದೆ. ವಿಶೇಷ ದಿನವಾದ ಅಮಾವಾಸ್ಯೆಯ ನೆಪದಲ್ಲಿ ಮಕ್ಕಳು ಶಾಲೆಗೆ ಗೈರು ಹಾಜರಾಗಬಾರದೆಂಬ ಉದ್ದೇಶದಿಂದ ಪ್ರತಿ ಅಮಾವಾಸ್ಯೆ-ಹುಣ್ಣಿಮೆ ದಿನಗಳಲ್ಲಿ ಹೋಳಿಗೆ ಊಟ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಬಡಿಸಲಾಗುತ್ತಿದೆ.
ಜಿಲ್ಲೆಯ ಇತಿಹಾಸದಲ್ಲಿಯೇ ಸತತ 5 ವರ್ಷಗಳ ಕಾಲ ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶದ ಸಾಧನೆ ಮಾಡಿದ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಎಲ್ಲ ವಿದ್ಯಾರ್ಥಿಗಳೂ ಪ್ರಥಮ ವರ್ಗದಲ್ಲಿ ಪಾಸಾಗುತ್ತಿರುವುದು ಶಿಕ್ಷಕರ ಮಾರ್ಗದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರೊಂದಿಗೆ ವಿಜ್ಞಾನ ಮಾದರಿ ತಯಾರಿಕೆಯಲ್ಲೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಒಟ್ಟಾರೆ ಈ ಶಾಲೆ ಎಲ್ಲ ರೀತಿಯಲ್ಲೂ ಮಾದರಿ ಶಾಲೆಯಾಗಿದೆ.
ಅಭಿವೃದ್ಧಿಗಾಗಿ ಸಂಬಳ
ಶಿಕ್ಷಕರು ಶಾಲೆಯ ಅಭಿವೃದ್ಧಿಗಾಗಿ ಪ್ರತಿ ತಿಂಗಳ ಸಂಬಳದಿಂದ ಕನಿಷ್ಠ 300 ರೂ. ಎತ್ತಿಡುತ್ತಿದ್ದಾರೆ. ಅಲ್ಲದೇ ಇನ್ಫೋಸಿಸ್ ಸಂಸ್ಥೆಯು ನಾಲ್ಕು ಕಂಪ್ಯೂಟರ್, ಎಸ್.ಆರ್. ಪ್ರತಿಷ್ಠಾನದಿಂದ ಸ್ಮಾರ್ಟ್‌ಕ್ಲಾಸ್ ಒದಗಿಸಿಕೊಡಲಾಗಿದೆ. ಗ್ರಾಮದ ಜನತೆ ಶಾಲೆಯ ಬಹುತೇಕ ಕಾರ್ಯಗಳಿಗೆ ಸಹಕರಿಸುತ್ತಿದ್ದಾರೆ. ಶೈಕ್ಷಣಿಕ ವರ್ಷದಲ್ಲಿ 115 ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಈ ಸರಕಾರಿ ಶಾಲೆಯಲ್ಲಿ ಶಿಕ್ಷಕರಿಂದ ನಮಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಬದುಕುವ ಶಿಕ್ಷಣ ದೊರೆಕಿಸಿ ಕೊಡುವಲ್ಲಿ ಶಿಕ್ಷಕರ ಪಾತ್ರವು ಹಿರಿದಾಗಿದೆ.
ಸಾವಿತ್ರಿ ಚವಡಕಿ, ವಿದ್ಯಾರ್ಥಿನಿ