ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಯಜಮಾನ’ಕ್ಕೆ ಕರ್ನಾಟಕದಾದ್ಯಂತ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ತಮ್ಮ ನೆಚ್ಚಿನ ‘ಯಜಮಾನ’ನನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದರು. ಚಿತ್ರ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಲಿಲ್ಲ. ಗಾಂಧಿನಗರ ಸೇರಿದಂತೆ ಬೆಂಗಳೂರು ಮತ್ತು ರಾಜ್ಯದ ಬಹುತೇಕ ಎಲ್ಲಾ ಥಿಯೇಟರ್ ಗಳಲ್ಲಿ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ‘ಯಜಮಾನ’ನ ಹವಾ ಮೊದಲ ದಿನವೇ ಜೋರಾಗಿತ್ತು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಥಿಯೇಟರ್ ಒಂದರಲ್ಲಿ ದರ್ಶನ್ ಅವರ 50 ಕಟೌಟ್ ಗಳನ್ನು ಅವರ ಅಭಿಮಾನಿಗಳು ಹಾಕಿಸಿದ್ದು ವಿಶೇಷವಾಗಿತ್ತು. ‘ಯಜಮಾನ’ ದರ್ಶನ್ ಅಭಿನಯದ 50ನೇ ಚಿತ್ರವಾಗಿರುವ ಕಾರಣ ‘ಡಿ’ ಬಾಸ್ ಗೆ ಅಭಿಮಾನಿಗಳು ನೀಡಿದ ವಿಶೇಷ ಉಡುಗೊರೆ ಇದಾಗಿತ್ತು. ಇನ್ನು ಕೆಲವು ಚಿತ್ರಮಂದಿರಗಳ ಎದುರು ‘ಡಿ’ಬಾಸ್ ಅವರ ಲೇಡಿ ಫ್ಯಾನ್ಸ್ ರಂಗೋಲಿ ಬಿಡಿಸುವ ಮೂಲಕ ತಮ್ಮ ನೆಚ್ಚಿನ ಚಿತ್ರಕ್ಕೆ ಶುಭವನ್ನು ಹಾರೈಸಿದರು. ಫರ್ಸ್ಟ್ ಶೋ ಸಮಯದಲ್ಲಿ ದರ್ಶನ್ ಅಭಿಮಾನಿಗಳ ಹರ್ಷೋದ್ಘಾರ ಜೋರಾಗಿಯೇ ಇತ್ತು.
‘ಯಜಮಾನ’ ಚಿತ್ರವು ಪ್ರೀ ಬುಕ್ಕಿಂಗ್ ನಲ್ಲೂ ವಿಶೇಷ ದಾಖಲೆಯನ್ನು ಬರೆದಂತಾಗಿದೆ. ದೇಶಾದ್ಯಂತ ಕನ್ನಡ ಭಾಷೆಯಲ್ಲೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಇನ್ನೊಂದು ಸ್ಪೆಷಾಲಿಟಿ. ವಿದೇಶಗಳಲ್ಲೂ ‘ಯಜಮಾನ’ನಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದು ಪ್ರೀ ಬುಕ್ಕಿಂಗ್ ಮೂಲಕ ಸಾಬೀತಾಗೀದೆ.
ಒಟ್ಟಿನಲ್ಲಿ ಸರಿಸುಮಾರು ಒಂದೂವರೆ ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳಲು ‘ಡಿ’ ಬಾಸ್ ಅಭಿಮಾನಿಗಳು ರಾಜ್ಯಾದ್ಯಂತ ಥಿಯೇಟರ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಎದುರು ಸಾಲುಗಟ್ಟಿ ನಿಂತಿರುವುದು ದರ್ಶನ್ ಅವರ ಫ್ಯಾನ್ ಬೇಸ್ ನ ನಿಜ ಶಕ್ತಿಯನ್ನು ಪರಿಚಯಿಸಿದಂತಿತ್ತು. ಒಂದೆಡೆ ತನ್ನ ನಟನೆಯ ಯಜಮಾನ ಚಿತ್ರ ಬಿಡುಗಡೆಗೊಂಡಿದ್ದರೆ ಇತ್ತ ದರ್ಶನ್ ಅವರು ತನ್ನ Wild Life ಛಾಯಾಚಿತ್ರಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಈ ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟದಿಂದ ಸಂಗ್ರಹಿಸಲಾಗುವ ಮೊತ್ತವನ್ನು ದರ್ಶನ್ ಅವರು ಅರಣ್ಯ ಪಾಲಕರ ಕುಟುಂಬಗಳಿಗೆ ನೀಡಲಿದ್ದಾರೆ.